'ಈತನೇ ಭವಿಷ್ಯದ ತಾರೆ': ಶುಭ್‌ಮನ್ ಗಿಲ್ ಶತಕವನ್ನು ಗುಣಗಾನ ಮಾಡಿದ ವಿರಾಟ್ ಕೊಹ್ಲಿ..!
ನ್ಯೂಜಿಲೆಂಡ್ ಎದುರು ಸ್ಪೋಟಕ ಶತಕ ಚಚ್ಚಿದ ಶುಭ್‌ಮನ್ ಗಿಲ್
ಈತನೇ ಭವಿಷ್ಯದ ತಾರೆ ಎಂದು ಬಣ್ಣಿಸಿದ ವಿರಾಟ್ ಕೊಹ್ಲಿ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಗರಿಷ್ಠ ವೈಯುಕ್ತಿಕ ಸ್ಕೋರ್ ದಾಖಲಿಸಿದ ಗಿಲ್

ಅಹಮದಾಬಾದ್(ಫೆ.02): ಭಾರತ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಬ್ಯಾಟರ್ ಶುಭ್‌ಮನ್ ಗಿಲ್, ನ್ಯೂಜಿಲೆಂಡ್ ಎದುರಿನ ನಿರ್ಣಾಯಕ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ಗಿಲ್ ಬ್ಯಾಟಿಂಗ್ ಪ್ರದರ್ಶನಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಮೆಚ್ಚುಗೆ ವ್ಯಕ್ತಪಡಿಸಿದ್ದು, ಭವಿಷ್ಯದ ತಾರೆ ಎಂದು ಕೊಹ್ಲಿ ಬಣ್ಣಿಸಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿತ್ತು. ಆರಂಭಿಕ ಬ್ಯಾಟರ್ ಇಶಾನ್ ಕಿಶನ್, ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಆದರೆ ಮತ್ತೋರ್ವ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್, ಕೇವಲ 63 ಎಸೆತಗಳ್ಲಲಿ ಅಜೇಯ 126 ರನ್ ಸಿಡಿಸುವ ಮೂಲಕ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ದಾಖಲಿಸಿದ ಭಾರತೀಯ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾದರು. ಈ ಮೊದಲು ಆ ದಾಖಲೆ ವಿರಾಟ್ ಕೊಹ್ಲಿ(122*) ಹೆಸರಿನಲ್ಲಿತ್ತು.
ಟಿ20 ಕ್ರಿಕೆಟ್‌ನಲ್ಲಿ ಶುಭ್‌ಮನ್ ಅವರಿಗೆ ಸ್ಥಾನ ನೀಡಿರುವ ಕುರಿತಂತೆ ಕೆಲ ದಿನಗಳಿಂದ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಶುಭ್‌ಮನ್ ಗಿಲ್, ಏಕದಿನ ಹಾಗೂ ಟೆಸ್ಟ್ ತಂಡಕ್ಕೆ ಸೆಟ್ ಆಗುತ್ತಾರೆ, ಆದರೆ ಟಿ20 ಕ್ರಿಕೆಟ್‌ಗೆ ಅವರ ಆಯ್ಕೆ ಸಮಂಜಸವಲ್ಲ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು. ಆದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿಜೀವನದ 6ನೇ ಪಂದ್ಯದಲ್ಲೇ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ನಾನು ಪೂಜೆ-ಗೀಜೆ ಮಾಡುವ ವ್ಯಕ್ತಿಯಂತೆ ಕಾಣ್ತೀನಾ? ವಿರಾಟ್ ಕೊಹ್ಲಿ ನೀಡಿದ್ದ ಈ ಹಿಂದಿನ ಹೇಳಿಕೆ ಈಗ ವೈರಲ್..!
ಇದೀಗ ವಿರಾಟ್ ಕೊಹ್ಲಿ, ಶುಭ್‌ಮನ್ ಗಿಲ್ ಅವರ ಬ್ಯಾಟಿಂಗ್ ಪ್ರದರ್ಶನದ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಗಿಲ್ ಶತಕ ಬಾರಿಸಿದ್ದಾಗ ಅಭಿನಂದಿಸಿದ ಫೋಟೋದೊಂದಿಗೆ "ಭವಿಷ್ಯದ ತಾರೆ ಇಲ್ಲಿದೆ" ಎಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಸ್ಟೋರಿಯನ್ನು ಫೋಸ್ಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿಯವರ ಅಭಿನಂದನೆಯ ಸ್ಟೋರಿ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
ಬಾರ್ಡರ್-ಗವಾಸ್ಕರ್ ಸರಣಿಗೆ ತಮ್ಮ ಸ್ಥಾನ ಭದ್ರಪಡಿಸಿಕೊಂಡ ಶುಭ್‌ಮನ್ ಗಿಲ್?
ಆಸ್ಟ್ರೇಲಿಯಾ ಎದುರು ಫೆಬ್ರವರಿ 09ರಿಂದ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರತಿಭಾನ್ವಿತ ಬ್ಯಾಟರ್ ಶ್ರೇಯಸ್ ಅಯ್ಯರ್ ಅಲಭ್ಯರಾಗಿದ್ದಾರೆ. ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಅಯ್ಯರ್ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದು, ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಬದಲಿಗೆ ಸ್ಥಾನ ಪಡೆಯಲು ಸೂರ್ಯಕುಮಾರ್ ಯಾದವ್ ಹಾಗೂ ಶುಭ್‌ಮನ್ ಗಿಲ್ ನಡುವೆ ಪೈಪೋಟಿ ಜೋರಾಗಿದೆ.
ಬಲಿಷ್ಠ ಆಸ್ಟ್ರೇಲಿಯಾ ತಂಡದ ಎದುರಿನ ಪಂದ್ಯಕ್ಕೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಅಲಭ್ಯತೆ ತಂಡವನ್ನು ಬಹುವಾಗಿ ಕಾಡುತ್ತಿದೆ. ಹೀಗಾಗಿ ಭರ್ಜರಿ ಫಾರ್ಮ್‌ನಲ್ಲಿರುವ ಶುಭ್‌ಮನ್ ಗಿಲ್ ಅವರಿಗೆ ಟೀಂ ಮ್ಯಾನೇಜ್‌ಮೆಂಟ್, ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಸ್ಥಾನ ನೀಡುವ ಸಾಧ್ಯತೆಯಿದೆ.
ಟೆಸ್ಟ್ ಸರಣಿಯಲ್ಲಿ ಆರಂಭಿಕರಾಗಿ ಕೆ ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯುವುದರಿಂದ, ಶುಭ್‌ಮನ್ ಗಿಲ್, ಅನಿವಾರ್ಯವಾಗಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಾಗಿದೆ.
ಆಸೀಸ್ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್, ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.