ಗೌತಮ್ ಗಂಭೀರ್ ಅವರ ಕೋಚಿಂಗ್ ಅವಧಿಯಲ್ಲಿ ಭಾರತ ತಂಡವು ಐತಿಹಾಸಿಕ ಸೋಲುಗಳನ್ನು ಅನುಭವಿಸುತ್ತಿದೆ. ಲೇಖನವು ಗಂಭೀರ್ ಅವರ 'ಸೂಪರ್‌ಸ್ಟಾರ್ ಸಂಸ್ಕೃತಿ' ವಿರೋಧಿ ನಿಲುವು ಮತ್ತು ಹಿರಿಯ ಆಟಗಾರರ ನಿರ್ಗಮನದ ಹಿಂದಿನ ಕಾರಣಗಳನ್ನು ವಿಮರ್ಶಿಸುತ್ತದೆ. ಐರ್ಲೆಂಡ್ ವಿರುದ್ಧದ ಸರಣಿ ಸೋಲು ಈ ವೈಫಲ್ಯಗಳ ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿದೆ.

  • ಸುದರ್ಶನ್‌, ಏಷ್ಯಾನೆಟ್ ಸುವರ್ಣ ನ್ಯೂಸ್

ಹೌದು.ಅವನು ಎರಡು ದೊಡ್ಡ ಇನ್ನಿಂಗ್ಸ್’ಗಳನ್ನು ಆಡಿದ್ದ. ಆ ಎರಡೂ ಇನ್ನಿಂಗ್ಸ್’ಗಳು ದೇಶಕ್ಕೆ ಎರಡು ವಿಶ್ವಕಪ್’ಗಳನ್ನು ಗೆಲ್ಲಿಸಿಕೊಟ್ಟಿದ್ದವು.. ಅದನ್ನು ದೇಶ ಎಂದಿಗೂ ಮರೆಯದು. ಹಾಗೆಂದು ಚಿನ್ನದ ಚೂರಿ ಎಂಬ ಕಾರಣಕ್ಕೆ ಅದರಿಂದ ಚುಚ್ಚಿಕೊಳ್ಳಲು ಸಾಧ್ಯವೇ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘‘ಗೌತಮ್ ಗಂಭೀರ್ ಮತ್ತೊಬ್ಬ ಗ್ರೆಗ್ ಚಾಪೆಲ್ ಆಗುತ್ತಾನೆ’’ ಎಂದು ಆತ ಭಾರತ ತಂಡದ ಕೋಚ್ ಆಗಿ ನೇಮಕವಾದ ದಿನವೇ ಹೇಳಿದ್ದೆ.. ಇವನಿಗೆ ಹೋಲಿಸಿದರೆ ಅವನೇ ವಾಸಿ. ಸೋಲನ್ನೇ ಕಾಣದ ನೆಲದಲ್ಲಿ ಭಾರತ ತಂಡ ಸೋಲುತ್ತಿದೆ. ಕ್ರಿಕೆಟ್ ಶಿಶುಗಳೆನಿಸಿಕೊಂಡವರು ಭಾರತವನ್ನು ಸೋಲಿಸುತ್ತಿದ್ದಾರೆ. ವಿಶ್ವಚಾಂಪಿಯನ್ ತಂಡವೊಂದು ಐರ್ಲೆಂಡ್ ವಿರುದ್ಧ ಒಂದೂ ಪಂದ್ಯ ಗೆಲ್ಲದೆ ಟಿ20 ಸರಣಿಯನ್ನು ಸೋಲುವುದೆಂದರೆ?

ನಿಜ. ಗೌತಮ್ ಗಂಭೀರ್ ಕೋಚ್ ಆಗಿರುವಾಗಲೇ ಭಾರತ ಟಿ20 ವಿಶ್ವಕಪ್ ಗೆದ್ದಿದೆ, ಚಾಂಪಿಯನ್ಸ್ ಟ್ರೋಫಿಯನ್ನೂ ಗೆದ್ದಿದೆ. ಗಂಭೀರ್ ಕೋಚ್ ಆಗುವುದಕ್ಕೆ ಮೊದಲೂ ಭಾರತ ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್’ಗಳನ್ನು ಗೆದ್ದಿತ್ತು. ಮುಂದೆಯೂ ಗೆಲ್ಲುತ್ತದೆ. ಆದರೆ ಆ ಗೆಲುವುಗಳ ನೆರಳಲ್ಲಿ ಇಂಥಾ ದೊಡ್ಡ ಅವಮಾನಗಳನ್ನು ಅಡಗಿಸಲಾಗದು. ಎರಡು ಯಶಸ್ಸುಗಳ ಆಸರೆಯಲ್ಲಿ ಹತ್ತಾರು ಘನಘೋರ ಸೋಲುಗಳಿಗೆ ಆಶ್ರಯ ಪಡೆಯಲಾಗದು. ಭಾರತೀಯ ಕ್ರಿಕೆಟ್’ನ ದುರದೃಷ್ಟ. ಗೌತಮ್ ಗಂಭೀರ್ ಅದನ್ನೇ ಮಾಡುತ್ತಿದ್ದಾನೆ.

‘ವ್ಯಕ್ತಿಗಿಂತ ತಂಡ ಮುಖ್ಯ’ ಎನ್ನುವ ಈ ಆಷಾಢಭೂತಿ ಮನುಷ್ಯ ಈಗ ತಂಡದ ವೈಫಲ್ಯದ ಹೊಣೆ ಹೊರಲೇಬೇಕಲ್ಲವೇ? ‘‘ಸೂಪರ್‌ಸ್ಟಾರ್ ಸಂಪ್ರದಾಯವನ್ನು ಮುಗಿಸಿ ಬಿಡುತ್ತೇನೆ’’ ಎಂದಿದ್ದ. ಇವನು ತಂಡವನ್ನೇ ಮುಗಿಸುತ್ತಿದ್ದಾನೆ. ತನಗಿಂತ ಶ್ರೇಷ್ಠರು ತನ್ನ ಕಣ್ಣೆದುರು ಇರಲೇಬಾರದೆಂಬ ಮನಸ್ಥಿತಿಯವನು ಗೌತಮ್ ಗಂಭೀರ್. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆರ್.ಅಶ್ವಿನ್ ಟೆಸ್ಟ್ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಕ್ಷಣಗಳನ್ನೊಮ್ಮೆ ನೆನಪು ಮಾಡಿಕೊಳ್ಳಿ.. ಆಸ್ಟ್ರೇಲಿಯಾ ಪ್ರವಾಸದ ಮಧ್ಯೆಯೇ ಅಶ್ವಿನ್ ಟೆಸ್ಟ್ ನಿವೃತ್ತಿ ನಿರ್ಧಾರ ಪ್ರಕಟಿಸಿ ತಂಡವನ್ನು ತೊರೆದು ನೇರ ಮನೆಗೆ ಮರಳುತ್ತಾನೆ. ಮುಂದಿನ ಟೆಸ್ಟ್ ಸರಣಿಗೆ ಸಿದ್ಧನಾಗುತ್ತಿದ್ದ ವಿರಾಟ್ ಇದ್ದಕ್ಕಿದ್ದಂತೆ ಟೆಸ್ಟ್ ಕ್ರಿಕೆಟ್’ಗೆ ಗುಡ್ ಬೈ ಹೇಳುತ್ತಾನೆ. ರೋಹಿತ್ ಶರ್ಮಾನದ್ದೂ ಅದೇ ಕಥೆ.

ಏಕೆ ಹೀಗಾಯಿತು..? 10-15 ವರ್ಷಗಳ ಕಾಲ ಜಗತ್ತೇ ಮೆಚ್ಚುವಂಥಾ ಆಟವಾಡಿದ್ದ ಶ್ರೇಷ್ಠರು ಆ ರೀತಿ ವಿದಾಯ ಹೇಳಲು ಕಾರಣವೇನು ಎಂದು ನೋಡಿದರೆ ಉತ್ತರದ ರೂಪದಲ್ಲಿ ಸಿಗುವುದು ಈ ಮನುಷ್ಯ ಮತ್ತು ಅವನ ಮನಸ್ಥಿತಿ. ಅವನಿಗೆ ತಂಡದಲ್ಲಿ ಯಾರೂ ಸೂಪರ್‌ಸ್ಟಾರ್’ಗಳಿರಬಾರದು. ಅವರಿದ್ದರೆ ಮೈದಾನದ ಹೊರಗೂ, ಒಳಗೂ ಇಡೀ ತಂಡ, ಇಡೀ ವ್ಯವಸ್ಥೆ ಅವರ ಸುತ್ತ ಸುತ್ತುತ್ತಿರುತ್ತದೆ. ಅದನ್ನು ಈತ ಸಹಿಸಲಾರ.

ಅಷ್ಟಕ್ಕೂ ಗೌತಮ್ ಗಂಭೀರ್ ಈ ಸೂಪರ್‌ಸ್ಟಾರ್ ಸಂಸ್ಕೃತಿಯನ್ನು ವಿರೋಧಿಸುವುದೇಕೆ? ಉತ್ತರ ತುಂಬಾ ಸರಳ. ಅವನು ಆಡುತ್ತಿದ್ದ ದಿನಗಳಲ್ಲಿ ಭಾರತ ತಂಡದಲ್ಲಿ ಸೂಪರ್ ಸ್ಟಾರ್’ಗಳ ದೊಡ್ಡ ದಂಡೇ ಇತ್ತು. ಸಚಿನ್ ತೆಂಡೂಲ್ಕರ್, ಎಂ.ಎಸ್ ಧೋನಿ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ ಖಾನ್. ಈ ಲೆಜೆಂಡ್’ಗಳ ಮಧ್ಯೆ ‘ಗಂಭೀರ’ ಕಳೆದೇ ಹೋಗಿದ್ದ. ತನಗೆ ಸಿಗದಿದ್ದದ್ದು ಬೇರೆಯವರಿಗೂ ಸಿಗಬಾರದು ಎಂಬ ಮನಸ್ಥಿತಿಯಿದು. ಸೂಪರ್ ಸ್ಟಾರ್’ಗಳಿಂದಲೇ ಭಾರತೀಯ ಕ್ರಿಕೆಟ್ ಎಂಬ ವಾಸ್ತವವನ್ನು ಗೌತಮ್ ಗಂಭೀರ್ ಮರೆತ ಹಾಗಿದೆ. ಇಲ್ಲಿ ಒಂದೊಂದು ಪೀಳಿಗೆಗೂ ಒಬ್ಬೊಬ್ಬ ಸೂಪರ್ ಸ್ಟಾರ್ ಹುಟ್ಟುತ್ತಲೇ ಇರಬೇಕು. ಅವರಿಂದಲೇ ಸ್ಫೂರ್ತಿ.. ಅವರಿಂದಲೇ ಕೀರ್ತಿ.

ಸುನಿಲ್ ಗವಾಸ್ಕರ್, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ. ಹೀಗೆ ಸೂಪರ್ ಸ್ಟಾರ್’ಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರೆಲ್ಲಾ ತಾವೂ ಆಡಿ ಆಟವನ್ನೂ ಗೆಲ್ಲಿಸಿದವರು. ಆಟದಿಂದ ಅವರಿಗೂ ಕೀರ್ತಿ, ಅವರಿಂದ ಆಟಕ್ಕೂ ಕೀರ್ತಿ..

ಅಂಥಾ ಸೂಪರ್ ಸ್ಟಾರ್’ಗಳೇ ಬೇಡವೆಂದರೆ..?

ಇನ್ನು ಐರ್ಲೆಂಡ್ ವಿರುದ್ಧ ವೈಭವ್ ಸೂರ್ಯವಂಶಿಯನ್ನು ಏಕೆ ಆಡಿಸಿಲ್ಲ ಎಂಬ ಪ್ರಶ್ನೆ. ಅವನನ್ನು ಆಡಿಸಿದ್ದಿದ್ದರೆ ಭಾರತ ಸೋಲುತ್ತಿರಲಿಲ್ಲವೇ..? ಗೊತ್ತಿಲ್ಲ.. ಆದರೆ ಗೆಲುವಿನ ಅವಕಾಶವಂತೂ ಹೆಚ್ಚಾಗುತ್ತಿತ್ತು. ಆ ಹುಡುಗ ಅದ್ಭುತ ಲಯದಲ್ಲಿದ್ದಾನೆ. ದೊಡ್ಡ ದೊಡ್ಡ ಕ್ರಿಕೆಟಿಗರೆಲ್ಲಾ ಸೂರ್ಯವಂಶಿಯನ್ನು ಆಡಿಸದೇ ಇರುವುದಕ್ಕೆ ಅಚ್ಚರಿ ಹೊರ ಹಾಕುತ್ತಿದ್ದಾರೆ.

ಅವನಿಗಾಗಿ ಯಾರನ್ನು ಕೈಬಿಡುವುದು..? ಅಭಿಷೇಕ್ ಶರ್ಮಾನನ್ನೇ.. ಸಂಜು ಸ್ಯಾಮ್ಸನ್’ನನ್ನೇ..? ಇದು ಟೀಮ್ ಮ್ಯಾನೇಜ್ಮೆಂಟ್ ಪ್ರಶ್ನೆ. ಈ ಪ್ರಭೂತಿಗಳು ಒಂದು ವಿಚಾರವನ್ನು ಮರೆತಂತಿದೆ. ಕ್ರಿಕೆಟ್ ಶ್ರೇಷ್ಠರೆಲ್ಲಾ ಒಂದು ಕಾಲದಲ್ಲಿ ಹೊಸಬರೇ. ಸೀನಿಯರ್’ಗಳನ್ನು replace ಮಾಡಿಯೇ ಆಡಿದವರು. ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಾಗಲಾದರೂ ಸೂರ್ಯವಂಶಿಯನ್ನು ಆಡಿಸಬಹುದಿತ್ತಲ್ಲವೇ? ಆಡಿಸಬಹುದಿತ್ತು. ಆಡಿಸಲಿಲ್ಲ.

ಗೌತಮ್ ಗಂಭೀರನ ಕೋಚಿಂಗ್ ಅವಧಿಯಲ್ಲಿ ಭಾರತ ತಂಡ ಸೋಲುಗಳಲ್ಲಿ ಚರಿತ್ರೆಯನ್ನೇ ತಿದ್ದಿ ಬರೆಯುತ್ತಿದೆ.

- 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋಲು

- 36 ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧ ತವರು ಟೆಸ್ಟ್ ಸರಣಿ ಸೋಲು

- 15 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ತವರು ಟೆಸ್ಟ್ ಸೋಲು

- 25 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ತವರು ಟೆಸ್ಟ್ ಸರಣಿ ಸೋಲು

- 47 ವರ್ಷಗಳ ನಂತರ ತವರು ನೆಲದಲ್ಲಿ ಸತತ 3 ಟೆಸ್ಟ್ ಸೋಲು

- 19 ವರ್ಷಗಳ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೆಸ್ಟ್ ಸೋಲು

- 12 ವರ್ಷಗಳ ವಾಂಖೆಡೆ ಕ್ರೀಡಾಂಗಣದಲ್ಲಿ ಟೆಸ್ಟ್ ಸೋಲು

- 8 ವರ್ಷಗಳ ನಂತರ ಈಡನ್ ಗಾರ್ಡನ್ಸ್’ನಲ್ಲಿ ಭಾರತಕ್ಕೆ ಸೋಲು

- 12 ವರ್ಷಗಳ ನಂತರ ತವರು ನೆಲದಲ್ಲಿ ಟೆಸ್ಟ್ ಸರಣಿ ಸೋಲು

- ಇತಿಹಾಸದಲ್ಲಿ ಮೊದಲ ಬಾರಿ ತವರು ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ (3-0)

- 13 ವರ್ಷಗಳ ನಂತರ ಮೆಲ್ಬೋರ್ನ್’ನಲ್ಲಿ ಟೆಸ್ಟ್ ಸೋಲು

- 10 ವರ್ಷಗಳ ನಂತರ ಸತತ ಎರಡು ಟೆಸ್ಟ್ ಸರಣಿ ಸೋಲು

- 10 ವರ್ಷಗಳ ನಂತರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲು

- ಮೊದಲ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ತಲುಪಲು ವಿಫಲ

- 17 ವರ್ಷಗಳ ನಂತರ ಅಡಿಲೇಡ್’ನಲ್ಲಿ ಏಕದಿನ ಪಂದ್ಯದಲ್ಲಿ ಸೋಲು

- ಭಾರತದಲ್ಲಿ ಮೊದಲ ಬಾರಿ 50 ರನ್’ಗಳೊಳಗೆ ಆಲೌಟ್

- ಟೆಸ್ಟ್ ಕ್ರಿಕೆಟ್’ನಲ್ಲಿ ಭಾರತಕ್ಕೆ ಅತೀ ದೊಡ್ಡ ಸೋಲು (408 ರನ್)

- ನ್ಯೂಜಿಲೆಂಡ್ ವಿರುದ್ಧ ಮೊದಲ ಬಾರಿ ತವರು ಏಕದಿನ ಸರಣಿ ಸೋಲು

- ಇತಿಹಾಸದಲ್ಲೇ ಮೊದಲ ಬಾರಿ ಐರ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಸೋಲು

- ಇತಿಹಾಸದಲ್ಲೇ ಮೊದಲ ಬಾರಿ ಐರ್ಲೆಂಡ್ ವಿರುದ್ಧ ಟಿ20 ಸರಣಿ ಸೋಲು

‘‘ಗಂಭೀರನನ್ನು ಏಕೆ ದ್ವೇಷಿಸುತ್ತೀರಿ’’ ಎಂದು ಪ್ರಶ್ನಿಸುವವರ ಗಮನಕ್ಕೆ. ಅವನ ಮೇಲೆ ಪ್ರೀತಿಯೂ ಇಲ್ಲ, ದ್ವೇಷವೂ ಇಲ್ಲ. ಕಾರಣವಿಲ್ಲದೆ ಅವನನ್ನು ಟೀಕಿಸುವುದೂ ಇಲ್ಲ, ಕಾರಣಗಳಲ್ಲದ ಕಾರಣಕ್ಕೆ ಅವನನ್ನು ಹೊಗಳುವುದೂ ಇಲ್ಲ. ಮತ್ತೆ ಮತ್ತೆ ಹೇಳುತ್ತೇನೆ. ಈ ವ್ಯಕ್ತಿ ಶುದ್ಧ ಅಹಂಕಾರಿ. ಸರ್ವಾಧಿಕಾರಿ. ಅಷಾಢಭೂತಿ. ಅವನ coaching approach, team strategy, ಹಿರಿಯ ಆಟಗಾರರನ್ನು ನಿರ್ವಹಿಸುತ್ತಿರುವ ರೀತಿ ವಿಮರ್ಶೆಗೊಳಪಡಲೇಬೇಕು.. ಐರ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲಿನ ‘ದುರಂತ’ದ ನಂತರವಾದರೂ.