ನವದೆಹಲಿ(ಮೇ.11): ಕೋವಿಡ್‌ ಕಾರಣದಿಂದಾಗಿ ಟೀಂ ಇಂಡಿಯಾ ಕ್ರಿಕೆಟ್ ವೇಳಾಪಟ್ಟಿಗಳೇ ಉಲ್ಟಾಪಲ್ಟವಾಗಿವೆ. ಏಕಕಾಲದಲ್ಲಿ ಭಾರತ ಕ್ರಿಕೆಟ್ ತಂಡ ಎರಡು ದೇಶಗಳ ವಿರುದ್ದ ಸೀಮಿತ ಓವರ್‌ಗಳ ಸರಣಿಯಾಡಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸುಳಿವು ನೀಡಿದ್ದರು. ಶ್ರೀಲಂಕಾ ವಿರುದ್ದದ ಸರಣಿ ಆಡಲಿರುವ ಭಾರತ ತಂಡ ಕೋಚ್‌ ಆಗಿ 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್‌ ಕಾರ್ಯ ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.

ಒಂದು ಕಡೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್‌ ವಿರುದ್ದದ ಟೆಸ್ಟ್ ಸರಣಿಗೆ ಸಿದ್ದತೆ ನಡೆಸುತ್ತಿರುವಾಗಲೇ, ಭಾರತದ ಮತ್ತೊಂದು ತಂಡ ಶ್ರೀಲಂಕಾ ವಿರುದ್ದ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಬಹುತೇಕ ಸ್ಟಾರ್ ಕ್ರಿಕೆಟಿಗರು ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಪಾಲ್ಗೊಳ್ಳುವುದಿಲ್ಲ. ಇನ್ನು ಟೀಂ ಇಂಡಿಯಾ ಹೆಡ್ ಕೋಚ್‌ ರವಿಶಾಸ್ತ್ರಿ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಭರತ್ ಅರುಣ್ ಕೂಡಾ ಲಂಕಾ ಪ್ರವಾಸದಲ್ಲಿ ಭಾರತ ತಂಡದ ಜತೆಗಿರುವುದಿಲ್ಲ.

ಏಕಕಾಲದಲ್ಲಿ ಭಾರತದ 2 ಕ್ರಿಕೆಟ್ ತಂಡಗಳು ಕಣಕ್ಕೆ..!

ಹೀಗಾಗಿ ಕ್ರಿಕ್‌ಬಜ್‌ ವರದಿಯಂತೆ, ರಾಹುಲ್ ದ್ರಾವಿಡ್ ಮತ್ತೊಮ್ಮೆ ಟೀಂ ಇಂಡಿಯಾ ಕೋಚ್ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ವರದಿ ಮಾಡಿದೆ. ದ್ರಾವಿಡ್‌ ಜತೆಗೆ ಎನ್‌ಸಿಎನ ಕೆಲವು ಸಹಾಯಕ ಸಿಬ್ಬಂದಿಗಳು ಲಂಕಾ ಪ್ರವಾಸದಲ್ಲಿ ರಾಹುಲ್ ದ್ರಾವಿಡ್‌ಗೆ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ. ರಾಹುಲ್ ದ್ರಾವಿಡ್‌ ಈಗಾಗಲೇ ಭಾರತ ಅಂಡರ್ 19 ಹಾಗೂ ಭಾರತ 'ಎ' ತಂಡದ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಹಾಗೂ ಇಂಗ್ಲೆಂಡ್ ವಿರುದ್ದದ ಸರಣಿಗೆ ಬಿಸಿಸಿಐ 30 ಆಟಗಾರರನ್ನು ಕರೆದೊಯ್ಯಲಿದೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ ಶ್ರೀಲಂಕಾ ವಿರುದ್ದ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಕೇವಲ 20 ಆಟಗಾರರಿಗಷ್ಟೇ ಇಂಗ್ಲೆಂಡ್ ಪ್ರವಾಸಕ್ಕೆ ಟಿಕೆಟ್ ಪಕ್ಕಾ ಮಾಡಿದೆ. 

ಶ್ರೀಲಂಕಾ ವಿರುದ್ದದ ಸರಣಿಗೆ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್ ಮುಂತಾದ ಆಟಗಾರರು ಸ್ಥಾನ ಪಡೆಯುವ ಸಾಧ್ಯತೆ ಬಹುತೇಕ ದಟ್ಟವಾಗಿದೆ.

ಶ್ರೀಲಂಕಾ ಪ್ರವಾಸದ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನೂ ಅಂತಿಮಗೊಳಿಸಿಲ್ಲ. ಹಾಗೆಯೇ ಲಂಕಾ ವಿರುದ್ದದ ಸರಣಿಗೆ ತಂಡವನ್ನು ಆಯ್ಕೆ ಮಾಡಿಲ್ಲ. ಒಟ್ಟಿನಲ್ಲಿ  ಲಂಕಾ ಪ್ರವಾಸದಲ್ಲಿ ಬಹುತೇಕ ತಾರಾ ಆಟಗಾರರಿಲ್ಲದ ಭಾರತ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವ ಕುತೂಹಲ ಜೋರಾಗಿದೆ.