ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಐಪಿಎಲ್ ಮೆಗಾ ಹರಾಜಿನ ಮೊದಲ ದಿನ ಎರಡನೇ ವೇಗಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ
ಜೆಡ್ಡಾ: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಾಕಷ್ಟು ಆಲೋಚಿಸಿ ಜಮ್ಮು-ಕಾಶ್ಮೀರ ಮೂಲದ ಯುವ ಮಾರಕ ವೇಗಿ ರಸಿಕ್ ಸಲಾಂ ದರ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಆರ್‌ಸಿಬಿ ತಂಡದ ಬೌಲಿಂಗ್ ಪಡೆಗೆ ಮತ್ತಷ್ಟು ಬಲ ಬಂದಂತಾಗಿದೆ.
ಹೌದು, 30 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಜಮ್ಮು ಕಾಶ್ಮೀರ ಮೂಲದ ಯುವ ವೇಗಿ ರಸಿಕ್ ಸಲಾಂ ದರ್, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಗಂಟೆಗೆ 140 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ರಸಿಕ್ ಸಲಾಂ ದರ್ ಇದೀಗ ಬರೋಬ್ಬರಿ 6 ಕೋಟಿ ರುಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತೆಕ್ಕೆಗೆ ಜಾರಿದ್ದಾರೆ.
ಐಪಿಎಲ್ ಹರಾಜು: ಮುಂಬೈ ಇಂಡಿಯನ್ಸ್‌ಗೆ ಟಕ್ಕರ್ ಕೊಟ್ಟು ಮಾರಕ ವೇಗಿ ಖರೀದಿಸಿದ ರಾಜಸ್ಥಾನ ರಾಯಲ್ಸ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಡಗೈ ವೇಗಿ ಯಶ್ ದಯಾಳ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇದೀಗ ಐಪಿಎಲ್ ಮೆಗಾ ಹರಾಜಿನಲ್ಲಿ ಜೋಶ್ ಹೇಜಲ್‌ವುಡ್ ಅವರನ್ನು 12.50 ಕೋಟಿ ರುಪಾಯಿಗೆ ಹಾಗೂ ರಸಿಕ್ ಸಲಾಂ ದರ್‌ಗೆ 6 ಕೋಟಿ ರುಪಾಯಿ ನೀಡಿ ಖರೀದಿಸುವ ಮೂಲಕ ತನ್ನ ಬೌಲಿಂಗ್ ಪಡೆಯನ್ನು ಮತ್ತಷ್ಟು ಬಲಿಷ್ಠವಾಗಿಸಿಕೊಂಡಿದೆ.
ಇನ್ನುಳಿದಂತೆ ಆರ್‌ಸಿಬಿ ತಂಡವು ಫಿಲ್ ಸಾಲ್ಟ್ 11.50 ಕೋಟಿ, ಜಿತೇಶ್ ಶರ್ಮಾ 11 ಕೋಟಿ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು 8.75 ಕೋಟಿ ರುಪಾಯಿ ನೀಡಿ ಹರಾಜಿನಲ್ಲಿ ಖರೀದಿಸಿದೆ.
