ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾಗೆ ವಾರ್ನಿಂಗ್ ಕೊಟ್ಟ ಪಾಕ್ ಮಾಜಿ ಕ್ರಿಕೆಟಿಗ..!
ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ
ಟೀಂ ಇಂಡಿಯಾ ಬ್ಯಾಟರ್‌ಗಳ ವೀಕ್ನೆಸ್ ಗುರುತಿಸಿದ ಪಾಕ್ ಮಾಜಿ ನಾಯಕ
ವಿಂಡೀಸ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ
ಕರಾಚಿ(ಆ.06): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿದೆ. ದಶಕದ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿರುವ ಭಾರತ ತಂಡದ ನ್ಯೂನ್ಯತೆಯೊಂದನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬೊಟ್ಟು ಮಾಡಿ ತೋರಿಸಿದ್ದಾರೆ. ಇದಷ್ಟೇ ಅಲ್ಲದೇ ಈ ಸಮಸ್ಯೆಗೆ ಆದಷ್ಟು ಶೀಘ್ರದಲ್ಲಿ ಪರಿಹಾರ ಹುಡುಕಿಕೊಳ್ಳದಿದ್ದರೇ ಟೀಂ ಇಂಡಿಯಾಗೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಪಾಕ್ ಮಾಜಿ ನಾಯಕ ಸಲ್ಮಾನ್ ಭಟ್ ವಾರ್ನಿಂಗ್ ನೀಡಿದ್ದಾರೆ.
ಹೌದು, ಭಾರತ ತಂಡವು ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದಾದ ಬಳಿಕ 5 ಪಂದ್ಯಗಳ ಟಿ20 ಸರಣಿ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ 4 ರನ್‌ಗಳ ರೋಚಕ ಸೋಲು ಅನುಭವಿಸಿದೆ. ಭಾರತೀಯ ಬ್ಯಾಟರ್‌ಗಳು ಸ್ಪಿನ್ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸುವ ಕೌಶಲವನ್ನು ಕರಗತ ಮಾಡಿಕೊಂಡು ಬಂದಿದ್ದಾರೆ. ಆದರೆ ವಿಂಡೀಸ್ ಎದುರು ಸ್ಪಿನ್ನರ್‌ಗಳನ್ನು ಎದುರಿಸಲು ಭಾರತೀಯ ಬ್ಯಾಟರ್‌ಗಳು ಪರದಾಡುವುದು ಕಂಡು ಬಂದಿದೆ. ಇದೇ ಮೊದಲ ಟಿ20 ಪಂದ್ಯದ ಸೋಲಿಗೂ ಕಾರಣವೆನಿಸಿತು. ಹೀಗಾಗಿ ಭಾರತ ತಂಡದ ಟೀಂ ಮ್ಯಾನೇಜ್‌ಮೆಂಟ್ ಈ ಕುರಿತಂತೆ ಆದಷ್ಟು ಬೇಗ ಗಮನ ಹರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ವಿಂಡೀಸ್ ಎದುರು ಟಿ20 ಸರಣಿಯನ್ನು ಭಾರತೀಯ ಯುವ ಪಡೆ ಆಡುತ್ತಿದೆ. ಸ್ಪಿನ್ನರ್‌ಗಳ ಎದುರು ದಿಟ್ಟ ಪ್ರದರ್ಶನ ತೋರಿದರಷ್ಟೇ, ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯ ಎಂದು ಸಲ್ಮಾನ್ ಭಟ್ ಕಿವಿ ಮಾತು ಹೇಳಿದ್ದಾರೆ.
ಟೀಂ ಇಂಡಿಯಾ ಆಯ್ಕೆಯಲ್ಲಿ ಲಾಜಿಕ್ಕೂ ಇಲ್ಲ, ಮ್ಯಾಜಿಕ್ಕೂ ಇಲ್ಲ..! ಹಿಂಗಾದ್ರೆ ಕಪ್ ಗೆಲ್ಲುತ್ತಾ ಭಾರತ?
"ಇತ್ತೀಚೆಗಿನ ದಿನಗಳನ್ನು ನೋಡಿದರೇ, ಟೀಂ ಇಂಡಿಯಾ ಬ್ಯಾಟರ್‌ಗಳು ಸ್ಪಿನ್ ದಾಳಿಯನ್ನು ತುಂಬಾ ಚೆನ್ನಾಗಿ ಎದುರಿಸಿಲ್ಲ. ಅವರು ಪರಂಪರಗತವಾಗಿ ಸ್ಪಿನ್ನರ್‌ಗಳ ಎದುರು ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದಾರೆ. ಆದರೆ ನಾವೀಗ ಭಾರತೀಯ ಬ್ಯಾಟರ್‌ಗಳು ಸ್ಪಿನ್ನರ್‌ಗಳ ಎದುರು ಆ ರೀತಿಯ ಪ್ರಾಬಲ್ಯ ನೋಡಲು ಸಿಗುತ್ತಿಲ್ಲ. ಇದರ ಬಗ್ಗೆ ಗಮನ ಹರಿಸಬೇಕಿದೆ ಎಂದು ಸಲ್ಮಾನ್ ಭಟ್ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಇದೇ ವೇಳೆ ಸಲ್ಮಾನ್ ಭಟ್, ಟೀಂ ಮ್ಯಾನೇಜ್‌ಮೆಂಟ್ ಟೀಂ ಇಂಡಿಯಾ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ನಡೆಸುತ್ತಿರುವುದನ್ನು ಟೀಕಿಸಿದ್ದಾರೆ. ಪದೇ ಪದೇ ಆಡುವ ಹನ್ನೊಂದರ ಬಳಗದ ಬ್ಯಾಟಿಂಗ್ ಕ್ರಮಾಂಕ ಬದಲಿಸುವುದು ಒಳ್ಳೆಯದಲ್ಲ ಎನ್ನುವ ಎಚ್ಚರಿಕೆಯನ್ನು ಪಾಕ್ ಮಾಜಿ ನಾಯಕ ನೀಡಿದ್ದಾರೆ.
ವಿಶ್ವಕಪ್‌ಗೆ ಕ್ಷಣಗಣನೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ ಸ್ಟಾರ್ ಕ್ರಿಕೆಟಿಗ..!
"ಇನ್ನು ಎರಡನೇ ವಿಚಾರವೆಂದರೆ, ಪ್ರತಿ ವಿದೇಶಿ ಪ್ರವಾಸದಲ್ಲಿಯೂ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಲೇ ಬರಲಾಗುತ್ತಿದೆ. ಇದು ಹೀಗೆ ಮಾಡಲು ಸಮಯವಲ್ಲ. ವಿಶ್ವಕಪ್ ಟೂರ್ನಿಗೂ ಮುನ್ನ ನಿಮ್ಮ 15ರ ಬಳಗವನ್ನು ಮೊದಲು ತೀರ್ಮಾನಿಸಿಕೊಳ್ಳಬೇಕು. ಹಾಗೂ ಆ ಎಲ್ಲಾ 15 ಆಟಗಾರರಿಗೂ ತಮ್ಮ ಪಾತ್ರ ಏನು ಎನ್ನುವುದು ಗೊತ್ತಿರಬೇಕು. ಹೀಗೆ ಟೀಂ ಇರಬೇಕು. ಒಂದು ವೇಳೆ ಕೆಲವರಿಗೆ ರೆಸ್ಟ್ ನೀಡಿ, ಬೇರೆ ಕಾಂಬಿನೇಷನ್‌ನಲ್ಲಿ ಟ್ರೈ ಮಾಡುತ್ತಿದ್ದೀರಾ ಎಂದರೆ, ಇಡೀ ತಂಡವನ್ನೇ ಕಳಿಸಿ, ಇನ್ನು ಪ್ರಮುಖ ತಂಡಕ್ಕೆ ರೆಸ್ಟ್ ನೀಡಿ. ನೀವು ನಿಮ್ಮ ಆಡುವ ಹನ್ನೊಂದರ ಮೊದಲ ಆಯ್ಕೆಯ ಅರ್ಧ ಆಟಗಾರರನ್ನು ಹಾಗೂ ಇನ್ನರ್ಧ ಆಟಗಾರರನ್ನು ಹೊಸದಾಗಿ ಟ್ರೈ ಮಾಡಿದರೆ, ಇದು ನಿಮ್ಮ ಪೂರ್ಣ ಪ್ರಮಾಣದ ತಂಡ ಎಂದು ಕರೆಯಲು ಸಾಧ್ಯವಿಲ್ಲ. ತಂಡದಲ್ಲಿರುವ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಶುಭ್‌ಮನ್ ಗಿಲ್ ಇವರ್ಯಾರು ಹೊಸಬರೇನಲ್ಲ. ಇವರಲ್ಲರೂ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ್ದಾರೆ, ಇನ್ನು ಕೆಲವರು ಐಪಿಎಲ್‌ನಲ್ಲಿ ಶತಕ ಸಿಡಿಸಿದ್ದಾರೆ ಎಂದು ಸಲ್ಮಾನ್ ಭಟ್ ಹೇಳಿದ್ದಾರೆ.