ಮೈದಾನದ ಹೊರಗೆ, ಮೈದಾನದ ಒಳಗೆ ಎಲ್ಲಿದ್ದರೂ ಅವರು ಜಾಲಿಜಾಲಿ. ತಮ್ಮ ಜೊತೆಗೆ ಇರೋರಿಗೆ ಕೊಡುವ ಕ್ವಾಟ್ಲೆ ಅಷ್ಟಿಷ್ಟಲ್ಲ. ಇಷ್ಟು ದಿನ ಜೊತೆಗಾರರ ಗೋಳು ಹೋಯ್ದುಕೊಳ್ತಿದ್ದ ಪಂತ್‌, ಕಣ್ಣು ಈಗ ನೇರವಾಗಿ ತಮ್ಮ ಮುಖ್ಯಮಂತ್ರಿಗಳ ಮೇಲೆ ಬಿದ್ದಿದೆ. ಕಗ್ಗತ್ತಲೆಯ ಮಧ್ಯರಾತ್ರಿ ಸ್ಫೋಟಕ ಟ್ವೀಟ್‌ ಮಾಡಿ ಗಾಬರಿ ಹುಟ್ಟಿಸಿದ್ದಾರೆ. ಏನದು ಈ ಸ್ಟೋರಿ ಓದಿ..

ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ ಮಧ್ಯರಾತ್ರಿ ಕಾಟ ಕೊಟ್ಟಿದ್ದಾರೆ. ಅವರ ಅನಿರೀಕ್ಷಿತ ಟ್ವೀಟ್‌ನಿಂದ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮೈದಾನದ ಒಳಗೆ ಮತ್ತು ಹೊರಗೆ ತಮ್ಮದೇ ಆದ ವಿಭಿನ್ನ ಶೈಲಿಯಿಂದ ಗುರುತಿಸಿಕೊಂಡಿರುವ ಪಂತ್, ಶನಿವಾರ ಮುಂಜಾನೆ 12:46 ಕ್ಕೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಉತ್ತರಾಖಂಡ ಸಿಎಂಗೆ ಟ್ಯಾಗ್ ಮಾಡಿ ತಮಗೆ ತವರು ರಾಜ್ಯದಲ್ಲಿ ಜಮೀನು ಖರೀದಿಸಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಅಂದ್ಹಾಗೆ ಅವರು ದೆಹಲಿಯಿಂದ ಉತ್ತರಾಖಂಡಕ್ಕೆ ತಮ್ಮ ನೆಲೆಯನ್ನು ಬದಲಾಯಿಸಲು ಅವರು ಬಯಸಿದ್ದಾರೆ.

ವ್ಯಾಕರಣ ದೋಷ

ಕುತೂಹಲಕಾರಿ ಸಂಗತಿಯೆಂದರೆ.. ಪಂತ್ ಮಾಡಿರುವ ಪೋಸ್ಟ್‌ನಲ್ಲಿ ಸಾಕಷ್ಟು ವ್ಯಾಕರಣ ದೋಷಗಳು (Grammatical errors) ಹಾಗೂ ತಪ್ಪುಗಳಿದ್ದು ಇದು ಅಭಿಮಾನಿಗಳಲ್ಲಿ ತಮಾಷೆ ಹಾಗೂ ಆಶ್ಚರ್ಯ ಮೂಡಿಸಿದೆ. ಸಿಎಂ ಧಾಮಿಗೆ ಟ್ಯಾಗ್ ಮಾಡಿ ಬರೆದಿರುವ ಪಂತ್, ಹಲೋ ಸರ್, ಹೇಗಿದ್ದೀರಾ? ಉತ್ತರಾಖಂಡದ ಸ್ಥಳೀಯನಾಗಿ ಇದು ಬಹಳ ದಿನಗಳ ಕನಸು. ನಾನು ದೆಹಲಿಯಿಂದ ಉತ್ತರಾಖಂಡಕ್ಕೆ ಶಿಫ್ಟ್‌ ಆಗಲು ನಿರ್ಧರಿಸಿದ್ದೇನೆ. ಅದಕ್ಕಾಗಿ ಜಮೀನು ಖರೀದಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಇಲ್ಲಿ ವಾಸಿಸಲು ಸೂಕ್ತವಾದ ಜಾಗ ಸಿಗುತ್ತಿಲ್ಲ. ನನಗೆ ಉತ್ತರಾಖಂಡ ಎಂದರೆ ತುಂಬಾ ಪ್ರೀತಿ. ಜಮೀನು ಖರೀದಿಸಲು ದಯವಿಟ್ಟು ಸಹಾಯ ಮಾಡಿ. ಇತ್ತೀಚಿನ ದಿನಗಳಲ್ಲಿ ಜಮೀನು ಖರೀದಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಾನು ತವರೂರಿಗೆ ಮರಳಿ ಜನರಿಗೆ ಸಹಾಯ ಮಾಡಲು ಬಯಸುತ್ತೇನೆ. ಕಳೆದ 3 ವರ್ಷಗಳಿಂದ ನನಗೆ ಯಾವುದೇ ಜಾಗ ಸಿಕ್ಕಿಲ್ಲ, ನಿಮ್ಮ ಉತ್ತರದ ನಿರೀಕ್ಷೆಯಲ್ಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಉಡುಗೊರೆಯಾಗಿ ನೀಡುವಂತೆ ಕೇಳಿದ ಪಂತ್!

ಬೆನ್ನಲ್ಲೇ ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ಅವರು, ಪರಿಸ್ಥಿತಿ ಮತ್ತಷ್ಟು ರೋಚಕ. ರಾಜ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಕ್ಕೆ ಗೌರವವಾಗಿ ಸರ್ಕಾರ ತಮಗೆ ಭೂಮಿಯನ್ನು ಉಡುಗೊರೆ (Gift) ಯಾಗಿ ನೀಡಬೇಕೆಂದು ವಿನಂತಿಸಿದ್ದಾರೆ. ನಮ್ಮ ರಾಜ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಹಂತದಲ್ಲಿ ಪ್ರತಿನಿಧಿಸಿದ್ದಕ್ಕಾಗಿ ಉಡುಗೊರೆ ನೀಡಿದರೆ ತುಂಬಾ ಸಂತೋಷ. ಇಲ್ಲದಿದ್ದರೆ ಸರ್ಕಾರದ ದರದಲ್ಲೇ ಅದನ್ನು ಖರೀದಿಸಲು ಅವಕಾಶ ನೀಡಿ ಕನಿಷ್ಠ ನನ್ನ ಸ್ವಂತ ರಾಜ್ಯದಲ್ಲಿ ಮೊದಲ ಮನೆ ಕಟ್ಟಿಕೊಳ್ಳಬಹುದು. ಇದನ್ನು ಹೇಗೆ ಮಾಡಬೇಕೆಂದು ನನಗೆ ನಿಜವಾಗಿಯೂ ತಿಳಿದಿಲ್ಲ ಎಂದು ಬರೆದಿದ್ದಾರೆ.

ಈ ಅನಿರೀಕ್ಷಿತ ಟ್ವೀಟ್ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಅವರು ಮದ್ಯಪಾನ ಮಾಡಿದ್ದಾರೆಯೇ? ಇಷ್ಟೊಂದು ಕಾಗುಣಿತ ತಪ್ಪುಗಳು, ವ್ಯಾಕರಣ ದೋಷಗಳೊಂದಿಗೆ ಮಧ್ಯರಾತ್ರಿ 1 ಗಂಟೆಗೆ ಇಂತಹ ಪೋಸ್ಟ್ ಹಾಕಿದ್ದಾರೆ. ಟೆಸ್ಟ್ ಪಂದ್ಯ ಆಡುತ್ತಿರುವಾಗ ಅವರು ಈ ವಿಷಯಗಳಲ್ಲಿ ನಿರತರಾಗಿದ್ದಾರೆಯೇ? ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಂದೆಡೆ ಐಪಿಎಲ್ 2027 ಕ್ಕೂ ಮುನ್ನ ರಿಷಬ್ ಪಂತ್ ಅವರನ್ನು ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್‌ನಿಂದ ಅವರ ಹಳೆಯ ಫ್ರಾಂಚೈಸಿ ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಟ್ರೇಡ್ ಮಾಡಲಾಗಿತ್ತು. ದೆಹಲಿ ತಂಡ ಪಂತ್ ಅವರನ್ನು 15 ಕೋಟಿ ರೂ.ಗೆ ಖರೀದಿಸಿದರೆ ಲಕ್ನೋ ತಂಡಕ್ಕೆ ಪ್ರತಿಯಾಗಿ ಸ್ಪಿನ್ನರ್ ಕುಲದೀಪ್ ಯಾದವ್ (13.5 ಕೋಟಿ ರೂ.) ಅವರನ್ನು ಒಪ್ಪಂದದ ಭಾಗವಾಗಿ ನೀಡಲಾಗಿದೆ.

Scroll to load tweet…