ವಿಧಿ ಒಂದು ಸಾರಿ ಜಾಡಿಸಿ ಒದ್ದರೆ, ಎಲ್ಲೋ ಇದ್ದವರು ಇನ್ನೆಲ್ಲೋ ಬಂದು ಬೀಳುತ್ತೇವೆ. ಇದು ಪ್ರತಿಯೊಬ್ಬರ ಬಾಳಿನಲ್ಲೂ ನಡೆಯುವ ಕಟು ಸತ್ಯ, ಇದರಲ್ಲಿ ಎರಡು ಮಾತಿಲ್ಲ. ಆದರೆ, ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಲೈಫ್ ಸ್ಟೋರಿ ನಮಗೆ ತೀರಾ ವಿಭಿನ್ನವಾಗಿ ಕಾಣಿಸುತ್ತದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಬದುಕಿನಲ್ಲಿ ವಿಧಿ ಒಂದು ಸಾರಿ ಜಾಡಿಸಿ ಒದ್ದರೆ, ಎಲ್ಲೋ ಇದ್ದವರು ಇನ್ನೆಲ್ಲೋ ಬಂದು ಬೀಳುತ್ತೇವೆ. ಇದು ಪ್ರತಿಯೊಬ್ಬರ ಬಾಳಿನಲ್ಲೂ ನಡೆಯುವ ಕಟು ಸತ್ಯ, ಇದರಲ್ಲಿ ಎರಡು ಮಾತಿಲ್ಲ. ಆದರೆ, ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಲೈಫ್ ಸ್ಟೋರಿ ನಮಗೆ ತೀರಾ ವಿಭಿನ್ನವಾಗಿ ಕಾಣಿಸುತ್ತದೆ. ಏಕೆಂದರೆ, ಕೈ ಹಿಡಿಯಲು ದೊಡ್ಡ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲ, ಮುನ್ನಡೆಸಲು ಗಾಡ್ ಫಾದರ್ ಅಂತೂ ಮೊದಲೇ ಇರಲಿಲ್ಲ. ಇಂತಹ ಒಬ್ಬ ಸಾಮಾನ್ಯ ಬಡ ಹುಡುಗ ಇಂದು ವಿಶ್ವ ಕ್ರಿಕೆಟ್‌ನ ಉನ್ನತ ಶಿಖರ ಏರಿದ ರೀತಿ ಇದೆಯಲ್ಲ, ಅದು ಎಂತವರ ಕಣ್ಣಂಚಲ್ಲೂ ನೀರು ತರಿಸುತ್ತದೆ.

ನೀವು ನೋಡದ ಹಾರ್ದಿಕ್!

ತಮ್ಮ ಕರಿಯರ್‌ನ ಮಧ್ಯೆ ರಂಗುರಂಗಿನ ಜೀವನಶೈಲಿ ಹಾಗೂ ಟಿವಿ ಶೋಗಳ ಹೇಳಿಕೆಗಳಿಂದ ಹಾರ್ದಿಕ್ ವಿವಾದದ ಸುಳಿಯಲ್ಲೂ ಸಿಲುಕಿದ್ದುಂಟು. ಆದರೆ ಅದು ಅವರ ವೈಯಕ್ತಿಕ ಬದುಕು. ಮೈದಾನದ ಆಚೆ ಅಭಿಮಾನಿಗಳೊಂದಿಗೆ ಹಾರ್ದಿಕ್ ನಡೆಸುವ ಆಪ್ತ ಸಂಭಾಷಣೆ ಹಾಗೂ ಅವರ 'ಡೌನ್ ಟು ಅರ್ಥ್' ನಡವಳಿಕೆ ಎಂತವರ ಮನಸ್ಸನ್ನೂ ಕರಗಿಸಿಬಿಡುತ್ತದೆ. ಅದಕ್ಕೆ ಹಲವಾರು ಉದಾಹರಣೆಗಳನ್ನು ನೀವು ಈಗಾಗಲೇ ನೋಡಿರುತ್ತಿರಿ. ಇತ್ತೀಚೆಗೆ ಪತ್ನಿ ನತಾಶಾ ಜೊತೆಗಿನ ವಿಚ್ಛೇದನದ ನೋವು, ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆಯಿಂದ ಎದುರಾದ ಭೀಕರ ಸಾರ್ವಜನಿಕ ನಿಂದನೆ ಮತ್ತು ಟ್ರೋಲ್‌ಗಳ ಬಿರುಗಾಳಿಯಿಂದ ಹಾರ್ದಿಕ್ ಹೊರಬಂದ ರೀತಿ ಅದ್ಭುತ. ಆ ಎಲ್ಲಾ ನೋವುಗಳನ್ನು ನುಂಗಿ, ಟಿ-20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ಅವರು ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರಲ್ಲ; ಅದು ಇಡೀ ಜಗತ್ತಿನ ದ್ವೇಷಕ್ಕೆ ತಮ್ಮ ಮೌನ ಮತ್ತು ಆಟದ ಮೂಲಕವೇ ನೀಡಿದ 'ಪ್ರೀತಿಯ ಉತ್ತರ'ವಾಗಿತ್ತು. ಹಾರ್ದಿಕ್ ಪಾಂಡ್ಯ ಅವರ ಈ ರೋಚಕ ಹಾಗೂ ಭಾವನಾತ್ಮಕ ಕಥೆಯ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಮಾಸದ 'ಚಪ್ರಿ' ಅವಮಾನ!

ಐಪಿಎಲ್ ಸಮಯದಲ್ಲಿ ನೆಟ್ಟಿಗರು 'ಚಪ್ರಿ' ಎಂದು ಹೀಯಾಳಿಸಿದಾಗ, ಸ್ಟೇಡಿಯಂನಲ್ಲಿ ಸ್ವಂತ ದೇಶದ ಅಭಿಮಾನಿಗಳೇ 'ಬೂಯಿಂಗ್' ಮಾಡಿದಾಗ ಹಾರ್ದಿಕ್ ಎಲ್ಲೂ ಕೋಪಗೊಳ್ಳಲಿಲ್ಲ, ಯಾರ ವಿರುದ್ಧವೂ ಪ್ರತಿಕ್ರಿಯಿಸಲಿಲ್ಲ. ಬದಲಿಗೆ ತಮ್ಮ ಸಂಪೂರ್ಣ ಗಮನವನ್ನು ಕಠಿಣ ಪರಿಶ್ರಮ ಮತ್ತು ಅಭ್ಯಾಸದ ಕಡೆಗೆ ಹರಿಸಿದರು. ಆದರೆ, ಅನುಭವಿಸಿದ ಮಾನಸಿಕ ಹಿಂಸೆ, ಆ ಮಾನಸಿಕ ಕಿರುಕುಳವನ್ನು ಪಕ್ಕಕ್ಕಿಟ್ಟು ಫಿನಿಕ್ಸ್ನಂತೆ ಹೊರಬಂದರಲ್ಲಾ, ಅಲ್ಲಿಗೆ ಪಾಂಡ್ಯಾ ಮತ್ತೊಂದು ಚಾಪ್ಟರ್ ತೆರೆಯುತ್ತಾ ಹೋಯಿತು. ಅದಕ್ಕೆ 2024ರಲ್ಲಿ ನಡೆದ ಟಿ-20 ವಿಶ್ವಕಪ್‌ ಸಾಕ್ಷಿ.

ಟಿ20 ವಿಶ್ವಕಪ್‌ನಲ್ಲಿ ಹೀರೋ ಆದರು!

2024ರ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡದ ಗೆಲುವಿನ ಪ್ರಮುಖ ರೂವಾರಿಯಾದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ಅಜೇಯವಾಗಿ ಕಪ್ ಗೆಲ್ಲಲು ನೆರವಾದರು. ಅದರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದ ಕೊನೆಯ ಓವರ್‌ನಲ್ಲಿ 16 ರನ್‌ಗಳನ್ನು ಡಿಫೆಂಡ್ ಮಾಡಬೇಕಾಗಿದ್ದಾಗ ಹಾರ್ದಿಕ್ ವಿಕೆಟ್ ಪಡೆದು ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಅಂದು ಮೈದಾನದಲ್ಲೇ ಹಾಕಿದ ಕಣ್ಣೀರು ಇದೆಯಲ್ಲ, ಅದು ಹಾರ್ದಿಕ್ ಅನುಭವಿಸಿದ ಅಷ್ಟು ದಿನಗಳ ನೋವನ್ನೆಲ್ಲಾ ಮೌನವಾಗಿ ಹೇಳುತ್ತಿತ್ತು.

ದ್ವೇಷಿಸಿದವರೇ ಪ್ರೀತಿಸುವಂತೆ ಮಾಡಿದರು!

ಐಪಿಎಲ್‌ನಲ್ಲಿ ಯಾವ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್ ಅವರನ್ನು ನೋಡಿ ಅಭಿಮಾನಿಗಳು ಕೂಗಾಡಿ ಅವಮಾನಿಸಿದ್ದರೋ, ಅದೇ ವಾಂಖೆಡೆ ಮೈದಾನದಲ್ಲಿ ವಿಶ್ವಕಪ್ ಗೆದ್ದು ಬಂದ ಹಾರ್ದಿಕ್ ಅವರನ್ನು ಲಕ್ಷಾಂತರ ಅಭಿಮಾನಿಗಳು ಹಾರ್ದಿಕ್, ಹಾರ್ದಿಕ್ ಎಂದು ಜಯಘೋಷ ಕೂಗಿ ಕೊಂಡಾಡಿದರು. "ಕಳೆದುಕೊಳ್ಳಲು ಏನೂ ಇಲ್ಲದವನಿಗೆ ಇಡೀ ಆಕಾಶವೇ ಗೆಲ್ಲಲು ಕಾದಿರುತ್ತದೆ ಎಂಬ ಮಾತನ್ನು ಹಾರ್ದಿಕ್ ಪಾಂಡ್ಯ ತಮ್ಮ ಕ್ರಿಕೆಟ್ ಬದುಕಿನಲ್ಲಿ ನಿಜ ಮಾಡಿ ತೋರಿಸಿದ್ದಾರೆ.