ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನೊಂದಿಗೆ ಮುಂಬೈ ಪ್ಲೇ-ಆಫ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದು, ಋತುರಾಜ್ ಗಾಯಕ್ವಾಡ್ ಮತ್ತು ಕಾರ್ತಿಕ್ ಶರ್ಮಾ ಅವರ ಅರ್ಧಶತಕಗಳ ನೆರವಿನಿಂದ ಚೆನ್ನೈ 6ನೇ ಸ್ಥಾನಕ್ಕೇರಿದೆ.

ಚೆನ್ನೈ: 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌, 2026ರ ಐಪಿಎಲ್‌ನ ಪ್ಲೇ-ಆಫ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. 5 ಬಾರಿ ಕಪ್‌ ಗೆದ್ದಿರುವ ಮತ್ತೊಂದು ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಶನಿವಾರ ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಮುಂಬೈಗೆ 8 ವಿಕೆಟ್‌ಗಳ ಹೀನಾಯ ಸೋಲು ಎದುರಾಯಿತು. 7ನೇ ಸೋಲಿನೊಂದಿಗೆ ಮುಂಬೈ 9ನೇ ಸ್ಥಾನದಲ್ಲೇ ಉಳಿದರೆ, 4ನೇ ಗೆಲುವು ಸಾಧಿಸಿದ ಚೆನ್ನೈ, ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.

Add Asianetnews Kannada as a Preferred SourcegooglePreferred

ಮುಂಬೈಗೆ ಹೊರೆಯಾದ ನಾಯಕ ಹಾರ್ದಿಕ್ ಪಾಂಡ್ಯ

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಬೈ 20 ಓವರಲ್ಲಿ 7 ವಿಕೆಟ್‌ಗೆ 159 ರನ್‌ ಗಳಿಸಿತು. ಮೊದಲ 10 ಓವರಲ್ಲಿ 3 ವಿಕೆಟ್‌ಗೆ 100 ರನ್‌ ಗಳಿಸಿದ್ದ ಮುಂಬೈ, ಕೊನೆ 10 ಓವರಲ್ಲಿ 4 ವಿಕೆಟ್‌ ಕಳೆದುಕೊಂಡು ಕೇವಲ 59 ರನ್‌ ಗಳಿಸಿತು. ನಾಯಕ ಹಾರ್ದಿಕ್‌ ಪಾಂಡ್ಯ 23 ಎಸೆತ ಎದುರಿಸಿ ಕೇವಲ 18 ರನ್‌ ಗಳಿಸಿದ್ದು ತಂಡಕ್ಕೆ ಹಿನ್ನಡೆ ಉಂಟು ಮಾಡಿತು. ಚೆನ್ನೈ ಪರ ಅನ್ಶುಲ್‌ ಕಾಂಬೋಜ್‌ ಹಾಗೂ ನೂರ್‌ ಅಹ್ಮದ್‌ ಅತ್ಯುತ್ತಮ ಬೌಲಿಂಗ್‌ ದಾಳಿ ಸಂಘಟಿಸಿ, ಮುಂಬೈ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು.

ಸುಲಭ ಗುರಿ ಬೆನ್ನತ್ತಿದ ಚೆನ್ನೈ, ಆರಂಭದಲ್ಲೇ ಸ್ಯಾಮ್ಸನ್‌ (11)ರ ವಿಕೆಟ್‌ ಕಳೆದುಕೊಂಡಿತು. ಆದರೆ ನಾಯಕ ಋತುರಾಜ್‌ ಗಾಯಕ್ವಾಡ್‌ ಲಯಕ್ಕೆ ಮರಳಿ ಕೊನೆವರೆಗೂ ಕ್ರೀಸ್‌ನಲ್ಲಿ ನಿಂತರು. ಊರ್ವಿಲ್ ಪಟೇಲ್‌ 12 ಎಸೆತದಲ್ಲಿ 27 ರನ್‌ ಸಿಡಿಸಿ, ರನ್‌ ಗಳಿಕೆಗೆ ವೇಗ ತುಂಬಿದರೆ, ಇಂಪ್ಯಾಕ್ಟ್‌ ಆಟಗಾರನಾಗಿ ಕ್ರೀಸ್‌ಗಿಳಿದ ಕಾರ್ತಿಕ್‌ ಶರ್ಮಾ 40 ಎಸೆತದಲ್ಲಿ ಔಟಾಗದೆ 54 ರನ್‌ ಗಳಿಸಿದರು. ಋತುರಾಜ್‌ 48 ಎಸೆತದಲ್ಲಿ ಔಟಾಗದೆ 67 ರನ್‌ ಗಳಿಸಿ, ತಂಡವನ್ನು 18.1 ಓವರಲ್ಲಿ ಜಯದ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌: 

ಮುಂಬೈ 20 ಓವರಲ್ಲಿ 159/7 (ನಮನ್‌ 57, ರಿಕೆಲ್ಟನ್‌ 37, ಅನ್ಶುಲ್‌ 3-32, ನೂರ್‌ 2-26), ಚೆನ್ನೈ 18.1 ಓವರಲ್ಲಿ 160/2 (ಋತುರಾಜ್‌ 67*, ಕಾರ್ತಿಕ್‌ 54*, ಬುಮ್ರಾ 1-20)