ಭಾರತದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಟಿ20 ಕ್ರಿಕೆಟ್‌ನಲ್ಲಿ 400 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ತಲುಪಿದರು.

ಬೆಂಗಳೂರು(ನ.19): ಭಾರತದ ಅನುಭವಿ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಟಿ20 ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟಿ20 ಮಾದರಿಯಲ್ಲಿ 400 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಚಹಲ್ ಪಾತ್ರರಾಗಿದ್ದಾರೆ. ಈ ಮೂಲಕ 20ನೇ ಸೀಸನ್‌ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಆರ್‌ಸಿಬಿ ಮಾಜಿ ಸ್ಪಿನ್ನರ್ ಈ ಅಪರೂಪದ ಮೈಲಿಗಲ್ಲು ನೆಟ್ಟಿದ್ದಾರೆ. ಸದ್ಯ ಚಹಲ್ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ನವೆಂಬರ್ 18ರ ಬುಧವಾರ ಇಂದೋರ್‌ನ ಡೇಲಿ ಕಾಲೇಜು ಮೈದಾನದಲ್ಲಿ ನಡೆದ 2026ರ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯ ಎಲೈಟ್ ಗ್ರೂಪ್ ಬಿ ಪಂದ್ಯದಲ್ಲಿ ಹರಿಯಾಣ ಪರ ಕಣಕ್ಕಿಳಿದ ಚಹಲ್ ಈ ಮೈಲಿಗಲ್ಲು ತಲುಪಿದರು. ತಮಿಳುನಾಡು ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 16 ರನ್ ನೀಡಿ 3 ವಿಕೆಟ್ ಪಡೆದ ಅವರು, ತಮ್ಮ ಟಿ20 ವಿಕೆಟ್‌ಗಳ ಸಂಖ್ಯೆಯನ್ನು 400ಕ್ಕೆ ಏರಿಸಿಕೊಂಡರು. ಈ ಪಂದ್ಯಕ್ಕೂ ಮುನ್ನ ಚಹಲ್‌ಗೆ 400 ವಿಕೆಟ್‌ಗಳ ಗಡಿ ತಲುಪಲು ಕೇವಲ ಒಂದು ವಿಕೆಟ್ ಅಗತ್ಯವಿತ್ತು. ಪಂದ್ಯದ ಆರನೇ ಓವರ್‌ನ ಮೂರನೇ ಎಸೆತದಲ್ಲಿ ತಮಿಳುನಾಡಿನ ಆರಂಭಿಕ ಆಟಗಾರ ಅಮಿತ್ ಸಾತ್ವಿಕ್ ಅವರನ್ನು ಬೌಲ್ಡ್ ಮಾಡುವ ಮೂಲಕ ಚಹಲ್ ಈ ಐತಿಹಾಸಿಕ ಸಾಧನೆ ಮಾಡಿದರು.

ಇದಾದ ಬಳಿಕ 17ನೇ ಓವರ್‌ನಲ್ಲಿ ರವಿಶ್ರೀನಿವಾಸನ್ ಸಾಯಿ ಕಿಶೋರ್ ಮತ್ತು ಮಣಿಮಾರನ್ ಸಿದ್ಧಾರ್ಥ್ ಅವರ ವಿಕೆಟ್‌ಗಳನ್ನು ಪಡೆದು ಹರಿಯಾಣದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತುಂಬಿದರು. ಚಹಲ್ ಅವರ ಈ ಪ್ರದರ್ಶನದ ನೆರವಿನಿಂದ ಹರಿಯಾಣ ತಂಡ ತಮಿಳುನಾಡನ್ನು 19.5 ಓವರ್‌ಗಳಲ್ಲಿ 124 ರನ್‌ಗಳಿಗೆ ಆಲೌಟ್ ಮಾಡಿತು.

ಹರಿಯಾಣ, ಭಾರತ ಮತ್ತು ಐಪಿಎಲ್‌ನಲ್ಲಿ ಚಹಲ್ ಸಾಧನೆ

ಚಹಲ್ ಹರಿಯಾಣ ಪರ ಆಡಿದ 71 ಟಿ20 ಪಂದ್ಯಗಳಲ್ಲಿ 68 ವಿಕೆಟ್ ಪಡೆದಿದ್ದಾರೆ. ಭಾರತದ ಪರ 81 ಪಂದ್ಯಗಳಲ್ಲಿ 98 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್‌ನಲ್ಲಿ ನಾಲ್ಕು ತಂಡಗಳ ಪರ 188 ಪಂದ್ಯಗಳನ್ನು ಆಡಿರುವ ಅವರು 233 ವಿಕೆಟ್ ಪಡೆದಿದ್ದಾರೆ. 2011ರಲ್ಲಿ ಮುಂಬೈ ಇಂಡಿಯನ್ಸ್ ಪರ ಆರು ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಗಳಲ್ಲಿ ಮೂರು ವಿಕೆಟ್‌ಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಚಹಲ್, ಆರ್‌ಸಿಬಿ, ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪರ ಐಪಿಎಲ್ ಪಂದ್ಯಗಳನ್ನಾಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಚಹಲ್ ನಂತರ ಭುವನೇಶ್ವರ್ ಕುಮಾರ್ ಇದ್ದಾರೆ. ಅವರು ಇದುವರೆಗೆ ಆಡಿರುವ 340 ಟಿ20 ಪಂದ್ಯಗಳಲ್ಲಿ 366 ವಿಕೆಟ್ ಪಡೆದಿದ್ದಾರೆ. ಭುವಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎರಡು ಬಾರಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರ ಒಂದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ತಂಡಗಳ ಭಾಗವಾಗಿದ್ದರು.

ರಶೀದ್ ಖಾನ್ ಹೆಸರಿನಲ್ಲಿ ವಿಶ್ವ ದಾಖಲೆ

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಹೆಸರಿನಲ್ಲಿದೆ. ಅವರು 543 ಪಂದ್ಯಗಳ 548 ಇನಿಂಗ್ಸ್‌ಗಳಲ್ಲಿ ವಿವಿಧ ತಂಡಗಳ ಪರ ಆಡಿದ್ದು, ಒಟ್ಟು 743 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 200 ವಿಕೆಟ್ ಪಡೆದ ಮೊದಲ ಹಾಗೂ ಏಕೈಕ ಆಟಗಾರ ಎಂಬ ದಾಖಲೆಯೂ ರಶೀದ್ ಖಾನ್ ಅವರ ಹೆಸರಿನಲ್ಲಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಚಹಲ್ ಅಬ್ಬರ

2026ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹರಿಯಾಣ ಪರ ಆಡಿರುವ ಮೂರೂ ಪಂದ್ಯಗಳಲ್ಲಿ ಚಹಲ್ ಕಣಕ್ಕಿಳಿದಿದ್ದಾರೆ. ಈವರೆಗೆ ಆರು ವಿಕೆಟ್ ಪಡೆದಿದ್ದಾರೆ. ಪಂಜಾಬ್ ವಿರುದ್ಧದ ಮೊದಲ ಪಂದ್ಯದಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದ ಅವರು, ಸೌರಾಷ್ಟ್ರ ವಿರುದ್ಧದ ಎರಡನೇ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ್ದರು. ಇದೀಗ ತಮಿಳುನಾಡು ವಿರುದ್ಧವೂ ಮೂರು ವಿಕೆಟ್ ಪಡೆದು ತಂಡದ ಗೆಲುವಿನ ಪ್ರಯತ್ನಕ್ಕೆ ನೆರವಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 400 ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಚಹಲ್ ಅವರ ವೃತ್ತಿಜೀವನದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.