ಬೆಂಗಳೂರಿನ 40 ಎಕರೆ ಬಂಜರು ಭೂಮಿಯನ್ನು ವಿಶ್ವದರ್ಜೆಯ 'ಸೆಂಟರ್ ಆಫ್ ಎಕ್ಸಲೆನ್ಸ್' ಆಗಿ ಪರಿವರ್ತಿಸಿದ ಜೈ ಶಾ ಮತ್ತು ವಿವಿಎಸ್ ಲಕ್ಷ್ಮಣ್ ಅವರ ದೃಢ ಸಂಕಲ್ಪಕ್ಕೆ ಈಗ ಜಯ ಸಿಕ್ಕಿದೆ. ಈ ಬೃಹತ್ ಯೋಜನೆಯನ್ನು ಕೇವಲ ಎರಡು ವರ್ಷಗಳಲ್ಲಿ ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸುವ ಮೂಲಕ ಭಾರತೀಯ ಕ್ರಿಕೆಟ್ ಮೂಲಸೌಕರ್ಯದಲ್ಲಿ ಹೊಸ ಕ್ರಾಂತಿ ಮಾಡಲಾಗಿದೆ.
ಬೆಂಗಳೂರು: ಟೀಮ್ ಇಂಡಿಯಾ ಕ್ರಿಕೆಟ್‌ನ ಭವಿಷ್ಯವನ್ನು ಬದಲಿಸಬಲ್ಲ ಅತ್ಯಾಧುನಿಕ 'ಸೆಂಟರ್ ಆಫ್ ಎಕ್ಸಲೆನ್ಸ್' (CoE) ಈಗ ಬೆಂಗಳೂರಿನಲ್ಲಿ ತಲೆ ಎತ್ತಿ ನಿಂತಿದೆ. ಆದರೆ, ಇಂದು ನಾವು ನೋಡುತ್ತಿರುವ ಅದ್ಭುತ ಕ್ರೀಡಾ ಸಂಕೀರ್ಣದ ಹಿಂದೆ ಬಿಸಿಸಿಐ ಮಾಜಿ ಕಾರ್ಯದರ್ಶಿ ಜೈ ಶಾ ಮತ್ತು ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಅವರ ಹಗಲಿರುಳಿನ ಪರಿಶ್ರಮವಿದೆ. ಬರೋಬ್ಬರಿ 40 ಎಕರೆ ಬಂಜರು ಭೂಮಿ ಇಂದು ವಿಶ್ವದರ್ಜೆಯ ಕ್ರಿಕೆಟ್ ತಾಣವಾಗಿ ಬದಲಾದ ರೋಚಕ ಕಥೆ ಇಲ್ಲಿದೆ.

40 ಎಕರೆ ಬಂಜರು ಭೂಮಿ..!
ಬೆಂಗಳೂರಿನಲ್ಲಿ ಬಿಸಿಸಿಐಗೆ ಸೇರಿದ 40 ಎಕರೆ ಭೂಮಿ ವರ್ಷಗಟ್ಟಲೆ ಯಾವುದೇ ಬಳಕೆಯಿಲ್ಲದೆ ಬಿದ್ದಿತ್ತು. ಭೂಮಿ ಖಾಲಿ ಇರುವುದನ್ನು ಕಂಡು ಅನೇಕರು ಅದನ್ನು ವಶಪಡಿಸಿಕೊಳ್ಳಲು ಸಂಚು ರೂಪಿಸಿದ್ದರು. ಭೂಮಿಯನ್ನು ಉಳಿಸಿಕೊಳ್ಳುವುದೇ ಬಿಸಿಸಿಐಗೆ ದೊಡ್ಡ ಸವಾಲಾಗಿತ್ತು. ಅಂತಹ ಸಮಯದಲ್ಲಿ ಎಂಟ್ರಿ ಕೊಟ್ಟವರು ಜೈ ಶಾ. ಹಳೆಯ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (NCA) ಇನ್ನು ಸಾಕು, ಭಾರತಕ್ಕೆ ವಿಶ್ವದರ್ಜೆಯ ಸುಸಜ್ಜಿತ ಅಕಾಡೆಮಿ ಬೇಕೇ ಬೇಕು ಎಂದು ಜೈ ಶಾ ಹಠಕ್ಕೆ ಬಿದ್ದರು.
ಯುದ್ಧೋಪಾದಿಯಲ್ಲಿ ಶುರುವಾದ ಕೆಲಸ
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ನೆನಪಿಸಿಕೊಳ್ಳುವಂತೆ, ಜೈ ಶಾ ಈ ಯೋಜನೆಯನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಂಡರು. 2022ರ ಫೆಬ್ರವರಿ 14ರಂದು ಕೆಲಸ ಆರಂಭಿಸುವ ಮೊದಲು ನೂರಾರು ಕಾನೂನು ತೊಡಕುಗಳಿದ್ದವು. ಜೈ ಶಾ ಸ್ವತಃ ಬೆಂಗಳೂರಿಗೆ ಹಲವಾರು ಬಾರಿ ಭೇಟಿ ನೀಡಿ, ಅಧಿಕಾರಿಗಳ ಜೊತೆ ಮಾತನಾಡಿ ಎಲ್ಲಾ ಅಡೆತಡೆಗಳನ್ನು ನಿವಾರಿಸಿದರು. ಭೂಮಿಯನ್ನು ರೆಗ್ಯುಲರೈಸ್ ಮಾಡುವುದು ಹಿಮಾಲಯದಷ್ಟೇ ದೊಡ್ಡ ಸವಾಲಾಗಿತ್ತು, ಆದರೆ ಜೈ ಶಾ ಅದರಲ್ಲಿ ಜಯಗಳಿಸಿದರು.

ಬೆಂಗಳೂರಿಗೆ ಬಂದ ವಿವಿಎಸ್ ಲಕ್ಷ್ಮಣ್
2021ರ ಡಿಸೆಂಬರ್‌ನಲ್ಲಿ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗಿ ಹೋದಾಗ ಅಕಾಡೆಮಿಯ ಹೊಣೆಯನ್ನು ವಿವಿಎಸ್ ಲಕ್ಷ್ಮಣ್ ಹೆಗಲಿಗೆ ಹಾಕಲಾಯಿತು. ಜೈ ಶಾ ಮತ್ತು ಸೌರವ್ ಗಂಗೂಲಿ ಅವರ ಆಹ್ವಾನದ ಮೇರೆಗೆ ಲಕ್ಷ್ಮಣ್ ಬೆಂಗಳೂರಿಗೆ ಬಂದರು. ಕೇವಲ ಎರಡೇ ವರ್ಷಗಳಲ್ಲಿ ಇಡೀ ಇನ್ಫ್ರಾಸ್ಟ್ರಕ್ಚರ್ ಸಿದ್ಧವಾದದ್ದು ನಂಬಲಸಾಧ್ಯ. ವಾಸ್ತುಶಿಲ್ಪಿಗಳು ಮತ್ತು ಎಲ್ ಅಂಡ್ ಟಿ (L&T) ತಂಡದ ಜೊತೆ ಜೈ ಶಾ ನಡೆಸುತ್ತಿದ್ದ ಸುದೀರ್ಘ ಸಭೆಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಪ್ರತಿಯೊಂದು ಸಣ್ಣ ವಿಚಾರದಲ್ಲೂ ಅವರು ಆಸಕ್ತಿ ವಹಿಸುತ್ತಿದ್ದರು ಎಂದು ಲಕ್ಷ್ಮಣ್ ಜೈ ಶಾ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.
ನನಸಾದ ಕನಸು
ನವೆಂಬರ್ 2024ರಲ್ಲಿ ಈ ಸೆಂಟರ್ ಆಫ್ ಎಕ್ಸಲೆನ್ಸ್ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದೆ. ಬರೀ ಐಡಿಯಾ ಆಗಿದ್ದ ಒಂದು ಯೋಜನೆ ಇಂದು ಸಾವಿರಾರು ಯುವ ಕ್ರಿಕೆಟಿಗರ ಭವಿಷ್ಯ ರೂಪಿಸುವ ತಾಣವಾಗಿ ಮಾರ್ಪಟ್ಟಿದೆ. 40 ಎಕರೆ ಬಂಜರು ಭೂಮಿಯಲ್ಲಿ ಇಂದು ಕ್ರಿಕೆಟ್‌ನ 'ಅರಮನೆ' ಮಿನುಗುತ್ತಿದೆ.


