ಚೆನ್ನೈ(ಏ.27): ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ಆರ್ ಅಶ್ವಿನ್ ಇತ್ತೀಚಿನ ವರ್ಷಗಳಲ್ಲಿ ಟೆಸ್ಟ್ ತಂಡಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಈ ಕುರಿತು ಹಲವು ದಿಗ್ಗಜ ಕ್ರಿಕೆಟಿಗರು ಬಿಸಿಸಿಐ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾದಲ್ಲೂ ಆರ್ ಅಶ್ವಿನ್‌ಗೆ ಅನ್ಯಾಯವಾಗುತ್ತಿದೆ ಎಂದು ಹಲವರು ಎಚ್ಚರಿಸಿದ್ದಾರೆ. ಆದರೆ ಅಶ್ವಿನ್ ವಿಚಾರದಲ್ಲಿ ಯಾವುದೂ ಬದಲಾಗಲಿಲ್ಲ. ಚಿಲ್ಟು ಪಿಲ್ಟು ಸ್ಪಿನ್ನರ್‌ಗಳೆಲ್ಲಾ ಟೀಂ ಇಂಡಿಯಾ ಫ್ರಂಟ್ ಲೈನ್ ಸ್ಪಿನ್ನರ್ ಆಗಿ ಬದಲಾದರೂ ಅಶ್ವಿನ್ ಮಾತ್ರ ವೈಟ್ ಜರ್ಸಿಗೆ ಸೀಮಿತವಾದರು.

ಮಂಕಡ್ ರನೌಟ್ ಮೂಲಕ ಅಭಿಮಾನಿಗಳಿಗೆ ಲಾಕ್‌‌ಡೌನ್‌ ಎಚ್ಚರಿಕೆ ನೀಡಿದ ಅಶ್ವಿನ್!..

ಆರ್ ಅಶ್ವಿನ್‌ಗೆ ಟೀಂ ಇಂಡಿಯಾದಲ್ಲಿ ಮಾತ್ರವಲ್ಲ ಐಪಿಎಲ್ ಟೂರ್ನಿಯಲ್ಲೂ ಅನ್ಯಾಯವಾಗಿದೆ. ಇದೀಗ ತಮಗಾದ ಅನ್ಯಾಯವನ್ನು ಸ್ವತಃ ಆರ್ ಅಶ್ವಿನ್ ಬಿಚ್ಚಿಟ್ಟಿದ್ದಾರೆ. 2008ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ ಆರ್ ಅಶ್ವಿನ್ 2015ರ ವರೆಗೆ ತಂಡದಲ್ಲಿದ್ದರು. ಆದರೆ ಅಶ್ವಿನ್ ಆರಂಭಿಕ 3 ಆವೃತ್ತಿಗಳಲ್ಲಿ ಸಿಎಸ್‌ಕೆ ಪರ ಸಕ್ರೀಯರಾಗಿದ್ದರು. ಬಳಿಕ ತಂಡದ ಅವಕೃಪೆಗೆ ಗುರಿಯಾಗಿ ಬೆಂಚ್ ಕಾಯಬೇಕಾಯಿತು ಎಂದು ಅಶ್ವಿನ್ ಹೇಳಿದ್ದಾರೆ.

2010ರಲ್ಲಿ 2 ಪಂದ್ಯಗಳಲ್ಲಿ ನಾನು ದುಬಾರಿಯಾಗಿದ್ದೆ. ವಿಕೆಟ್ ಬೀಳಲಿಲ್ಲ. ಆದರೆ ತಂಡಕ್ಕಾಗಿ 40 ರಿಂದ 45 ರನ್ ಕಾಣಿಕೆ ನೀಡುತ್ತಿದ್ದೆ. ಹೀಗಾಗಿ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೆಂಗಣ್ಣಿಗೆ ಗುರಿಯಾಗಿದೆ. ದುಬಾರಿಯಾದ ಬಳಿಕ ನನ್ನ ತಂಡದ ಪ್ಲೇಯಿಂಗ್ ಇಲೆವೆನ್‌ಗೆ ಆಯ್ಕೆ ಮಾಡಲಿಲ್ಲ. ಸಂಪೂರ್ಣವಾಗಿ ನನ್ನನ್ನು ಡ್ರಾಪ್ ಮಾಡಿದ್ದರು. ಕೋಚ್ ನನ್ನ ಜೊತೆ ಏನನ್ನೂ ಹೇಳುತ್ತಿರಲಿಲ್ಲ. 25ರ ಬಳಗದಲ್ಲಿ ನಾನಿದ್ದೆ. ಆದರೆ ಆಡೋ ಹನ್ನೊಂದರಲ್ಲಿ ನನಗೆ ಅವಕಾಶವೇ ಇರಲಿಲ್ಲ. ಹೀಗಾಗಿ ನಾನು ಮನೆಯಲ್ಲೇ ಕುಳಿತು ಸಿಎಸ್‌ಕೆ ಪಂದ್ಯ ನೋಡುತ್ತಿದೆ.

ಪಂದ್ಯ ನೋಡುತ್ತಿರುವಾಗ ಭಾರ ಎನಿಸುತ್ತಿತ್ತು. ಒಂದು ದಿನ ಮತ್ತೆ ಸಿಎಸ್‌ಕೆ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತೇನೆ ಎಂದು ನಿರ್ಧಾರ ಮಾಡಿದ್ದೆ. ಆದರೆ ನನಗೆ ಒಂದೇ ಒಂದು ಅವಕಾಶ ಸಿಗಲಿಲ್ಲ. ಕೋಚ್ ಫ್ಲೆಮಿಂಗ್ ಹಾಗೂ ನನ್ನ ನಡೆವೆ ಉತ್ತಮ ಬಾಂಧವ್ಯ ಇರಲಿಲ್ಲ. 2010ರಿಂದ ನಾನು ಸಿಎಸ್‌ಕೆ ಬೆಂಚ್ ಸದಸ್ಯನಾಗಿದ್ದೆ. 2016ರಲ್ಲಿ ಸಿಎಸ್‌ಕೆ ತಂಡ ಅಮಾನತ್ತಾಯಿತು. ಹೀಗಾಗಿ ರೈಸಿಂಗ್ ಪುಣೆ ತಂಡ ಸೇರಿಕೊಂಡೆ. ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇದೀಗ ಡೆಲ್ಲಿ ತಂಡ ಸೇರಿಕೊಂಡಿದ್ದೇನೆ. ಆದರೆ ಈ ಬಾರಿ ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿಯೇ ತಾತ್ಕಾಲಿಕ ರದ್ದಾಗಿದೆ ಎಂದು ಅಶ್ವಿನ್ ತಮ್ಮ ಸಿಎಸ್‌ಕೆ ಪಯಣ ಬಿಚ್ಚಿಟ್ಟಿದ್ದಾರೆ.