ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ರೇಸ್ ಹ್ಯಾರಿಸ್ ಮಹಿಳಾ ಬಿಗ್ ಬ್ಯಾಷ್ ಲೀಗ್ನಲ್ಲಿ 59 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಅವರ ಸಹೋದರಿ ಲಾರಾ ಹ್ಯಾರಿಸ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವಿಶ್ವದಾಖಲೆ ಬರೆದಿದ್ದಾರೆ.
ಬೆಂಗಳೂರು(ನ.20): ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2027ರ ಹರಾಜಿಗೂ ಮುನ್ನ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ರೇಸ್ ಹ್ಯಾರಿಸ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮಹಿಳಾ ಬಿಗ್ ಬ್ಯಾಷ್ ಲೀಗ್ (ಡಬ್ಲ್ಯುಬಿಬಿಎಲ್) ಪಂದ್ಯದಲ್ಲಿ ಗುರುವಾರ (ನವೆಂಬರ್ 19) ಸಿಡ್ನಿ ಥಂಡರ್ ವಿರುದ್ಧ ಬ್ರಿಸ್ಬೇನ್ ಹೀಟ್ ಪರ ಕೇವಲ 59 ಎಸೆತಗಳಲ್ಲಿ ಶತಕ ಬಾರಿಸಿ ಗಮನ ಸೆಳೆದಿದ್ದಾರೆ.
ಡಬ್ಲ್ಯುಪಿಎಲ್ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದಿಂದ ಬಿಡುಗಡೆಯಾಗಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ರೇಸ್ ಹ್ಯಾರಿಸ್, ಬ್ರಿಸ್ಬೇನ್ನ ಅಲನ್ ಬಾರ್ಡರ್ ಫೀಲ್ಡ್ನಲ್ಲಿ ಅಜೇಯ 102 ರನ್ ಸಿಡಿಸಿದರು. 59 ಎಸೆತಗಳನ್ನು ಎದುರಿಸಿದ ಅವರ ಇನ್ನಿಂಗ್ಸ್ನಲ್ಲಿ 9 ಬೌಂಡರಿ ಹಾಗೂ 7 ಸಿಕ್ಸರ್ಗಳು ಸೇರಿದ್ದವು. ಅವರ ಸ್ಫೋಟಕ ಆಟದ ನೆರವಿನಿಂದ ಬ್ರಿಸ್ಬೇನ್ ಹೀಟ್ ತಂಡ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಗ್ರೇಸ್ಗೆ ಚಾರ್ಲಿ ನಾಟ್ ಉತ್ತಮ ಸಾಥ್ ನೀಡಿದರು. ಅವರು ಕೇವಲ 34 ಎಸೆತಗಳಲ್ಲಿ 62 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್ಗೆ ಶತಕದ ಜೊತೆಯಾಟವಾಡಿತು. ಕೇವಲ 9.5 ಓವರ್ಗಳಲ್ಲೇ ಬ್ರಿಸ್ಬೇನ್ ತಂಡ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸುವ ಮೂಲಕ ಎದುರಾಳಿ ಬೌಲರ್ಗಳ ಮೇಲೆ ಸವಾರಿ ಮಾಡಿತು.
32 ವರ್ಷದ ಗ್ರೇಸ್ ಹ್ಯಾರಿಸ್ ಅವರ ಈ ಶತಕ ಡಬ್ಲ್ಯುಬಿಬಿಎಲ್ ಇತಿಹಾಸದಲ್ಲಿ ನಾಲ್ಕನೆಯದ್ದಾಗಿದೆ. 172.88ರ ಸ್ಟ್ರೈಕ್ರೇಟ್ನಲ್ಲಿ ಅವರು ರನ್ ಗಳಿಸಿದರು. ಆದರೆ, ಗ್ರೇಸ್ ಅವರ ಅಮೋಘ ಬ್ಯಾಟಿಂಗ್ ಹೊರತಾಗಿಯೂ ಬ್ರಿಸ್ಬೇನ್ ಹೀಟ್ ತಂಡಕ್ಕೆ ಗೆಲುವು ಒಲಿಯಲಿಲ್ಲ. 226 ರನ್ಗಳ ಗುರಿ ಬೆನ್ನಟ್ಟಿದ ಸಿಡ್ನಿ ಥಂಡರ್ ತಂಡ 4 ವಿಕೆಟ್ ಕಳೆದುಕೊಂಡು, ಇನ್ನು ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗುರಿ ತಲುಪಿತು. ಈ ಮೂಲಕ ಆರು ವಿಕೆಟ್ಗಳ ರೋಚಕ ಜಯ ದಾಖಲಿಸಿತು.
ಯುಪಿ ವಾರಿಯರ್ಸ್ಗೆ ಮರಳಿದ ಗ್ರೇಸ್ ಹ್ಯಾರಿಸ್
ಇದೀಗ ಗ್ರೇಸ್ ಹ್ಯಾರಿಸ್ ಮತ್ತೆ ಡಬ್ಲ್ಯುಪಿಎಲ್ನಲ್ಲಿ ತಮ್ಮ ಹಳೆಯ ತಂಡದ ಪರ ಆಡಲಿದ್ದಾರೆ. ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ನಡೆದ ಹರಾಜಿನಲ್ಲಿ ಯುಪಿ ವಾರಿಯರ್ಸ್ ತಂಡ ಅವರನ್ನು 30 ಲಕ್ಷ ರೂಪಾಯಿಗೆ ಖರೀದಿಸಿದೆ. ಡಬ್ಲ್ಯುಪಿಎಲ್ನ ಮೊದಲ ಮೂರು ಆವೃತ್ತಿಗಳಲ್ಲಿ ಗ್ರೇಸ್ ಇದೇ ತಂಡವನ್ನು ಪ್ರತಿನಿಧಿಸಿದ್ದರು. ಬಳಿಕ 2026ರ ಆವೃತ್ತಿಯಲ್ಲಿ ಆರ್ಸಿಬಿ ತಂಡದ ಪರ ಆಡಿದ್ದರು. ಇದೀಗ ಗ್ರೇಸ್ ಹ್ಯಾರಿಸ್ ವಿಸ್ಪೋಟಕ ಬ್ಯಾಟಿಂಗ್ ನೋಡಿದರೆ, ಇವರನ್ನು ಬಿಟ್ಟು ಆರ್ಸಿಬಿ ತಪ್ಪು ಮಾಡಿತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಲಾರಾ ಹ್ಯಾರಿಸ್ರಿಂದ 15 ಎಸೆತಗಳಲ್ಲೇ ವಿಶ್ವದಾಖಲೆಯ ಅರ್ಧಶತಕ!
ಗ್ರೇಸ್ ಹ್ಯಾರಿಸ್ ಶತಕದ ಮೂಲಕ ಮಿಂಚಿದರೆ, ಅವರ ಸಹೋದರಿ ಲಾರಾ ಹ್ಯಾರಿಸ್ ಸಿಡ್ನಿ ಥಂಡರ್ ಪರ ಅದಕ್ಕಿಂತಲೂ ಅಚ್ಚರಿಯ ಪ್ರದರ್ಶನ ನೀಡಿದರು. 30 ವರ್ಷದ ಲಾರಾ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಮಹಿಳಾ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ದಾಖಲಿಸಿದರು.
ಲಾರಾ ಅವರ ಸ್ಫೋಟಕ ಇನ್ನಿಂಗ್ಸ್ನಲ್ಲಿ ಐದು ಸಿಕ್ಸರ್ಗಳು ಸೇರಿದ್ದವು. ಅವರು 315ರ ಭರ್ಜರಿ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದರು. ಅವರ ಆಕ್ರಮಣಕಾರಿ ಆಟ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಮತ್ತೊಂದು ತುದಿಯಲ್ಲಿ ಅನಿಕಾ ಲಿಯರ್ರಾಯ್ಡ್ ಅಜೇಯ 60 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಅವರು 43 ಎಸೆತಗಳನ್ನು ಎದುರಿಸಿದ್ದರು. ಈ ಇಬ್ಬರ ಆಟದ ನೆರವಿನಿಂದ ಸಿಡ್ನಿ ಥಂಡರ್ ತಂಡ ಗುರಿ ತಲುಪಿ ಗೆಲುವು ದಾಖಲಿಸಿತು.
ಇದಕ್ಕೂ ಮೊದಲು 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಟೆಸ್ ಫ್ಲಿಂಟಾಫ್ ಹೆಸರಿನಲ್ಲಿ ಅತ್ಯಂತ ವೇಗದ ಅರ್ಧಶತಕದ ದಾಖಲೆ ಇತ್ತು. ಇದೀಗ ಲಾರಾ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಆ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಹೀಗೆ ಹ್ಯಾರಿಸ್ ಸಹೋದರಿಯರು ಒಂದೇ ಪಂದ್ಯದಲ್ಲಿ ವಿಭಿನ್ನ ರೀತಿಯಲ್ಲಿ ಮಿಂಚಿದರು. ಗ್ರೇಸ್ ಶತಕ ಸಿಡಿಸಿದರೆ, ಲಾರಾ ಡಬ್ಲ್ಯುಬಿಬಿಎಲ್ ದಾಖಲೆಯ ಪುಸ್ತಕದಲ್ಲಿ ಹೊಸ ಇತಿಹಾಸ ಬರೆದರು. ಗ್ರೇಸ್ ಹ್ಯಾರಿಸ್ ಯುಪಿ ವಾರಿಯರ್ಸ್ ತಂಡಕ್ಕೆ ಮರಳುತ್ತಿರುವುದು ಆ ತಂಡದ ಮಧ್ಯಮ ಕ್ರಮಾಂಕಕ್ಕೆ ಮತ್ತಷ್ಟು ಬಲ ನೀಡುವ ನಿರೀಕ್ಷೆಯಿದೆ. ಈ ಹಿಂದೆ ಮೂರು ಆವೃತ್ತಿಗಳಲ್ಲಿ ತಂಡದ ಪರ ಆಡಿರುವ ಅನುಭವವೂ ಅವರಿಗೆ ನೆರವಾಗಲಿದೆ. ಹೊಸ ಆವೃತ್ತಿಗೂ ಮುನ್ನ ತಂಡದೊಂದಿಗಿನ ಅವರ ಮರುಸೇರ್ಪಡೆ ಕುತೂಹಲ ಮೂಡಿಸಿದೆ. 2027ರ ಮಹಿಳಾ ಪ್ರೀಮಿಯರ್ ಲೀಗ್ ಜನವರಿ 14ರಂದು ಆರಂಭವಾಗಲಿದ್ದು, ಫೆಬ್ರವರಿ ಆರಂಭದವರೆಗೆ ಟೂರ್ನಿ ನಡೆಯಲಿದೆ.















