ಹೆದ್ದಾರಿಪುರ ಪ್ರೀಮಿಯರ್ ಲೀಗ್‌ನಲ್ಲಿ ಜಂಬಳ್ಳಿ ಜಾಗ್ವಾರ್ಸ್ ಚಾಂಪಿಯನ್ ಪಟ್ಟ ಗೆದ್ದಿದೆ. ಸಮನ್ವಯ ಸ್ಟಾರ್ಸ್ ರನ್ನರ್‌ಅಪ್ ಆಗಿ ಹೊರಹೊಮ್ಮಿತು. ಸಚಿನ್ ಮೂಗೂಡ್ತಿ ಸರಣಿಶ್ರೇಷ್ಠ, ಆಶಿಕ್ ಹೆದ್ದಾರಿಪುರ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಯಶವಂತ ಗಿಣಿಸೆ ಶ್ರೇಷ್ಠ ಬೌಲರ್ ಆಗಿ ಮೂಡಿಬಂದರು. 12 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯನ್ನು ಸಾವಿರಾರು ಮಂದಿ ವೀಕ್ಷಿಸಿದರು.
ಶಿವಮೊಗ್ಗ: 2025ನೇ ಸಾಲಿನ ನಾಲ್ಕನೇ ಸೀಸನ್ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಜಂಬಳ್ಳಿ ಜಾಗ್ವಾರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಸಮನ್ವಯ ಸ್ಟಾರ್ಸ್ ಕೊಡಸೆ-ಗಿಣಿಸೆ ತಂಡವು ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇಲ್ಲಿನ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಕ್ರಿಕೆಟ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಅದ್ಧೂರಿ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಳೆದ ಬಾರಿಯಂತೆ 12 ತಂಡಗಳು ಪಾಲ್ಗೊಂಡಿದ್ದವು. ಗ್ರಾಮೀಣ ಮಟ್ಟದ ಲೀಗ್ ಮಾದರಿಯ ಟೂರ್ನಿ ಇದಾಗಿದ್ದರೂ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಕ್ರಿಕೆಟ್ ಪ್ರೇಕ್ಷಕರು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಮೈದಾನಕ್ಕೆ ಬಂದು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸುವ ಮೂಲಕ ಗಮನ ಸೆಳೆದರು.

ಜಯ ಪ್ರಕಾಶ್ ಜಂಬಳ್ಳಿ ಮಾಲೀಕತ್ವದ ಜಂಬಳ್ಳಿ ಜಾಗ್ವರ್ಸ್ ತಂಡವು ಕಳೆದ ಆವೃತ್ತಿಯ HPL ಟೂರ್ನಿಯ ಫೈನಲ್‌ನಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಬಾರಿ ಕಳೆದ ಬಾರಿ ಮಾಡಿದ ತಪ್ಪನ್ನು ತಿದ್ದಿಕೊಂಡು ಚೊಚ್ಚಲ ಬಾರಿಗೆ HPL ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಯಿತು. ಇನ್ನು ನವೀನ್ ಹಾಗೂ ಸತೀಶ್‌ಚಂದ್ರ ಕೊಡಸೆ ಮಾಲೀಕತ್ವದ ಸಮನ್ವಯ ಸ್ಟಾರ್ಸ್ ಕೊಡಸೆ-ಗಿಣಿಸೆ ತಂಡವು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರುವ ಮೂಲಕ ಅಜೇಯವಾಗಿ ಫೈನಲ್ ಪ್ರವೇಶಿತ್ತು. ಆದರೆ ಫೈನಲ್‌ನಲ್ಲಿ ಐಕಾನ್ ಆಟಗಾರ ಸಂದೀಪ್ ಮೂಗುಡ್ತಿ ಗಾಯಕ್ಕೆ ತುತ್ತಾಗಿದ್ದರಿಂದ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿತು.
ಇನ್ನುಳಿದಂತೆ ಸುನಿಲ್ ಕಲ್ಲೂರು ಹಾಗೂ ರಜಿತ್ ಡಿ ಈಡಿಗ ವಡಾಹೊಸಳ್ಳಿ ಅವರ ಮಾಲೀಕತ್ವದ ಟೀಮ್ ಕೇಸರಿ ಎರಡನೇ ರನ್ನರ್ ಅಪ್ ಸ್ಥಾನ ಪಡೆದರೆ, ಪುನೀತ್‌ಗೌಡ ಫ್ರೆಂಡ್ಸ್ ಹೆದ್ದಾರಿಪುರ ತಂಡವು ಮೂರನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಚಾಂಪಿಯನ್ ಪಟ್ಟ ಅಲಂಕರಿಸಿದ ಜಂಬಳ್ಳಿ ಜಾಗ್ವಾರ್ಸ್ 30 ಸಾವಿರ ರುಪಾಯಿ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ತಮ್ಮದಾಗಿಸಿಕೊಂಡರೆ, ರನ್ನರ್ ಅಪ್ ಸ್ಥಾನ ಪಡೆದ ಸಮನ್ವಯ ಸ್ಟಾರ್ಸ್ 25 ಸಾವಿರ ರುಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.
ನಾಲ್ಕನೇ ಸೀಸನ್ ಹೆದ್ದಾರಿಪುರ ಪ್ರೀಮಿಯರ್ ಲೀಗ್‌ನಲ್ಲಿ ಸಮನ್ವಯ ಸ್ಟಾರ್ಸ್ ತಂಡವನ್ನು ಪ್ರತಿನಿಧಿಸಿದ ಎಡಗೈ ಆಟಗಾರ ಸಚಿನ್ ಮೂಗೂಡ್ತಿ 7 ಇನ್ನಿಂಗ್ಸ್‌ನಲ್ಲಿ ಒಂದು ಅರ್ಧಶತಕ ಸಹಿತ 220 ರನ್ ಹಾಗೂ ಬೌಲಿಂಗ್‌ನಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾದರು. ಇನ್ನು ಪುನೀತ್ ಗೌಡ ಫ್ರೆಂಡ್ಸ್ ತಂಡದ ಆಶಿಕ್ ಗೌಡ ಹೆದ್ದಾರಿಪುರ ಬೆಸ್ಟ್ ಬ್ಯಾಟರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇನ್ನು ಟೀಂ ಕೇಸರಿ ತಂಡದ ಯಶವಂತ ಗಿಣಿಸೆ 10 ವಿಕೆಟ್ ಪಡೆದು ಬೆಸ್ಟ್ ಬೌಲರ್ ಪ್ರಶಸ್ತಿಗೆ ಮುಡಿಗೇರಿಸಿಕೊಂಡರು.

ಇನ್ನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕುವೆಂವು ವಿವಿ ಉಪನ್ಯಾಸಕರಾದ ಡಾ. ಪುರುಷೋತ್ತಮ್ ಎಸ್ ವಿ, 'ಕ್ರೀಡೆ ಒಡೆದ ಮನಸ್ಸುಗಳನ್ನು ಜೋಡಿಸುವ ಕೆಲಸವನ್ನು ಸದಾ ಮಾಡುತ್ತಾ ಇರುತ್ತದೆ. ಅದರಲ್ಲೂ ಕ್ರಿಕೆಟ್ ಇತ್ತೀಚೆಗಿನ ದಿನಗಳಲ್ಲಿ ಯುವ ಮನಸ್ಸುಗಳನ್ನು ಹತ್ತಿರಕ್ಕೆ ತರುವ ಕೆಲಸವನ್ನು ಮಾಡುತ್ತಿದೆ. ಗ್ರಾಮೀಣ ಮಟ್ಟದ ಈ ಟೂರ್ನಿ ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದ ಟೂರ್ನಿಯಾಗಿ ಹೊರಹೊಮ್ಮಲಿ' ಎಂದು ಶುಭಹಾರೈಸಿದರು.
ಮೂರು ದಿನವೂ ಹೊಸನಗರ ರಾಘವೇಂದ್ರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ತೀರ್ಪುಗಾರಿಕೆ ನಡೆಸಿಕೊಟ್ಟರು. ಸಮಾರೋಪ ಸಮಾರಂಭದ ನಿರೂಪಣೆಯನ್ನು ಸಚಿನ್ ಹೆದ್ದಾರಿಪುರ ನಡೆಸಿಕೊಟ್ಟರು.
