ದಕ್ಷಿಣ ಆಫ್ರಿಕಾ ಟೆಸ್ಟ್ ನಾಯಕ ತೆಂಬಾ ಬವುಮಾ 16 ಪಂದ್ಯಗಳಲ್ಲಿ 14 ಗೆಲುವು ದಾಖಲಿಸಿ 72 ವರ್ಷಗಳ ಹಳೆಯ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಜೋಹಾನ್ಸ್ಬರ್ಗ್(ನ.20): ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ತೆಂಬಾ ಬವುಮಾ 72 ವರ್ಷಗಳ ಹಳೆಯ ವಿಶ್ವದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸಿದ್ದಾರೆ. ಜೋಹಾನ್ಸ್ಬರ್ಗ್ನ ಐತಿಹಾಸಿಕ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಪಡೆದಿರುವ ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ತಂಡ, ಸತತ ಎರಡನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್ ತಲುಪುವ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ.
ದಕ್ಷಿಣ ಆಫ್ರಿಕಾ ತಂಡವನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಇದುವರೆಗೆ 16 ಪಂದ್ಯಗಳಲ್ಲಿ ಮುನ್ನಡೆಸಿರುವ ಬವುಮಾ, 14 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಕೇವಲ ಒಂದು ಪಂದ್ಯದಲ್ಲಿ ಸೋಲು ಕಂಡಿದ್ದು, ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಕಳೆದ ತಿಂಗಳು ಡರ್ಬನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯ ಮೊದಲ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾ ಸೋಲು ಅನುಭವಿಸಿತ್ತು. ಆ ಬಳಿಕ ನಡೆದ ಸರಣಿಯನ್ನು ಹರಿಣಗಳ ಪಡೆ 2-1 ಅಂತರದಲ್ಲಿ ಗೆದ್ದುಕೊಂಡಿತ್ತು. 2024ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಮಳೆಯಿಂದಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, ಬವುಮಾ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಕಂಡ ಏಕೈಕ ಡ್ರಾ ಇದಾಗಿದೆ.
ಬವುಮಾ ಹೆಸರಿಗೆ 72 ವರ್ಷಗಳ ವಿಶ್ವದಾಖಲೆ
ಟೆಸ್ಟ್ ಕ್ರಿಕೆಟ್ನಲ್ಲಿ ರಾಷ್ಟ್ರೀಯ ತಂಡವನ್ನು 16 ಪಂದ್ಯಗಳಲ್ಲಿ ಮುನ್ನಡೆಸಿ 14 ಗೆಲುವು ದಾಖಲಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಬವುಮಾ ಪಾತ್ರರಾಗಿದ್ದಾರೆ. ಈ ಹಿಂದೆ 16 ಪಂದ್ಯಗಳ ನಾಯಕತ್ವದ ಬಳಿಕ ಅತ್ಯಧಿಕ ಗೆಲುವು ದಾಖಲಿಸಿದ ನಾಯಕನ ದಾಖಲೆ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಲಿಂಡ್ಸೆ ಹ್ಯಾಸೆಟ್ ಹೆಸರಿನಲ್ಲಿತ್ತು. 1952ರಿಂದ ಈ ದಾಖಲೆ 72 ವರ್ಷಗಳ ಕಾಲ ಅವರ ಹೆಸರಿನಲ್ಲಿತ್ತು. ಇದೀಗ ಬವುಮಾ ಆ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಕಳೆದ ವರ್ಷ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ 2025ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಗೆದ್ದಿದ್ದ ದಕ್ಷಿಣ ಆಫ್ರಿಕಾ, ಬವುಮಾ ನಾಯಕತ್ವದಲ್ಲಿ ತನ್ನ ಎರಡನೇ ಐಸಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಬಳಿಕ ಭಾರತದ ನೆಲದಲ್ಲಿಯೂ ಹರಿಣಗಳ ಪಡೆ ಐತಿಹಾಸಿಕ 2-0 ಅಂತರದ ಟೆಸ್ಟ್ ಸರಣಿ ಜಯ ದಾಖಲಿಸಿತ್ತು. ಭಾರತದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಗೆದ್ದಿದ್ದು ಇದು ಕೇವಲ ಎರಡನೇ ಬಾರಿ. ಅಲ್ಲದೆ, ತವರಿನ ಹೊರಗೆ ಬಹುಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವನ್ನು ಕ್ಲೀನ್ ಸ್ವೀಪ್ ಮಾಡಿದ ವಿಶ್ವದ ಮೂರನೇ ತಂಡ ಎಂಬ ಸಾಧನೆಯನ್ನೂ ಮಾಡಿತ್ತು.
ಎರಡನೇ ಟೆಸ್ಟ್ಗೆ ಬವುಮಾ ಅಲಭ್ಯ
ಇಷ್ಟೆಲ್ಲಾ ಸಾಧನೆಗಳ ನಡುವೆಯೇ ಬವುಮಾ ಅವರಿಗೆ ಗಾಯದ ಸಮಸ್ಯೆ ಎದುರಾಗಿದೆ. ಜೋಹಾನ್ಸ್ಬರ್ಗ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಅವರ ಕಾಲಿನ ಸ್ನಾಯುವಿಗೆ (ಕ್ಯಾಫ್) ಗಾಯವಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಗಾಯದ ಕಾರಣದಿಂದ ಅವರು ರಿಟೈರ್ಡ್ ಹರ್ಟ್ ಆಗಿ ಮೈದಾನ ತೊರೆದಿದ್ದರು. ಬಳಿಕ ಮತ್ತೆ ಕ್ರೀಸ್ಗೆ ಮರಳಿದ ಬವುಮಾ ಅಜೇಯ 68 ರನ್ ಗಳಿಸಿದ್ದರು. ಗಾಯದ ಸಮಸ್ಯೆಯಿಂದಾಗಿ ಸೆಂಚುರಿಯನ್ನಲ್ಲಿ ನಡೆಯಲಿರುವ ಸರಣಿಯ ಎರಡನೇ ಟೆಸ್ಟ್ ಪಂದ್ಯಕ್ಕೆ ಬವುಮಾ ಅಲಭ್ಯರಾಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಏಡೆನ್ ಮಾರ್ಕ್ರಮ್ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಲಿದ್ದಾರೆ.
ಟೆಸ್ಟ್: ಬಾಂಗ್ಲಾ ವಿರುದ್ಧ ದ. ಆಫ್ರಿಕಾಗೆ ಭರ್ಜರಿ ಗೆಲುವು
ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ್ದು, 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಗೆಲುವಿಗೆ 12 ರನ್ ಸುಲಭ ಗುರಿ ಪಡೆದ ತಂಡ 1 ವಿಕೆಟ್ ನಷ್ಟದಲ್ಲಿ ಜಯಗಳಿಸಿತು. ಇದಕ್ಕೂ ಮುನ್ನ ಬಾಂಗ್ಲಾ ಮೊದಲ ಇನ್ನಿಂಗ್ಸ್ನಲ್ಲಿ 400 ರನ್ ಗಳಿಸಿದ್ದರೆ, ದ.ಆಫ್ರಿಕಾ 557 ರನ್ ಕಲೆಹಾಕಿ ಮುನ್ನಡೆ ಪಡೆದಿತ್ತು. 2ನೇ ಇನ್ನಿಂಗ್ಸ್ನಲ್ಲಿ ಬಾಂಗ್ಲಾ ಕೇವಲ 168 ರನ್ಗೆ ಆಲೌಟಾಯಿತು. ಸ್ಪಿನ್ನರ್ ಸಿಮೋನ್ ಹಾರ್ಮರ್ 6, ರಬಾಡ 3 ವಿಕೆಟ್ ಪಡೆದರು. ಪಂದ್ಯದಲ್ಲಿ 9 ವಿಕೆಟ್ ಕಿತ್ತು, 72 ರನ್ ಗಳಿಸಿದ ರಬಾಡ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.















