ಸಚಿನ್ ತೆಂಡೂಲ್ಕರ್ ಅವರ ವೃತ್ತಿಜೀವನದ 25 ಪ್ರಮುಖ ಬ್ಯಾಟ್‌ಗಳನ್ನು ಮುಂಬೈ ವಾಂಖೆಡೆ ಸ್ಟೇಡಿಯಂನ MCA ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಈ 'ಬ್ಯಾಟೋಗ್ರಫಿ' ಸಂಗ್ರಹದಲ್ಲಿ ಅವರ ಮೊದಲ ಬ್ಯಾಟ್‌ನಿಂದ ಕೊನೆಯ ಪಂದ್ಯದವರೆಗೆ ಬಳಸಿದ ಬ್ಯಾಟ್‌ಗಳಿವೆ. ಕನ್ನಡಿಗ ಸುನೀಲ್ ಜೋಶಿಗೆ ತಂದಿದ್ದ ಬ್ಯಾಟ್‌ ಹೇಗೆ ಸಚಿನ್ ಪಾಲಾಯಿತು ಎಂಬ ರೋಚಕ ಕಥೆಯೂ ಇಲ್ಲಿದೆ.

ಬೆಂಗಳೂರು(ನ.17): ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ವೃತ್ತಿಜೀವನದ ಪ್ರತಿಯೊಂದು ಪ್ರಮುಖ ಹಂತಕ್ಕೂ ಒಂದೊಂದು ಬ್ಯಾಟ್‌ ಸಾಕ್ಷಿಯಾಗಿದೆ. ಬಾಲ್ಯದಲ್ಲಿ ಬಳಸಿದ ಮೊದಲ ಬ್ಯಾಟ್‌ನಿಂದ ಹಿಡಿದು ತಮ್ಮ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಆಡಿದ ಬ್ಯಾಟ್‌ವರೆಗೆ, ಅವರ ಕ್ರಿಕೆಟ್‌ ಬದುಕಿನ ಅಮೂಲ್ಯ ನೆನಪುಗಳನ್ನು ಹೊತ್ತ 25 ಬ್ಯಾಟ್‌ಗಳು ಇದೀಗ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿರುವ ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ (MCA)ನ ಶರದ್‌ ಪವಾರ್‌ ಕ್ರಿಕೆಟ್‌ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ.

‘ಬ್ಯಾಟೋಗ್ರಫಿ’ (Batography) ಎಂಬ ಹೆಸರಿನ ಈ ವಿಶೇಷ ವಿಭಾಗವನ್ನು ಸಚಿನ್‌ ತೆಂಡೂಲ್ಕರ್‌ ಸೋಮವಾರ ಸಂಜೆ ಅನಾವರಣಗೊಳಿಸಿದ್ದಾರೆ. 1978ರಿಂದ 2013ರವರೆಗಿನ ಅವರ ಕ್ರಿಕೆಟ್‌ ಪಯಣವನ್ನು ಈ 25 ಬ್ಯಾಟ್‌ಗಳ ಮೂಲಕ ಕಟ್ಟಿಕೊಡಲಾಗಿದೆ. ಐದನೇ ವಯಸ್ಸಿನಲ್ಲಿ ಬಳಸಿದ ಮೊದಲ ಬ್ಯಾಟ್‌ನಿಂದ ಆರಂಭವಾಗುವ ಈ ಸಂಗ್ರಹ, ಅವರ ಕೊನೆಯ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಬಳಸಿದ ಬ್ಯಾಟ್‌ನೊಂದಿಗೆ ಅಂತ್ಯಗೊಳ್ಳುತ್ತದೆ.

ಕನ್ನಡಿಗ ಸುನೀಲ್‌ ಜೋಶಿಗೆಂದು ತಂದಿದ್ದ ಬ್ಯಾಟ್‌ ಸಚಿನ್‌ ಪಾಲಾಗಿದ್ದು ಹೇಗೆ?

ಸಚಿನ್‌ ಅವರ 25 ಬ್ಯಾಟ್‌ಗಳ ಪೈಕಿ 20ನೇ ಬ್ಯಾಟ್‌ಗೆ ‘ದಿ ಸೂಪರ್‌ಬ್ಯಾಟ್‌’ ಎಂಬ ಹೆಸರಿಡಲಾಗಿದೆ. 2009ರಿಂದ 2011ರ ಅವಧಿಯಲ್ಲಿ ಅವರು ಈ ಬ್ಯಾಟ್‌ ಬಳಸಿದ್ದರು. ಇದೇ ಬ್ಯಾಟ್‌ನಿಂದ ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 175 ರನ್‌ ಸಿಡಿಸಿದ್ದರು. ಅಲ್ಲದೆ, ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪುರುಷರ ಏಕದಿನ ಕ್ರಿಕೆಟ್‌ನ ಮೊದಲ ದ್ವಿಶತಕ ದಾಖಲಿಸಿದ್ದರು.

ಆದರೆ, ಈ ಬ್ಯಾಟ್‌ ಮೂಲತಃ ಸಚಿನ್‌ ಅವರಿಗಾಗಿ ತಯಾರಿಸಿದ್ದಲ್ಲ. ಭಾರತದ ಮಾಜಿ ಸ್ಪಿನ್ನರ್‌ ಹಾಗೂ ಕೆಳಕ್ರಮಾಂಕದ ಬ್ಯಾಟರ್‌ ಸುನೀಲ್‌ ಜೋಶಿ ಅವರಿಗಾಗಿ ತರಿಸಲಾಗಿತ್ತು. ಆ ಬ್ಯಾಟ್‌ ಸಚಿನ್‌ ಪಾಲಿಗೆ ಹೇಗೆ ಬಂತು ಎಂಬುದನ್ನು ಸ್ವತಃ ಮಾಸ್ಟರ್‌ ಬ್ಲಾಸ್ಟರ್‌ ವಿವರಿಸಿದ್ದಾರೆ. “ನಾವು ಮೊಹಾಲಿಯಲ್ಲಿ ಆಡುತ್ತಿದ್ದಾಗ ಬ್ಯಾಟ್‌ ತಯಾರಕ ಸುಮಿತ್‌ ಕೊಹ್ಲಿ ನನಗಾಗಿ ಹಲವು ಬ್ಯಾಟ್‌ಗಳನ್ನು ತಂದಿದ್ದರು. ಅವುಗಳಲ್ಲಿ ಒಂದು ಬ್ಯಾಟ್‌ ಅನ್ನು ಅವರು ಪ್ರತ್ಯೇಕವಾಗಿ ಇಟ್ಟಿದ್ದರು. ನಾನು ಅದರ ಬಗ್ಗೆ ಕೇಳಿದಾಗ, ಅದು ನನ್ನ ರೀತಿಯ ಬ್ಯಾಟ್‌ ಅಲ್ಲ, ಗುಣಮಟ್ಟವೂ ನನ್ನ ಆಯ್ಕೆಗೆ ತಕ್ಕಂತೆ ಇಲ್ಲ. ಸ್ವಲ್ಪ ಉದ್ದವಾಗಿದೆ, ಅದು ಸುನೀಲ್‌ ಜೋಶಿಗಾಗಿ ತಂದಿರುವ ಬ್ಯಾಟ್‌ ಎಂದು ಹೇಳಿದರು.

ಆಸಕ್ತಿಯಿಂದ ನಾನು ಆ ಬ್ಯಾಟ್‌ ತೆಗೆದುಕೊಂಡು ಚೆಂಡನ್ನು ಹೊಡೆದು ನೋಡಿದೆ. ಚೆಂಡು ನೇರವಾಗಿ ಹಾರಿ ಮೇಲ್ಛಾವಣಿಗೆ ತಾಗಿತು. ಆಗ ನಾನು ಜೋಶಿಗೆ ಎರಡು ಹೆಚ್ಚುವರಿ ಬ್ಯಾಟ್‌ಗಳನ್ನು ಕೊಡುತ್ತೇನೆ, ಆದರೆ ಅವರಿಗಾಗಿ ತಂದಿರುವ ಈ ಬ್ಯಾಟ್‌ ನನಗೆ ಬೇಕು ಎಂದು ಹೇಳಿದೆ. ಕೆಳಭಾಗವನ್ನು ಕತ್ತರಿಸಿ ಬೇಗ ಕಳುಹಿಸುವಂತೆ ಕೇಳಿಕೊಂಡೆ.

ಮುಂದಿನ ಪಂದ್ಯ ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇತ್ತು. ಸ್ಟೇಡಿಯಂಗೆ ತೆರಳಲು ತಂಡದ ಬಸ್‌ ಹೊರಡುತ್ತಿದ್ದಾಗಲೇ ಬ್ಯಾಟ್‌ ನನ್ನ ಕೈ ಸೇರಿತು. ಹೊಸ ಬ್ಯಾಟ್‌ನೊಂದಿಗೆ ಮೈದಾನಕ್ಕಿಳಿದೆ. ಅದು ನನ್ನ ನೆಚ್ಚಿನ ಬ್ಯಾಟ್‌ ಆಗಿಬಿಟ್ಟಿತು. ನಂತರ ಅದನ್ನು ನಾನೇ ಅಂಟನ್ನು ಬಳಸಿ ಹಲವು ವಿಧಾನಗಳಲ್ಲಿ ದುರಸ್ತಿ ಮಾಡಿಕೊಳ್ಳುತ್ತಿದ್ದೆ” ಎಂದು ಸಚಿನ್‌ ತಮ್ಮ ನೆನಪು ಹಂಚಿಕೊಂಡಿದ್ದಾರೆ.

25 ಬ್ಯಾಟ್‌ಗಳಲ್ಲಿ ಅಡಗಿದೆ ಸಚಿನ್‌ ವೃತ್ತಿಜೀವನದ ಇತಿಹಾಸ

‘ಬ್ಯಾಟೋಗ್ರಫಿ’ ಸಂಗ್ರಹದಲ್ಲಿರುವ ಪ್ರತಿಯೊಂದು ಬ್ಯಾಟ್‌ಗೂ ವಿಶೇಷ ಹಿನ್ನೆಲೆಯಿದೆ. ಸಚಿನ್‌ ಅವರ ಅಕ್ಕ ಸವಿತಾ 1978ರಲ್ಲಿ ಉಡುಗೊರೆಯಾಗಿ ನೀಡಿದ್ದ ಕಾಶ್ಮೀರಿ ವಿಲೋ ಬ್ಯಾಟ್‌ ಈ ಸಂಗ್ರಹದ ಮೊದಲನೆಯದು. 1990ರಲ್ಲಿ ಕೇವಲ 17ನೇ ವಯಸ್ಸಿನಲ್ಲಿ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ನಲ್ಲಿ ತಮ್ಮ ಚೊಚ್ಚಲ ಟೆಸ್ಟ್‌ ಶತಕ ದಾಖಲಿಸಲು ಬಳಸಿದ ಬ್ಯಾಟ್‌ ಕೂಡ ಇಲ್ಲಿದೆ. 1998ರಲ್ಲಿ ಕ್ರಿಕೆಟ್‌ ದಂತಕಥೆ ಡಾನ್‌ ಬ್ರಾಡ್ಮನ್‌ ಉಡುಗೊರೆಯಾಗಿ ನೀಡಿದ್ದ ಬ್ಯಾಟ್‌ ಈ ಸಂಗ್ರಹದ ಮತ್ತೊಂದು ವಿಶೇಷ ಆಕರ್ಷಣೆ.

2003ರ ವಿಶ್ವಕಪ್‌ನಲ್ಲಿ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದಾಗ ಬಳಸಿದ್ದ ಬ್ಯಾಟ್‌ ಹಾಗೂ 2012ರ ಮಾರ್ಚ್‌ 16ರಂದು ಮಿರ್‌ಪುರದಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ 100ನೇ ಅಂತಾರಾಷ್ಟ್ರೀಯ ಶತಕ ದಾಖಲಿಸಿದ ಬ್ಯಾಟ್‌ ಕೂಡ ಪ್ರದರ್ಶನದಲ್ಲಿವೆ.

ಎರಡು ವರ್ಷ ಬ್ಯಾಟ್‌ನಲ್ಲಿ ಸ್ಟಿಕ್ಕರ್‌ ಇಲ್ಲದೆ ಆಡಿದ್ದ ಸಚಿನ್‌!

ಸಚಿನ್‌ ಅವರ ಬ್ಯಾಟ್‌ ಇತಿಹಾಸದಲ್ಲಿನ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದ ಎರಡು ವರ್ಷಗಳ ಅವಧಿಯಲ್ಲಿ, ಅದರಲ್ಲೂ 1996ರ ವಿಶ್ವಕಪ್‌ನ ಸಂಪೂರ್ಣ ಟೂರ್ನಿಯಲ್ಲಿ ಅವರು ಯಾವುದೇ ಬ್ರ್ಯಾಂಡ್‌ ಸ್ಟಿಕ್ಕರ್‌ ಇಲ್ಲದ ಬ್ಯಾಟ್‌ನೊಂದಿಗೆ ಆಡಿದ್ದರು. ತಮಗೆ ಹಲವು ಕಂಪನಿಗಳಿಂದ ಜಾಹೀರಾತು ಒಪ್ಪಂದಗಳ ಪ್ರಸ್ತಾಪ ಬಂದಿದ್ದರೂ, ತಂಬಾಕು ಮತ್ತು ಮದ್ಯದ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡಬಾರದು ಎಂದು ತಾವು ಹಾಗೂ ಕುಟುಂಬದವರು ನಿರ್ಧರಿಸಿದ್ದಾಗಿ ಸಚಿನ್‌ ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಉತ್ತಮ ಫಾರ್ಮ್‌ಗೆ ದೃಷ್ಟಿ ತಾಗಬಾರದು ಎಂಬ ನಂಬಿಕೆಯಿಂದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾ ಬ್ರ್ಯಾಂಡ್‌ನ ಪ್ರಸ್ತಾಪವನ್ನೂ ಅವರು ತಿರಸ್ಕರಿಸಿದ್ದರು.

“1996ರ ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಲ್ಲಿ ನಾನು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದೆ. ಸ್ಟಿಕ್ಕರ್‌ ಇಲ್ಲದ ಬ್ಯಾಟ್‌ನೊಂದಿಗೆ ಉತ್ತಮವಾಗಿ ಆಡುತ್ತಿದ್ದೆ. ಆ ದಿನಗಳಲ್ಲಿ ತಂಡದಲ್ಲಿ ಯಾರಾದರೂ ಪರಿಚಯವಿದ್ದರೆ ಡ್ರೆಸ್ಸಿಂಗ್‌ ರೂಮ್‌ಗೆ ಹೋಗಬಹುದಿತ್ತು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯವೊಂದರಲ್ಲಿ ನಾವು ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದೆವು. ಆಗ ನನ್ನೊಂದಿಗೆ ಈ ಹಿಂದೆ ಮಾತುಕತೆ ನಡೆಸಿದ್ದ ವಿದೇಶಿ ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕರು ಡ್ರೆಸ್ಸಿಂಗ್‌ ರೂಮ್‌ಗೆ ಬಂದು, ‘ನಿಮ್ಮ ಎಲ್ಲ ಷರತ್ತುಗಳಿಗೂ ನಾವು ಒಪ್ಪಿದ್ದೇವೆ. ಈಗಲೇ ನಮ್ಮ ಸ್ಟಿಕ್ಕರ್‌ ಅನ್ನು ಬ್ಯಾಟ್‌ಗೆ ಹಾಕಿಕೊಂಡು ಮೈದಾನಕ್ಕೆ ಹೋಗಿ’ ಎಂದರು.

ಆದರೆ, ನಾನು ನಿರಾಕರಿಸಿದೆ. ‘ಈಗ ನನಗೆ ಸ್ವಲ್ಪ ಮೂಢನಂಬಿಕೆ ಬಂದಿದೆ. ಸ್ಟಿಕ್ಕರ್‌ ಇಲ್ಲದ ಬ್ಯಾಟ್‌ನೊಂದಿಗೆ ಇಷ್ಟೊಂದು ರನ್‌ ಗಳಿಸಿರುವುದು ಅಮೂಲ್ಯವಾಗಿದೆ. ವಿಶ್ವಕಪ್‌ ಮುಗಿದ ಬಳಿಕ ಮಾತನಾಡೋಣ. ಈ ಟೂರ್ನಿಯನ್ನು ಸ್ಟಿಕ್ಕರ್‌ ಇಲ್ಲದ ಬ್ಯಾಟ್‌ನೊಂದಿಗೆ ಆಡುತ್ತೇನೆ. ಈಗ ಯಾವುದನ್ನೂ ಬದಲಾಯಿಸಲು ಇಷ್ಟವಿಲ್ಲ’ ಎಂದು ಹೇಳಿದ್ದೆ” ಎಂದು ಸಚಿನ್‌ ನೆನಪಿಸಿಕೊಂಡಿದ್ದಾರೆ.

‘ನನ್ನ ದೇಹದ ಒಂದು ಭಾಗವನ್ನು ನಿಮಗೆ ನೀಡುತ್ತಿದ್ದೇನೆ’

ತಮ್ಮ ಬ್ಯಾಟ್‌ಗಳ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಸಚಿನ್‌, ಅವು ತಮ್ಮ ದೇಹದ ವಿಸ್ತರಣೆಯಿದ್ದಂತೆ ಎಂದು ಹೇಳಿದ್ದಾರೆ. “ನನ್ನ ಬ್ಯಾಟ್‌ಗಳು ನನ್ನ ದೇಹದ ಒಂದು ಭಾಗದಂತಿವೆ. ಅವು ನನಗೆ ಬಹಳ ಅಮೂಲ್ಯವಾದವು. ನನ್ನ ದೇಹದ ಒಂದು ಭಾಗವನ್ನೇ ನಿಮಗೆ ನೀಡುತ್ತಿದ್ದೇನೆ. ದಯವಿಟ್ಟು ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಿ” ಎಂದು MCA ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.