ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ 2026 ಏಷ್ಯಾಕಪ್ನಲ್ಲಿ ಅದ್ಭುತ 160 ರನ್ ಗಳಿಸಿ ಮಿಂಚಿದ್ದಾರೆ. ಆದರೆ, ತಾವು ತಮ್ಮ ತಂದೆಯಂತೆ ಆಡಲು ಬಯಸುವುದಿಲ್ಲ, ಬದಲಾಗಿ ವಿರಾಟ್ ಕೊಹ್ಲಿಯಂತೆ ಆಡಲು ಇಷ್ಟಪಡುತ್ತೇನೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ನವದೆಹಲಿ: ಹೋಲಿಕೆಗಳು ನಮ್ಮನ್ನ ಆಗಾಗ ಇಕ್ಕಟ್ಟಿಗೆ ಸಿಲುಕಿ ಬಿಡುತ್ತವೆ. ಕ್ರಿಕೆಟ್ ವಿಚಾರಕ್ಕೆ ಬಂದರೆ ರಾಹುಲ್ ದ್ರಾವಿಡ್ ಪುತ್ರ ದ್ರಾವಿಡ್ನಂತೆ ಬ್ಯಾಟಿಂಗ್ ಮಾಡಬೇಕು. ಸೆಹ್ವಾಗ್ ಮಗ ಅವರ ಅಪ್ಪನಂತೆ ಬ್ಯಾಟಿಂಗ್ ಮಾಡಬೇಕು. ಸಚಿನ್ ಅರ್ಜನ್, ಅವರ ತಂದೆ ತೆಂಡುಲ್ಕರ್ ಅವರ ಹಾಗೆಯೇ ಬ್ಯಾಟಿಂಗ್ ಮಾಡಬೇಕು ಕೆಲ ಅಭಿಮಾನಿಗಳು ಬಯಸುತ್ತಾರೆ. ಅಪ್ಪನ ರೀತಿಯಲ್ಲೇ ಮಕ್ಕಳೂ ಕ್ರಿಕೆಟ್ನಲ್ಲಿ ಬೆಳೆಯಬೇಕು ಅನ್ನೋದು ಹಲವು ಅಭಿಮಾನಿಗಳ ಮನದಾಳ.
ಸದ್ಯ ಭಾರತೀಯ ಕ್ರಿಕೆಟ್ ಲೋಕದಲ್ಲಿ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಸದ್ಯ ಟ್ರೆಂಡಿಂಗ್ನಲ್ಲಿದ್ದಾರೆ. 2026 ಏಷ್ಯಾಕಪ್ ಗ್ರೂಪ್ A ಪಂದ್ಯದಲ್ಲಿ ಯುಎಇ ವಿರುದ್ದ ಆರ್ಯವೀರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. 168 ಎಸೆತಗಳಲ್ಲಿ 160 ರನ್ಗಳಿಸಿದರು. ಈ ಅದ್ಭುತ ಇನ್ನಿಂಗ್ಸ್ ಬೆನ್ನಲ್ಲೇ ಅವರು ನೀಡಿದ ಹೇಳಿಕೆಯೊಂದು ಭಾರೀ ವೈರಲ್ ಆಗ್ತಿದೆ.
ಪ್ರಚಾರದ ವಿಡಿಯೋ ಒಂದರಲ್ಲಿ ಸೆಹ್ವಾಗ್ ಪುತ್ರನಿಗೆ ಆಟದ ಶೈಲಿ ಬಗ್ಗೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು, 'ನಾನು ಸೆಹ್ವಾಗ್ನಂತೆ ಆಡಲು ಬಯಸಲ್ಲ. ವಿರಾಟ್ ಕೊಹ್ಲಿ ಥರ ಆಡಲು ಬಯಸುತ್ತೇನೆ' ಎಂದಿದ್ದಾರೆ. ಅವರ ಹೇಳಿಕೆ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಯಾಕೆಂದರೆ.. ವೀರೇಂದ್ರ ಸೆಹ್ವಾಗ್ ಮೊದಲ ಎಸೆತದಿಂದಲೇ ತಮ್ಮ ನಿರ್ಭಿತ ಬ್ಯಾಟಿಂಗ್, ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. ಇತ್ತ ಕೊಹ್ಲಿ ಅದ್ಭುತ ಫಿಟ್ನೆಸ್, ಸ್ಥಿರತೆ, ಒತ್ತಡದಲ್ಲಿ ಆಡುವ ಸಾಮರ್ಥ್ಯ ಮತ್ತು ಶಾಂತತೆಗೆ ಹೆಸರುವಾಸಿ.
ಇಲ್ಲಿ ಆರ್ಯವೀರ್ ಆಕ್ರಮಣಕಾರಿ ಆಟವು ತಂದೆಯಂತೆ ಕಂಡುಬಂತು. ಜೊತೆಗೆ ಕೊಹ್ಲಿ ಅವರು ಇನ್ನಿಂಗ್ಸ್ ನಿರ್ಮಿಸುವಲ್ಲಿ ತಿಳುವಳಿಕೆ ಮತ್ತು ಪ್ರಭುದ್ಧತೆಯನ್ನ ಪ್ರದರ್ಶಿಸಿತು.
ಆರ್ಯವೀರ್ ಆಟ ಹೇಗಿತ್ತು?
ಯುಎಇ ಪಂದ್ಯದಲ್ಲಿ 19 ವರ್ಷದ ಆರ್ಯವೀರ್, ಆರಂಭದಲ್ಲಿ ಎಚ್ಚರಿಕೆಯಿಂದ ಆಟವಾಡಿದರು. ತಮ್ಮ ಇನ್ನಿಂಗ್ಸ್ಗೆ ಭದ್ರ ಅಡಿಪಾಯ ಹಾಕಿಕೊಂಡರು. 131 ಎಸೆತಗಳಲ್ಲಿ ತಮ್ಮ ಅದ್ಭುತ ಶತಕ ಬಾರಿಸಿದರು. ನಂತರ ಗೇರ್ ಬದಲಾಯಿಸಿದ ಆರ್ಯವೀರ್, ಮೈದಾನದಲ್ಲಿ ಬೌಂಡರಿ, ಸಿಕ್ಸರ್ಗಳ ಸುರಿಮಳೆ ಗೈದರು. 37ನೇ ಓವರ್ನಲ್ಲಿ ಎರಡು ಸಿಕ್ಸರ್, ಎರಡು ಬೌಂಡರಿಗಳನ್ನ ಬಾರಿಸಿದರು. ಇನ್ನು ಸೆಹ್ವಾಗ್ ಪುತ್ರ ತಮ್ಮ ಇನ್ನಿಂಗ್ಸ್ನಲ್ಲಿ 17 ಬೌಂಡರಿ, 7 ಸಿಕ್ಸರ್ಗಳನ್ನ ಬಾರಿಸಿದರು.
ಟೀಂ ಇಂಡಿಯಾದಲ್ಲಿ ವೀರೇಂದ್ರ ಸೆಹ್ವಾಗ್ ಅವರು ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿ ಆಗಿದ್ದರು. ಭಾರತದ ಪರ 104 ಟೆಸ್ಟ್ ಪಂದ್ಯಗಳಲ್ಲಿ 8586 ರನ್ ಬಾರಿಸಿದ್ದಾರೆ. 251 ಏಕದಿನ ಪಂದ್ಯಗಳಲ್ಲಿ 8273 ರನ್ಗಳಿಸಿದ್ದಾರೆ. ಇನ್ನು ಭಾರತದ ಪರ 19 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನ ಮಾತ್ರ ಆಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 23 ಶತಕ ಬಾರಿಸಿದ್ರೆ, ಏಕದಿನ ಪಂದ್ಯಗಳಲ್ಲಿ 15 ಶತಕ ಬಾರಿಸಿದ್ದಾರೆ.














