ಶ್ರೀಲಂಕಾ ಪ್ರವಾಸದ ಅಭ್ಯಾಸ ಪಂದ್ಯದ ಮೊದಲ ದಿನ, ಶ್ರೀಲಂಕಾ ಕ್ರಿಕೆಟ್ ಇಲೆವೆನ್ ತಂಡ ಭಾರತದ ಬೌಲರ್‌ಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿ 8 ವಿಕೆಟ್‌ಗೆ 363 ರನ್ ಗಳಿಸಿತು. ಲಂಕಾ ಪರ ನಿಶಾನ್ ಫೆರ್ನಾಂಡೋ, ರವಿಂದು ರಸಾಂತ ಮತ್ತು ಸೊನಲ್ ದಿನುಶಾ ಅರ್ಧಶತಕ ಬಾರಿಸಿದರೆ, ಭಾರತದ ಬೌಲರ್‌ಗಳು ವಿಕೆಟ್ ಪಡೆಯಲು ಪರದಾಡಿದರು.
ಕೊಲಂಬೊ: ಶ್ರೀಲಂಕಾ ಪ್ರವಾಸದ ಮೊದಲ ದಿನವೇ ಭಾರತೀಯ ಬೌಲರ್‌ಗಳು ದಣಿದಿದ್ದಾರೆ. ಲಂಕಾದ ಭವಿಷ್ಯದ ತಾರೆಯರು ಎನಿಸಿರುವ ಆಟಗಾರರ ವಿರುದ್ಧ ಭಾರತೀಯ ಬೌಲರ್‌ಗಳು 3 ದಿನಗಳ ಅಭ್ಯಾಸ ಪಂದ್ಯದ ಮೊದಲ ದಿನ ಸಾಧಾರಣ ಪ್ರದರ್ಶನ ತೋರಿದರು. ಭಾರತದ ಅನುಭವಿ ಬೌಲಿಂಗ್ ಪಡೆ ಎದುರು, ಶ್ರೀಲಂಕಾ ಕ್ರಿಕೆಟ್ ಇಲೆವೆನ್ ತಂಡ ಮೊದಲ ದಿನ 8 ವಿಕೆಟ್‌ಗೆ 363 ರನ್ ಕಲೆಹಾಕಿತು.
ಈ ಪಂದ್ಯ ಪ್ರಥಮ ದರ್ಜೆ ಪಂದ್ಯವಾಗಿ ಪರಿಗಣಿಸಲ್ಪಡದೆ ಇರುವ ಕಾರಣ, ಉಭಯ ತಂಡಗಳು ಮೊದಲ ಹಾಗೂ 2ನೇ ದಿನ 90 ಓವರ್ ಬ್ಯಾಟ್ ಮಾಡಲಿವೆ. 3ನೇ ದಿನ ಎರಡೂ ತಂಡಗಳು ತಲಾ 45 ಓವರ್ ಬ್ಯಾಟಿಂಗ್ ನಡೆಸಲಿವೆ. ಆದರೆ, ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶುಭ್‌ಮನ್ ಗಿಲ್ ಮುಂದೆ ಮೊದಲ ದಿನವೇ ಸಾಕಷ್ಟು ಪ್ರಶ್ನೆಗಳು ಎದ್ದಿವೆ.
ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಭಾರತ ಮೊದಲ ದಿನವೇ ಫೇಲ್
‘ಆ.15ನೇ ತಾರೀಖು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದೇವೆ. ಎಲ್ಲದ್ದಕ್ಕೂ ಉತ್ತರ ಕಂಡುಕೊಂಡಿದ್ದೇವೆ’ ಎಂದು ಗಂಭೀರ್ ಪ್ರವಾಸದ ಆರಂಭದಲ್ಲಿ ಹೇಳಿದ್ದರು. ಆದರೆ, ಇದೀಗ ಕೆಲ ಹೊಸ ಪ್ರಶ್ನೆಗಳು ಹುಟ್ಟಿಕೊಂಡಂತೆ ಕಾಣುತ್ತಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಂಕಾ ಇಲೆವೆನ್ ತಂಡದ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಮೊದಲ ವಿಕೆಟ್‌ಗೆ ನಿಶಾನ್ ಫೆರ್ನಾಂಡೋ ಹಾಗೂ ರವಿಂದು ರಸಾಂತ 110 ರನ್ ಜೊತೆಯಾಟವಾಡಿದರು. ಈ ಇಬ್ಬರೂ ಔಟಾಗುವ ಮುನ್ನ ಅರ್ಧಶತಕ ಗಳಿಸಿದರು. ಅಗ್ರ-8 ಬ್ಯಾಟರ್‌ಗಳ ಪೈಕಿ 7 ಮಂದಿ 30ಕ್ಕಿಂತ ಹೆಚ್ಚು ರನ್ ಗಳಿಸಿದರು. ರವಿಂದು 71, ನಿಶಾನ್ 66 ಜೊತೆಗೆ ನಾಯಕ ಸೊನಲ್ ದಿನುಶಾ 52 ರನ್ ಕಲೆಹಾಕಿದರು.
ಭಾರತದ ಪರ ಸ್ಪಿನ್ನರ್‌ಗಳಾದ ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ತಲಾ 2, ಮಾನವ್ ಸುಥಾರ್ 1 ವಿಕೆಟ್ ಕಿತ್ತರು. ಸಾರಾಂಶ್ ಜೈನ್ 11 ಓವರಲ್ಲಿ 54 ರನ್ ಬಿಟ್ಟುಕೊಟ್ಟು ವಿಕೆಟ್ ಪಡೆಯಲು ವಿಫಲರಾದರು. ವೇಗಿಗಳಾದ ಮೊಹಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಶನಿವಾರ ಭಾರತಕ್ಕೆ ಬ್ಯಾಟಿಂಗ್ ಅವಕಾಶ ಸಿಗಲಿದ್ದು, ಎಷ್ಟು ಪರಿಣಾಮಕಾರಿಯಾಗಿ ಆಡಲಿದ್ದಾರೆ ಎನ್ನುವ ಬಗ್ಗೆ ಕುತೂಹಲವಿದೆ.
ಗಾಯ: 1ನೇ ದಿನ ಕಣಕ್ಕಿಳಿಯದ ಗಿಲ್
ಫೀಲ್ಡಿಂಗ್ ಅಭ್ಯಾಸ ವೇಳೆ ಕೈಬೆರಳಿನ ಗಾಯಕ್ಕೆ ತುತ್ತಾದ ಭಾರತದ ನಾಯಕ ಶುಭ್‌ಮನ್ ಗಿಲ್ ಮುನ್ನೆಚ್ಚರಿಕೆ ಕ್ರಮವಾಗಿ ಮೊದಲ ದಿನ ಮೈದಾನಕ್ಕಿಳಿಯಲಿಲ್ಲ. ಅವರು ಶನಿವಾರ ಬ್ಯಾಟಿಂಗ್ ಮಾಡುವ ನಿರೀಕ್ಷೆ ಇದೆ.


