2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡವು ಆಫ್ಘಾನಿಸ್ತಾನದ ವಿರುದ್ಧ ಸೋತು ಗ್ರೂಪ್ ಹಂತದಿಂದಲೇ ಹೊರಬಿದ್ದಿದೆ. 'ಬಿ' ಗುಂಪಿನಲ್ಲಿ ಆಸ್ಟ್ರೇಲಿಯಾ, ಆಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ಸೆಮಿಫೈನಲ್ ರೇಸ್‌ನಲ್ಲಿವೆ. ಆಫ್ಘಾನಿಸ್ತಾನ ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಸೆಮಿಫೈನಲ್ ತಲುಪಲಿದೆ. ಆಸ್ಟ್ರೇಲಿಯಾ ಗೆದ್ದರೆ ಸೆಮಿಫೈನಲ್ ಪ್ರವೇಶಿಸಲಿದೆ. ದಕ್ಷಿಣ ಆಫ್ರಿಕಾ ಬಹುತೇಕ ಸೆಮಿಫೈನಲ್ ತಲುಪಿದೆ. 'ಎ' ಗುಂಪಿನಿಂದ ಭಾರತ ಹಾಗೂ ನ್ಯೂಜಿಲೆಂಡ್ ಸೆಮಿಫೈನಲ್ ತಲುಪಿವೆ.

ಬೆಂಗಳೂರು: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ವರ್ಚುವಲ್ ನಾಕೌಟ್ ಎನಿಸಿಕೊಂಡಿದ್ದ ಆಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಮುಖಾಮುಖಿಯಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಆಘಾತಕಾರಿ ಸೋಲು ಅನುಭವಿಸಿದೆ. ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಆಫ್ಘಾನಿಸ್ತಾನ 8 ರನ್ ರೋಚಕ ಜಯ ಸಾಧಿಸಿದೆ. ಇನ್ನು ಈ ಸೋಲಿನೊಂದಿಗೆ ಇಂಗ್ಲೆಂಡ್ ತಂಡವು ಗ್ರೂಪ್‌ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿದೆ.

'ಬಿ' ಗುಂಪಿನ ಪಂದ್ಯದ ಈ ಫಲಿತಾಂಶ ಸೆಮಿಫೈನಲ್ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿದೆ. ಇದೀಗ 'ಬಿ' ಗುಂಪಿನ ಸೆಮೀಸ್‌ ರೇಸ್‌ನಲ್ಲಿ ಆಸ್ಟ್ರೇಲಿಯಾ, ಆಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಉಳಿದುಕೊಂಡಿವೆ. ಫೆಬ್ರವರಿ 28ರಂದು ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ತಂಡಗಳು ತಮ್ಮ ಪಾಲಿನ ಕೊನೆಯ ಪಂದ್ಯವನ್ನಾಡಲಿವೆ. ಇನ್ನು ಮಾರ್ಚ್ 01ರಂದು ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳು ಕರಾಚಿ ಮೈದಾನದಲ್ಲಿ ಕಾದಾಡಲಿವೆ.

ಮುಗ್ಗರಿಸಿ ಬಿದ್ರೂ ಸೊಕ್ಕು ಅಡಗಿಲ್ಲ; ಚಾಂಪಿಯನ್ಸ್ ಟ್ರೋಫಿ ಸೋತ್ರೂ ಭಾರತದ ಮೇಲೆ ಗೂಬೆ ಕೂರಿಸಿದ ಪಾಕ್!

ಆಫ್ಘಾನಿಸ್ತಾನ, ಆಸ್ಟ್ರೇಲಿಯಾ, ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಸೆಮೀಸ್ ಲೆಕ್ಕಚಾರ ಹೇಗಿದೆ ನೋಡೋಣ ಬನ್ನಿ: 

1. ಆಫ್ಘಾನಿಸ್ತಾನ:

ಆಫ್ಘಾನಿಸ್ತಾನ ತಂಡವು ಇದೀಗ ಆಡಿದ ಎರಡು ಪಂದ್ಯಗಳ ಪೈಕಿ ಒಂದು ಗೆಲುವು ಹಾಗೂ ಒಂದು ಸೋಲು ಕಂಡು 2 ಅಂಕಗಳೊಂದಿಗೆ 'ಬಿ' ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಇದೀಗ ಫೆಬ್ರವರಿ 28ರಂದು ಆಫ್ಘಾನಿಸ್ತಾನ ತಂಡವು ಆಸ್ಟ್ರೇಲಿಯಾ ಎದುರು ಮಾಡು ಇಲ್ಲವೇ ಮಡಿ ಕದನಕ್ಕೆ ಸಜ್ಜಾಗಿದೆ. ಒಂದು ವೇಳೆ ಆಸೀಸ್ ಎದುರು ಆಫ್ಘಾನ್ ತಂಡವು ಗೆಲುವು ಸಾಧಿಸಿದರೆ ಅನಾಯಾಸವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಇನ್ನು ಆಸೀಸ್ ಎದುರು ಆಫ್ಘಾನ್ ಸೋತರೇ ಆಫ್ಘಾನಿಸ್ತಾನ ತಂಡವು ಗ್ರೂಪ್ ಹಂತದಲ್ಲೇ ಹೊರಬೀಳಲಿದೆ. ಮಳೆಯಿಂದಾಗಿ ಪಂದ್ಯ ರದ್ದಾಗಿ, ದಕ್ಷಿಣ ಆಫ್ರಿಕಾ ಎದುರು ಇಂಗ್ಲೆಂಡ್ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದರೆ ಆಫ್ಘಾನ್ ಸೆಮೀಸ್‌ ಪ್ರವೇಶಿಸಬಹುದು.

2. ಆಸ್ಟ್ರೇಲಿಯಾ:

ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಆಡಿದ ಎರಡು ಪಂದ್ಯಗಳ ಪೈಕಿ ಒಂದು ಗೆಲುವು ಹಾಗೂ ಒಂದು ಪಂದ್ಯ ರದ್ದಾಗಿರುವುದರಿಂದ ಮೂರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದೀಗ ಆಸೀಸ್ ಕೂಡಾ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಆಫ್ಘಾನ್ ಎದುರು ಆಸ್ಟ್ರೇಲಿಯಾ ಗೆಲುವು ಸಾಧಿಸಿದರೆ ಕಾಂಗರೂ ಪಡೆ ಸೆಮೀಸ್‌ಗೇರಲಿದೆ. ಒಂದು ವೇಳೆ ಆಫ್ಘಾನ್‌ಗೆ ಶರಣಾದರೇ, ಆಸೀಸ್ ಸೆಮೀಸ್‌ ರೇಸ್‌ನಿಂದ ಹೊರಬೀಳಲಿದೆ. ಇನ್ನು ಪಂದ್ಯ ರದ್ದಾದರೇ 4 ಅಂಕಗಳೊಂದಿಗೆ ಸೆಮೀಸ್ ಪ್ರವೇಶಿಸಲಿದೆ.

ಪಾಕಿಸ್ತಾನಕ್ಕೆ ಕೋಚ್‌ ಆಗಿ ವಿಶ್ವ ಶ್ರೇಷ್ಠ ತಂಡ ಕಟ್ತೇನೆ: ಯುವಿ ತಂದೆ ಯೋಗರಾಜ್ ಅಚ್ಚರಿಯ ಹೇಳಿಕೆ!

3. ದಕ್ಷಿಣ ಆಫ್ರಿಕಾ:

ತೆಂಬ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಆಡಿದ ಎರಡು ಪಂದ್ಯಗಳ ಪೈಕಿ ಒಂದು ಗೆಲುವು ಹಾಗೂ ಒಂದು ಪಂದ್ಯ ರದ್ದಾಗಿರುವುದರಿಂದ ಮೂರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಸೀಸ್‌ನಷ್ಟೇ ಅಂಕವಿದ್ದರೂ ಹರಿಣಗಳ ಪಡೆಯ ನೆಟ್‌ ರನ್‌ರೇಟ್ +2.140 ಇರುವುದರಿಂದ ಅಗ್ರಸ್ಥಾನದಲ್ಲಿದೆ. ಬವುಮಾ ಪಡೆ ಬಹುತೇಕ ಸೆಮೀಸ್‌ಗೆ ಒಂದು ಹೆಜ್ಜೆಯಿಟ್ಟಾಗಿದೆ. ಒಂದು ವೇಳೆ ಇಂಗ್ಲೆಂಡ್ ಎದುರು ಸೋತರೂ ಆಫ್ರಿಕಾ ಪಡೆಯ ಸೆಮೀಸ್‌ ಪ್ರವೇಶಕ್ಕೆ ಅಡ್ಡಿಯಾಗುವುದಿಲ್ಲ. ಆದರೇ ಇಂಗ್ಲೆಂಡ್ ಎದುರು ಅತಿದೊಡ್ಡ ಅಂತರದ ಸೋಲು ಅನುಭವಿಸಿ, ಅದೃಷ್ಟ ಕೈಕೊಟ್ಟರಷ್ಟೇ ಸೆಮೀಸ್‌ಗೇರುವುದು ಕಷ್ಟವಾಗಲಿದೆ. ಮಳೆಯಿಂದ ಪಂದ್ಯ ರದ್ದಾಧರೂ ದಕ್ಷಿಣ ಆಫ್ರಿಕಾ ತಂಡವು ಸೆಮೀಸ್ ಪ್ರವೇಶಿಸಲಿದೆ.

ಈಗಾಗಲೇ 'ಎ' ಗುಂಪಿನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮೀಸ್‌ ಪ್ರವೇಶ ಪಡೆದಿದ್ದು, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಸೆಮೀಸ್‌ ರೇಸ್‌ನಿಂದ ಹೊರಬಿದ್ದಿವೆ.