* ಲಂಕಾ ಸರಣಿಗೆ ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ* ಲಂಕಾ ಪ್ರವಾಸದಲ್ಲಿ ಸೀಮಿತ ಓವರ್‌ಗಳ ಸರಣಿಯಾಡಲಿರುವ ಭಾರತ ತಂಡ* ಬಹುತೇಕ ತಾರಾ ಆಟಗಾರರಿಲ್ಲದೇ ಲಂಕಾ ಪ್ರವಾಸ ಮಾಡಲಿರುವ ಟೀಂ ಇಂಡಿಯಾ

ಮುಂಬೈ(ಮೇ.20): ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಬ್ಯಾಟಿಂಗ್ ದಿಗ್ಗಜ, ದ ವಾಲ್‌ ಖ್ಯಾತಿಯ ರಾಹುಲ್ ದ್ರಾವಿಡ್‌ ಮುಂಬರುವ ಶ್ರೀಲಂಕಾ ಪ್ರವಾಸದ ಭಾರತ ಕ್ರಿಕೆಟ್‌ ತಂಡಕ್ಕೆ ಮುಖ್ಯಕೋಚ್‌ ಆಗಿ ನೇಮಕವಾಗಿದ್ದಾರೆ. ಈ ಮೊದಲು 2014ರ ಇಂಗ್ಲೆಂಡ್ ಪ್ರವಾಸದ ವೇಳೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು.

ಟೀಂ ಇಂಡಿಯಾದ ಬಹುತೇಕ ಸ್ಟಾರ್ ಆಟಗಾರರು ಹಾಗೂ ಕೋಚ್‌ ಮತ್ತು ಸಹಾಯಕ ಸಿಬ್ಬಂದಿ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ನ್ಯೂಜಿಲೆಂಡ್ ವಿರುದ್ದ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಹಾಗೂ ಇಂಗ್ಲೆಂಡ್‌ ವಿರುದ್ದ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಜುಲೈನಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ದ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯಾಡಲು ದ್ವೀಪರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿದೆ.

Scroll to load tweet…

ಲಂಕಾ ಪ್ರವಾಸಕ್ಕೆ ರಾಹುಲ್‌ ದ್ರಾವಿಡ್‌ ಕೋಚ್ ಆಗಲಿದ್ದಾರೆ ಎನ್ನುವ ಸುದ್ದಿಯನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌.ಕಾಂ ಈ ಹಿಂದೆಯೇ ವರದಿ ಮಾಡಿತ್ತು: ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾ ಕೋಚ್‌ ರಾಹುಲ್ ದ್ರಾವಿಡ್..?

ಟೀಂ ಇಂಡಿಯಾ ಕೋಚ್‌ ಹಾಗೂ ಸಹಾಯಕ ಸಿಬ್ಬಂದಿಗಳು ಇಂಗ್ಲೆಂಡ್ ಪ್ರವಾಸದಲ್ಲಿರುವುದರಿಂದ, ಭಾರತದ ಯುವ ತಂಡಕ್ಕೆ ಮಾರ್ಗದರ್ಶನ ಮಾಡಲು ರಾಹುಲ್ ದ್ರಾವಿಡ್ ಉತ್ತಮ ಆಯ್ಕೆಯಾಗಿದ್ದು, ಈಗಾಗಲೇ ಭಾರತ 'ಎ' ತಂಡದ ಬಹುತೇಕ ಆಟಗಾರರು ದ್ರಾವಿಡ್‌ ಗರಡಿಯಲ್ಲಿ ಪಳಗಿದ್ದಾರೆ. ಯುವ ಕ್ರಿಕೆಟಿಗರಿಗೆ ಅನುಕೂಲವಾಗಲೆಂದು ರಾಹುಲ್ ದ್ರಾವಿಡ್‌ ಅವರನ್ನು ಲಂಕಾ ಪ್ರವಾಸಕ್ಕೆ ಕೋಚ್ ಆಗಿ ಅಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿವೆ.

ರಾಹುಲ್ ದ್ರಾವಿಡ್ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತ 'ಎ' ಹಾಗೂ ಅಂಡರ್ 19 ತಂಡದ ಕೋಚ್‌ ಆಗಿ ಅಪಾರ ಅನುಭವವನ್ನು ರಾಹುಲ್ ದ್ರಾವಿಡ್ ಹೊಂದಿದ್ದಾರೆ. 

ಭಾರತ ಸೀಮಿತ ಓವರ್‌ಗಳ ತಂಡವು ಲಂಕಾ ಪ್ರವಾಸದಲ್ಲಿ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಲಂಕಾ ಪ್ರವಾಸದಲ್ಲಿ ಶಿಖರ್ ಧವನ್‌, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಭುವನೇಶ್ವರ್ ಕುಮಾರ್ ಸೇರಿದಂತೆ ಹಲವು ಕ್ರಿಕೆಟಿಗರು ಸ್ಥಾನ ಪಡೆಯುವ ನಿರೀಕ್ಷೆಯಿದೆ.