ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 8 ವಿಕೆಟ್‌ಗಳ ಸೋಲು ಕಂಡಿದೆ. ಇದು ಈ ಸೀಸನ್‌ನಲ್ಲಿ ಮುಂಬೈನ 7ನೇ ಸೋಲಾಗಿದ್ದು, ಪ್ಲೇಆಫ್ ಕನಸು ಬಹುತೇಕ ಅಂತ್ಯಗೊಂಡಿದೆ. ನಾಯಕ ಹಾರ್ದಿಕ್ ಪಾಂಡ್ಯ ತಂಡದ ಕಳಪೆ ಪ್ರದರ್ಶನವನ್ನು ಒಪ್ಪಿಕೊಂಡಿದ್ದು, ಚೆನ್ನೈ ಆಟವನ್ನು ಶ್ಲಾಘಿಸಿದ್ದಾರೆ.

ಚೆನ್ನೈ: ಐಪಿಎಲ್ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಕಳಪೆ ಆಟ ಮುಂದುವರಿದಿದೆ. ತಮ್ಮ ಬದ್ಧ ವೈರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎರಡನೇ ಬಾರಿಯೂ ಮುಂಬೈ ಇಂಡಿಯನ್ಸ್ ಸೋಲು ಕಂಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡ 8 ವಿಕೆಟ್‌ಗಳಿಂದ ಮುಂಬೈಯನ್ನು ಮಣಿಸಿತು. ಈ ಸೋಲಿನೊಂದಿಗೆ ಮುಂಬೈನ ಪ್ಲೇಆಫ್ ಕನಸು ಬಹುತೇಕ ಕೊನೆಗೊಂಡಿದೆ. ಈ ಸೀಸನ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ ಇದು ಮುಂಬೈಗೆ 7ನೇ ಸೋಲಾಗಿದೆ. ಪಂದ್ಯದ ನಂತರ ಮಾತನಾಡಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, 'ಇದು ನಾವು ಮರೆಯಲೇಬೇಕಾದ ಸೀಸನ್' ಎಂದು ನೇರವಾಗಿ ಒಪ್ಪಿಕೊಂಡರು.

ಸೋಲಿನ ಬೆನ್ನಲ್ಲೇ ಅಚ್ಚರಿ ಹೇಳಿಕೆ ಕೊಟ್ಟ ಹಾರ್ದಿಕ್ ಪಾಂಡ್ಯ

'ಇದು ಒಂದೇ ದಿನದ ಸಮಸ್ಯೆಯಲ್ಲ, ಈ ಇಡೀ ಸೀಸನ್ ನಮಗೆ ಕೈಕೊಟ್ಟಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್. ಹೀಗೆ ಮೂರೂ ವಿಭಾಗಗಳಲ್ಲಿ ಚೆನ್ನೈ ನಮಗಿಂತ ಒಳ್ಳೆಯ ಪ್ರದರ್ಶನ ತೋರಿದೆ. ಮೊದಲ 10 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ 180-190 ರನ್ ಗಳಿಸಬಹುದು ಎಂದು ನಾವು ಅಂದುಕೊಂಡಿದ್ದೆವು. ಆದರೆ ಆ ವೇಗವನ್ನು ಉಳಿಸಿಕೊಳ್ಳಲು ನಮ್ಮಿಂದ ಆಗಲಿಲ್ಲ. ಇನ್ನಿಂಗ್ಸ್‌ನ ಕೊನೆಯ ಓವರ್‌ಗಳಲ್ಲಿ ಹೆಚ್ಚು ರನ್ ಗಳಿಸಲು ಆಗದೇ ಇದ್ದಿದ್ದು ನಮಗೆ ದೊಡ್ಡ ಹೊಡೆತ ನೀಡಿತು. ಪಿಚ್‌ನ ಸ್ವಭಾವದಿಂದಾಗಿ ಆರಂಭದಲ್ಲಿ ಶಾಟ್‌ಗಳನ್ನು ಆಡುವುದು ಸುಲಭವಾಗಿರಲಿಲ್ಲ'' ಎಂದು ಹಾರ್ದಿಕ್ ಪಾಂಡ್ಯ ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈ ಬ್ಯಾಟರ್‌ಗಳು ಬಹಳ ಪ್ರಬುದ್ಧತೆಯಿಂದ ಆಡಿದರು ಎಂದು ಹಾರ್ದಿಕ್ ಹೇಳಿದರು. ಕೆಟ್ಟ ಎಸೆತಗಳನ್ನು ಮಾತ್ರ ಟಾರ್ಗೆಟ್ ಮಾಡಿ ದಂಡಿಸಿ, ಅನಗತ್ಯ ರಿಸ್ಕ್ ತೆಗೆದುಕೊಳ್ಳದೆ ಅವರು ಆಡಿದ ರೀತಿಯನ್ನು ಪಾಂಡ್ಯ ಹೊಗಳಿದರು. 'ಚೆನ್ನೈ ಆಟಗಾರರು ಬುದ್ಧಿವಂತಿಕೆಯಿಂದ ಕ್ರಿಕೆಟ್ ಆಡಿದರೆ, ಅವರನ್ನು ಔಟ್ ಮಾಡಲು ಬೇಕಾದ ಎಸೆತಗಳನ್ನು ಹಾಕಲು ಮುಂಬೈ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ' ಎಂದು ಅವರು ಒಪ್ಪಿಕೊಂಡರು. ಚೆನ್ನೈನ ಶಿಸ್ತುಬದ್ಧ ಆಟದ ಮುಂದೆ ಮುಂಬೈ ತಂಡ ತಂತ್ರಗಳನ್ನು ರೂಪಿಸುವುದರಲ್ಲಿ ಮತ್ತು ಅದನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಎಡವಿತು ಎಂದು ಹಾರ್ದಿಕ್ ಪಾಂಡ್ಯ ಒಪ್ಪಿಕೊಂಡರು

160 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಪರವಾಗಿ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ (48 ಎಸೆತಗಳಲ್ಲಿ ಅಜೇಯ 67) ಭರ್ಜರಿ ಪ್ರದರ್ಶನ ನೀಡಿದರು. ಯುವ ಆಟಗಾರ ಕಾರ್ತಿಕ್ (40 ಎಸೆತಗಳಲ್ಲಿ ಅಜೇಯ 50) ತಮ್ಮ ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿ ಮಿಂಚಿದರು. 20 ವರ್ಷ ಮತ್ತು 6 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಗಳಿಸಿದ ಕಾರ್ತಿಕ್, ಚೆನ್ನೈ ಪರ ಈ ಸಾಧನೆ ಮಾಡಿದ ಎರಡನೇ ಅತಿ ಕಿರಿಯ ಆಟಗಾರ ಎನಿಸಿಕೊಂಡರು. ಮೂರನೇ ವಿಕೆಟ್‌ಗೆ ಗಾಯಕ್ವಾಡ್ ಮತ್ತು ಕಾರ್ತಿಕ್ ಜೋಡಿ ಮುರಿಯದ 98 ರನ್‌ಗಳ ಜೊತೆಯಾಟವಾಡಿ ಚೆನ್ನೈ ಗೆಲುವನ್ನು ಸುಲಭಗೊಳಿಸಿತು. ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ಚೆನ್ನೈ ಗುರಿ ತಲುಪಿತು.

ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್‌:

19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರಂಭದಲ್ಲೇ ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಗೆಲುವಿನ ಹಳಿಗೆ ಮರಳಿದೆ. ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 5 ಸೋಲು ಸಹಿತ 8 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಆರನೇ ಸ್ಥಾನಕ್ಕೇರಿದೆ. ಇನ್ನೊಂದೆಡೆ ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿ 2 ಗೆಲುವು ಹಾಗೂ 7 ಸೋಲು ಸಹಿತ ಕೇವಲ 4 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ಒಂಬನೇ ಸ್ಥಾನದಲ್ಲಿಯೇ ಉಳಿದಿದೆ.