ಭಾರತ ಕ್ರಿಕೆಟ್ ತಂಡದ ಆಟಗಾರರ ಪದೇ ಪದೇ ಗಾಯದ ಸಮಸ್ಯೆಯಿಂದಾಗಿ, ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ವೈದ್ಯಕೀಯ ತಂಡವು ಫಿಟ್ನೆಸ್ ಪರೀಕ್ಷೆಯನ್ನು ಕಠಿಣಗೊಳಿಸಿದೆ. ಯೋ-ಯೋ ಟೆಸ್ಟ್ ಬದಲು ಬ್ರಾಂಕೋ ಪರೀಕ್ಷೆ ಸೇರಿದಂತೆ ಹೊಸ ಮಾನದಂಡಗಳನ್ನು ಪರಿಚಯಿಸಲಾಗಿದ್ದು, ಹಿರಿಯ ಆಟಗಾರರಿಗಿದ್ದ ವಿನಾಯಿತಿಗಳನ್ನು ತೆಗೆದುಹಾಕಲಾಗಿದೆ.
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಪದೇ ಪದೇ ಗಾಯದ ಸಮಸ್ಯೆಗಳು ಕಾಡುತ್ತಿರುವುದರಿಂದ ಕಂಗೆಟ್ಟಿರುವ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್(ಸಿಒಇ)ನ ವೈದ್ಯಕೀಯ ತಂಡವು, ತನ್ನ ಫಿಟ್ನೆಸ್ ಪರೀಕ್ಷೆಯನ್ನು ಕಠಿಣಗೊಳಿಸಲು ಮುಂದಾಗಿದೆ.
ಈವರೆಗೂ ನಿರ್ದಿಷ್ಟವಲ್ಲದ ಮತ್ತು ವೈಯಕ್ತಿಕ ಆಯ್ಕೆಯ ಫಿಟ್ನೆಸ್ ಪರೀಕ್ಷೆಗಳಿದ್ದವು. ಇದರಿಂದಲೇ ಆಟಗಾರರ ಫಿಟ್ನೆಸ್ ಮಟ್ಟ ಕುಸಿದಿದೆ ಎಂಬುದು ವೈದ್ಯಕೀಯ ತಂಡಕ್ಕೆ ಮನವರಿಕೆಯಾಗಿದೆ. ಹೀಗಾಗಿ ಫಿಟ್ನೆಸ್ ಮಾನದಂಡಗಳನ್ನು ಪರಿಷ್ಕರಿಸಲು ಮತ್ತು ಏಕರೂಪಗೊಳಿಸುವ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಸೋಹಮ್ ದೇಸಾಯಿ ಅವರ ಬದಲಿಗೆ ಆ್ಯಡ್ರಿಯನ್ ಲೆರೂಕ್ಸ್ ಅವರು ದೈಹಿಕ ಸಾಮರ್ಥ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡ ನಂತರ, ಭಾರತದ ತಂಡದ ಫಿಟ್ನೆಸ್ ಪರೀಕ್ಷಾ ವಿಧಾನಗಳಲ್ಲಿ ಬದಲಾವಣೆ ಮಾಡಲಾಗಿತ್ತು. ಆಟಗಾರರು ಆಡಲು ಫಿಟ್ ಇದ್ದಾರೆಯೇ ಎಂಬುದನ್ನು ಪರೀಕ್ಷಿಸಲು ಯೋ-ಯೋ ಟೆಸ್ಟ್ ಬದಲು ಬ್ರಾಂಕೋ ಪರೀಕ್ಷೆಯನ್ನು ಪ್ರಮುಖ ಮಾನದಂಡವನ್ನಾಗಿ ಬಳಸಲು ನಿರ್ಧರಿಸಲಾಗಿತ್ತು.
ಚುರುಕುತನವನ್ನು ಪ್ರಮುಖವಾಗಿ ಅಳೆಯುವ ಬ್ರಾಂಕೋ ಪರೀಕ್ಷೆಗೆ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಮಾನದಂಡ ಇರಲಿಲ್ಲ. ಆದರೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಿನ ಬಳಿಕ ಫಿಟ್ನೆಸ್ ಮಟ್ಟ ಹೆಚ್ಚಳಕ್ಕೆ ವೈದ್ಯಕೀತ ತಂಡ ನಿರ್ಧರಿಸಿದೆ. ಆಡಲು ಫಿಟ್ ಇದ್ದಾರೆ ಎಂದು ಪರಿಗಣಿಸಲು ಅಗತ್ಯವಿರುವ ವಿವಿಧ ವ್ಯಾಯಾಮಗಳನ್ನು ಪೂರ್ಣಗೊಳಿಸಲು 5.15 ರಿಂದ 5.20 ನಿಮಿಷಗಳ ಅವಧಿಯನ್ನು ಮೂಲ ಮಾನದಂಡವಾಗಿ ನಿಗದಿಪಡಿಸಿದೆ. ಅಲ್ಲದೆ 2 ಕಿ.ಮೀ. ಓಟ ಪೂರ್ಣಗೊಳಿಸಲು 9-10 ನಿಮಿಷಗಳ ಕಾಲಮಿತಿ ನಿಗದಿಪಡಿಸಿದೆ ಎಂದು ಎಂದು ವರದಿಯಾಗಿದೆ. ಈ ಹಿಂದೆ ಬಿಸಿಸಿಐ ಯೋ ಯೋ ಪರೀಕ್ಷೆ ಪಾಸ್ ಆಗಲು 16.5 ಅಂಕ ಮಾನದಂಡ ನಿಗದಿಪಡಿಸಿತ್ತು.
ವಿನಾಯಿತಿ ತೆರವು:
ಈವರೆಗೂ ಹಿರಿಯ ಆಟಗಾರರಿಗೆ ಫಿಟ್ನೆಸ್ ಪರೀಕ್ಷೆಯಲ್ಲಿ ಕೆಲ ವಿನಾಯಿತಿ ನೀಡಲಾಗುತ್ತಿತ್ತು. ಗಾಯಗೊಂಡಿದ್ದ ಇತರ ಪ್ರಮುಖ ಆಟಗಾರರಿಗೂ ನಿಯಮದಲ್ಲಿ ಸಡಿಲಿಕೆ ಮಾಡಲಾಗುತ್ತಿತ್ತು. ನಿರ್ದಿಷ್ಟ ಟೂರ್ನಿ, ಸರಣಿಯಲ್ಲಿ ಆ ಆಟಗಾರರ ಅಗತ್ಯವಿದೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಆದರೆ ಇನ್ನು ಮುಂದೆ ಎಲ್ಲಾ ಆಟಗಾರರರಿಗೂ ಏಕರೂಪದ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಗೊತ್ತಾಗಿದೆ.
ಇಂದಿನಿಂದ ಭಾರತಕ್ಕೆ 3 ದಿನ ಅಭ್ಯಾಸ ಪಂದ್ಯ
ಶ್ರೀಲಂಕಾ ಸರಣಿಯ ಪೂರ್ವಭಾವಿಯಾಗಿ ಶುಕ್ರವಾರದಿಂದ 4 ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ. ಭಾರತ ತಂಡಕ್ಕೆ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ತಂಡ ಸವಾಲು ಎದುರಾಗಲಿದೆ. ಪಂದ್ಯ ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳಲಿದೆ.


