ಬೆಂಗಳೂರು(ಏ.29): ಕರ್ನಾಟಕದ ಮಾಜಿ ಕ್ರಿಕೆಟಿಗ ಜೆ. ಅರುಣ್‌ ಕುಮಾರ್‌ ಅವರು ಅಮೆರಿಕ ರಾಷ್ಟ್ರೀಯ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾಗಿದ್ದಾರೆ. 

ಕರ್ನಾಟಕದ ಯಶಸ್ವಿ ಕೋಚ್‌ಗಳ ಪೈಕಿ ಒಬ್ಬರಾಗಿರುವ ಅರುಣ್‌, ಇದೇ ಮೊದಲ ಬಾರಿ ರಾಷ್ಟ್ರೀಯ ತಂಡವೊಂದಕ್ಕೆ ತರಬೇತುದಾರರಾಗಿ ನೇಮಕಗೊಂಡಿದ್ದಾರೆ. ಅರುಣ್‌ ಅವರು ಕೋಚ್‌ ಆಗಿದ್ದಾಗ ಅಂದರೆ, 2013-14, 2014-15 ರಲ್ಲಿ ಕರ್ನಾಟಕ ತಂಡ ರಣಜಿ, ವಿಜಯ್‌ ಹಜಾರೆ ಟ್ರೋಫಿ ಮತ್ತು ಇರಾನಿ ಕಪ್‌ಗಳನ್ನು ಗೆದ್ದಿತ್ತು. 45 ವರ್ಷದ ಅರುಣ್‌, ಈಗಾಗಲೇ ಯುಎಸ್‌ಎ ತಂಡದ ಆಟಗಾರರಿಗೆ ಆನ್‌ಲೈನ್‌ನಲ್ಲಿ ತರಬೇತಿ ಶುರು ಮಾಡಿದ್ದಾರೆ.

ಕರ್ನಾಟಕದ ಕ್ರಿಕೆಟ್ ವಲಯದಲ್ಲಿ ಜ್ಯಾಕ್ ಎಂದೇ ಕರೆಯಲ್ಪಡುವ ಹಲವು ವರ್ಷಗಳ ಕಾಲ ಕರ್ನಾಟಕ ರಾಜ್ಯ ತಂಡಕ್ಕೆ ತಮ್ಮ ಅನುಭವವನ್ನು ಧಾರೆ ಎರೆದಿದ್ದಾರೆ. ಇನ್ನು ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ ಅನುಭವ ಅರುಣ್ ಕುಮಾರ್‌ ಅವರಿಗಿದೆ. 

ಡ್ರಾಪ್ ಮಾಡಿ ಬೆಂಚ್ ಕಾಯಿಸಿದರು, ಕೊನೆಗೆ ಹೊರದಬ್ಬಿದರು; CSK ಸೀಕ್ರೆಟ್ ಬಿಚ್ಚಿಟ್ಟ ಆರ್ ಅಶ್ವಿನ್!

ನೇಮಕಾತಿ ಪ್ರಕ್ರಿಯೆಯಲ್ಲಿ ಮಾತುಕತೆ ನಡೆಸಿದಾಗ ಮಾಜಿ ರಣಜಿ ಆಟಗಾರ ಹಾಗೂ ಕೋಚ್ ಜೆ. ಅರುಣ್ ಕುಮಾರ್ ನಮ್ಮ ಕ್ರಿಕೆಟ್ ತಂಡಕ್ಕೆ ಸೂಕ್ತ ಕೋಚ್ ಎಂದು ತೀರ್ಮಾನಕ್ಕೆ ಬರಲಾಯಿತು ಎಂದು ಅಮೆರಿಕ ಕ್ರಿಕೆಟ್ ತಂಡದ ಸಿಇಒ ಲಿಯಾನ್ ಹಿಗ್ಗಿನ್ಸ್ ಹೇಳಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ 45 ವರ್ಷದ ಅರುಣ್ ಕುಮಾರ್, ಅಮೆರಿಕ ತಂಡಕ್ಕೆ ಟೆಸ್ಟ್ ರಾಷ್ಟ್ರದ ಮಾನ್ಯತೆ ಒದಗಿಸುವ ಗುರಿ ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ. 

ಹೌಸ್ಟನ್‌ನಲ್ಲಿ ನಡೆದ ಪ್ರತಿಭಾನ್ವೇಷಣೆ ಶಿಬಿರದಲ್ಲಿ ನಾನು ಈ ಹಿಂದೆಯೇ ಕೆಲ ಅಧಿಕಾರಿಗಳನ್ನು, ಆಯ್ಕೆಗಾರರನ್ನು ಮತ್ತು ಆಟಗಾರರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ನಾನೇನು ಮಾಡಬಹುದು ಎನ್ನುವುದರ ಅರಿವಿದೆ ಎಂದು ಅರುಣ್ ತಿಳಿಸಿದ್ದಾರೆ.