ಟಿ20 ವಿಶ್ವಕಪ್ ಗೆದ್ದ ಭಾರತದ ಸ್ಟಾರ್ ಆಟಗಾರರಾದ ಬುಮ್ರಾ, ಹಾರ್ದಿಕ್, ಸೂರ್ಯಕುಮಾರ್ ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್‌ ಪರ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಈ ಸಾಮೂಹಿಕ ವೈಫಲ್ಯದಿಂದಾಗಿ, ಐದು ಬಾರಿಯ ಚಾಂಪಿಯನ್ ಮುಂಬೈ ತಂಡವು ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.

ಚೆನ್ನೈ: ಕೆಲವೇ ವಾರಗಳ ಹಿಂದೆ ವಿಶ್ವಕಪ್ ಗೆದ್ದು ದೇಶದ ಹೀರೋಗಳಾಗಿದ್ದ ಆಟಗಾರರು, ಈಗ ಐಪಿಎಲ್‌ನಲ್ಲಿ ತಮ್ಮ ತಂಡಕ್ಕಾಗಿ ಹೋರಾಡಲು ಕಷ್ಟಪಡುತ್ತಿದ್ದಾರೆ. ಜಸ್‌ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್... ಈ ಸ್ಟಾರ್ ಆಟಗಾರರ ಪ್ರದರ್ಶನ ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್‌ಗೆ ದೊಡ್ಡ ತಲೆನೋವಾಗಿದೆ. ಮಾರ್ಚ್ 8 ರಂದು ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇದೇ ಆಟಗಾರರು, ಈಗ ಫಾರ್ಮ್ ಇಲ್ಲದೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ದುಬಾರಿಯಾದ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ

ಟಿ20 ಕ್ರಿಕೆಟ್‌ನ ವಿಶ್ವದ ನಂಬರ್ ಒನ್ ಬೌಲರ್ ಎನಿಸಿಕೊಂಡಿರುವ ಬುಮ್ರಾ, ಈವರೆಗೆ 9 ಪಂದ್ಯಗಳಿಂದ ಪಡೆದಿದ್ದು ಕೇವಲ 3 ವಿಕೆಟ್‌ಗಳನ್ನು ಮಾತ್ರ. ಅವರ ಬೌಲಿಂಗ್ ಸರಾಸರಿ 94.67. ಬುಮ್ರಾ ಅವರಂತಹ ಆಟಗಾರನಿಗೆ ಇದು ನಿಜಕ್ಕೂ ಅಚ್ಚರಿಯ ಸಂಗತಿ. ತಿಲಕ್ ವರ್ಮಾ ಒಂದು ಶತಕ ಬಾರಿಸಿದ್ದರೂ, ಅವರ ಆಟದಲ್ಲಿ ಸ್ಥಿರತೆ ಕಾಣುತ್ತಿಲ್ಲ. ಅವರು ಈವರೆಗೆ ಒಟ್ಟು 193 ರನ್ ಗಳಿಸಿದ್ದಾರೆ. ಇನ್ನು ನಾಯಕ ಹಾರ್ದಿಕ್ ಪಾಂಡ್ಯ ಅವರಿಗೂ ಇದು ಕಠಿಣ ಸೀಸನ್ ಆಗಿದೆ. ನಾಯಕನಾಗಿ ಮತ್ತು ಆಟಗಾರನಾಗಿ ಅವರು ವಿಫಲರಾಗಿದ್ದಾರೆ. 8 ಪಂದ್ಯಗಳಿಂದ 183 ರನ್ ಮತ್ತು ಕೇವಲ 4 ವಿಕೆಟ್ ಪಡೆದಿದ್ದಾರೆ.

ಹಿಂದೊಮ್ಮೆ ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್ ಆಗಿದ್ದ ಸೂರ್ಯಕುಮಾರ್ ಯಾದವ್ ಕೂಡ ಫಾರ್ಮ್‌ಗಾಗಿ ಪರದಾಡುತ್ತಿದ್ದಾರೆ. ಅವರು 9 ಪಂದ್ಯಗಳಿಂದ ಗಳಿಸಿದ್ದು 183 ರನ್ ಮಾತ್ರ. ಉತ್ತಮ ಆರಂಭ ಸಿಕ್ಕರೂ ಅದನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ತಂಡದ ಪ್ರಮುಖ ಆಟಗಾರರ ಈ ಕಳಪೆ ಫಾರ್ಮ್ ನಡುವೆಯೂ, ಕೋಚ್ ಮಹೇಲಾ ಜಯವರ್ಧನೆ ಮಾತ್ರ ಭರವಸೆ ಕಳೆದುಕೊಂಡಿಲ್ಲ. 'ಇದು ತಂಡದ ಸಾಮೂಹಿಕ ವೈಫಲ್ಯ, ಒಬ್ಬ ಬುಮ್ರಾ ಅವರ ತಪ್ಪಲ್ಲ. ಬೇರೆ ಬೌಲರ್‌ಗಳು ವಿಕೆಟ್ ಪಡೆದಾಗ ಮಾತ್ರ ಬುಮ್ರಾಗೆ ಆಕ್ರಮಣಕಾರಿಯಾಗಿ ಬೌಲ್ ಮಾಡಲು ಸಾಧ್ಯ' ಎಂದು ಜಯವರ್ಧನೆ ಹೇಳಿದ್ದಾರೆ.

ಸೂರ್ಯಕುಮಾರ್ ಶೀಘ್ರದಲ್ಲೇ ಫಾರ್ಮ್‌ಗೆ ಮರಳಲಿದ್ದಾರೆ ಮತ್ತು ತಿಲಕ್ ವರ್ಮಾ ತಮ್ಮ ಹೊಸ ಜವಾಬ್ದಾರಿಗಳನ್ನು ಕಲಿಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 'ಅಂಕಿಅಂಶಗಳ ಪ್ರಕಾರ ಮುಂಬೈ ತಂಡಕ್ಕೆ ಇನ್ನೂ ಅವಕಾಶಗಳಿವೆ. ಉಳಿದಿರುವ ಐದು ಪಂದ್ಯಗಳಲ್ಲೂ ಗೆಲ್ಲಲು ನಮ್ಮ ತಂಡ ಹೋರಾಡಲಿದೆ' ಎಂದು ಅವರು ಸ್ಪಷ್ಟಪಡಿಸಿದರು. ಕಾಗದದ ಮೇಲೆ ವಿಶ್ವದ ಅತ್ಯುತ್ತಮ ತಂಡಗಳಲ್ಲಿ ಒಂದಾಗಿರುವ ಮುಂಬೈ ಇಂಡಿಯನ್ಸ್, ಈ ಸಂಕಷ್ಟದಿಂದ ಹೇಗೆ ಹೊರಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ಲೇ ಆಫ್‌ ರೇಸ್‌ನಿಂದ ಮುಂಬೈ ಇಂಡಿಯನ್ಸ್ ಬಹುತೇಕ ಔಟ್:

ಐದು ಬಾರಿಯ ಐಪಿಎಲ್‌ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಟೂರ್ನಿ ಆರಂಭಕ್ಕೂ ಮೊದಲು ಪ್ಲೇ ಆಫ್ ಪ್ರವೇಶಿಸಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಇನ್ನು ಇದಷ್ಟೇ ಅಲ್ಲದೇ 2012ರ ಬಳಿಕ ಐಪಿಎಲ್‌ನಲ್ಲಿ ತಾನಾಡಿದ ಮೊದಲ ಪಂದ್ಯವನ್ನು ಜಯಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕೂಡಾ ಮಾಡಿತ್ತು. ಆದರೆ ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಪಡೆ ಹಳಿತಪ್ಪಿದ ಬಂಡಿಯಂತಾಗಿದ್ದು, ಒಂಬತ್ತು ಪಂದ್ಯಗಳ ಪೈಕಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ ಆಗಿದೆ. ಇನ್ನುಳಿದ ಐದಕ್ಕೆ ಐದು ಪಂದ್ಯಗಳನ್ನು ಜಯಿಸಿದರೂ ಮುಂಬೈ ಇಂಡಿಯನ್ಸ್ ಪ್ಲೇ ಆಫ್‌ಗೇರೋದು ಅನುಮಾನ ಎನಿಸಿದೆ.