ಕ್ಲಾಸೇನ್ ಸಿಡಿಲಬ್ಬರದ ಶತಕಕ್ಕೆ ಕಾಂಗರೂ ಪಡೆ ದಿಕ್ಕಾಪಾಲು..! 10 ಓವರಲ್ಲಿ 113 ರನ್‌ ಚಚ್ಚಿಸಿಕೊಂಡ ಜಂಪಾ!

* ಆಸ್ಟ್ರೇಲಿಯಾ ಎದುರು ಸ್ಪೋಟಕ ಶತಕ ಸಿಡಿಸಿದ ಹೆನ್ರಿಚ್ ಕ್ಲಾಸೇನ್
* 10 ಓವರಲ್ಲಿ 113 ರನ್‌ ಚಚ್ಚಿಸಿಕೊಂಡ ಆಸೀಸ್ ಸ್ಪಿನ್ನರ್ ಆಡಂ ಜಂಪಾ
* 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-2 ಸಮಬಲ

Heinrich Klassen record breaking 174 crush Australia in 4th ODI kvn

ಸೆಂಚೂರಿಯನ್‌(ಸೆ.16): ಹೆನ್ರಿಚ್‌ ಕ್ಲಾಸೇನ್(174 ರನ್ 83 ಎಸೆತ), ಹಾಗೂ ಡೇವಿಡ್ ಮಿಲ್ಲರ್ ಮತ್ತು ವ್ಯಾನ್ ಡರ್ ಡುಸೇನ್ ಬಾರಿಸಿದ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಬಲಿಷ್ಠ ಆಸ್ಟ್ರೇಲಿಯಾ ಎದುರು ಆತಿಥೇಯ ದಕ್ಷಿಣ ಆಫ್ರಿಕಾ ತಂಡವು 164 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು 2-2ರ ಸಮಬಲ ಸಾಧಿಸಿದ್ದು, ಸೆಪ್ಟೆಂಬರ್ 17ರಂದು ನಡೆಯಲಿರುವ ಕೊನೆಯ ಹಾಗೂ ನಿರ್ಣಾಯಕ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಕ್ವಿಂಟನ್ ಡಿ ಕಾಕ್(45) ಹಾಗೂ ರೀಜಾ ಹೆಂಡ್ರಿಕ್ಸ್(28) ಉತ್ತಮ ಆರಂಭ ಒದಗಿಸಿಕೊಟ್ಟರು. ಇದಾದ ಬಳಿಕ ರಾಸ್ಸಿ ವ್ಯಾನ್ ಡರ್ ಡುಸೇನ್(62) ಜವಾಬ್ದಾರಿಯುತ ಅರ್ಧಶತಕ ಸಿಡಿಸಿದರು. ಆದರೆ ನಾಯಕ ಏಯ್ಡನ್ ಮಾರ್ಕ್‌ರಮ್ ಕೇವಲ(8) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. 

ಪಾಕ್ ಗಳಿಸಿದ್ದು 252, ಲಂಕಾ ಬಾರಿಸಿದ್ದು 252, ಹಾಗಿದ್ರೂ ಲಂಕಾ ಗೆದ್ದಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ದಕ್ಷಿಣ ಆಫ್ರಿಕಾ ತಂಡವು 34.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 194 ರನ್‌ ಗಳಿದ್ದಾಗ ಜತೆಯಾದ ಕ್ಲಾಸೇನ್ ಹಾಗೂ ಮಿಲ್ಲರ್ ಜೋಡಿ ಸಿಡಿಲಬ್ಬರದ ಶತಕದ ಜತೆಯಾಟವಾಡುವ ಮೂಲಕ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ದಕ್ಷಿಣ ಆಫ್ರಿಕಾ ತಂಡವು ಒಂದು ಹಂತದಲ್ಲಿ ಮೊದಲ 32 ಓವರ್ ಅಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತ್ತು. ಇದಾದ ಬಳಿಕ ಕೊನೆಯ 18 ಓವರ್‌ಗಳಲ್ಲಿ ಹರಿಣಗಳ ಪಡೆ 2 ವಿಕೆಟ್ ಕಳೆದುಕೊಂಡು 259 ರನ್ ಚಚ್ಚಿತು. ಹೆನ್ರಿಚ್ ಕ್ಲಾಸೇನ್ 83 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 13 ಮುಗಿಲೆತ್ತರದ ಸಿಕ್ಸರ್ ನೆರವಿನಿಂದ 174 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಮತ್ತೊಂದು ತುದಿಯಲ್ಲಿ ಡೇವಿಡ್ ಮಿಲ್ಲರ್ 45 ಎಸೆತಗಳನ್ನು ಎದುರಿಸಿ 6 ಬೌಂಡರಿ 5 ಸಿಕ್ಸರ್ ಸಹಿತ ಅಜೇಯ 82 ರನ್ ಸಿಡಿಸಿದರು. ಪರಿಣಾಮ ದಕ್ಷಿಣ ಆಫ್ರಿಕಾ ತಂಡವು ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 416 ರನ್ ಕಲೆಹಾಕಿತು.

10 ಓವರಲ್ಲಿ 113 ರನ್‌ ಚಚ್ಚಿಸಿಕೊಂಡ ಜಂಪಾ!

ಏಕದಿನ ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ರನ್‌ ಬಿಟ್ಟುಕೊಟ್ಟ ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್‌ ಆ್ಯಡಂ ಜಂಪಾ ಜಂಟಿ ಮೊದಲ ಸ್ಥಾನ ಪಡೆದಿದ್ದಾರೆ. ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 4ನೇ ಪಂದ್ಯದಲ್ಲಿ ಜಂಪಾ 10 ಓವರಲ್ಲಿ 113 ರನ್‌ ಚಚ್ಚಿಸಿಕೊಂಡರು. ಈ ಮೊದಲು 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ಆಸ್ಟ್ರೇಲಿಯಾದ ಮಿಕ್‌ ಲೆವಿಸ್‌ 113 ರನ್‌ ಬಿಟ್ಟುಕೊಟ್ಟು ಅನಗತ್ಯ ದಾಖಲೆಗೆ ಗುರಿಯಾಗಿದ್ದರು. ಶುಕ್ರವಾರದ ಪಂದ್ಯದಲ್ಲಿ ಹೈನ್ರಿಚ್‌ ಕ್ಲಾಸೆನ್‌ ಹಾಗೂ ಡೇವಿಡ್‌ ಮಿಲ್ಲರ್‌ ಆಸೀಸ್‌ ಬೌಲರ್‌ಗಳನ್ನು ಚೆಂಡಾಡಿದರು.

Asia Cup: ಶುಭ್‌ಮನ್‌ ಶತಕ ವ್ಯರ್ಥ, ಬಾಂಗ್ಲಾ ವಿರುದ್ಧ ಸೋಲು ಕಂಡ ಭಾರತ

ಇನ್ನು ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 22 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ(99) ಶತಕ ವಂಚಿತ ಬ್ಯಾಟಿಂಗ್ ನಡೆಸಿದ್ದು ಬಿಟ್ಟರೇ, ಕಾಂಗರೂ ಪಡೆಯ ಉಳಿದ ಬ್ಯಾಟರ್‌ಗಳು ಹರಣಗಳೆದುರು ದಿಟ್ಟ ಹೋರಾಟ ತೋರಲು ಯಶಸ್ವಿಯಾಗಲಿಲ್ಲ. ಹೀಗಾಗಿ ಆಸೀಸ್ ತಂಡವು 34.5 ಓವರ್‌ಗಳಲ್ಲಿ 252 ರನ್ ಬಾರಿಸಿ ಸರ್ವಪತನ ಕಂಡಿತು.

ದಕ್ಷಿಣ ಆಫ್ರಿಕಾ ತಂಡದ ಪರ ವೇಗಿಗಳಾದ ಲುಂಗಿ ಎಂಗಿಡಿ 4 ವಿಕೆಟ್ ಪಡೆದರೆ, ಕಗಿಸೋ ರಬಾಡ 3 ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು. ಇನ್ನು ಮಾರ್ಕೊ ಯಾನ್ಸೆನ್ ಹಾಗೂ ಕೇಶವ್ ಮಹಾರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
 

Latest Videos
Follow Us:
Download App:
  • android
  • ios