ನಾನು ಪೂಜೆ-ಗೀಜೆ ಮಾಡುವ ವ್ಯಕ್ತಿಯಂತೆ ಕಾಣ್ತೀನಾ? ವಿರಾಟ್ ಕೊಹ್ಲಿ ನೀಡಿದ್ದ ಈ ಹಿಂದಿನ ಹೇಳಿಕೆ ಈಗ ವೈರಲ್..!
ರಿಷಿಕೇಶ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ವಿರಾಟ್ ಕೊಹ್ಲಿ
ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿರುವ ವಿರುಷ್ಕಾ ದಂಪತಿ
ಈ ಹಿಂದೆ ಪೂಜೆ ಕುರಿತಂತೆ ಕೊಹ್ಲಿ ನೀಡಿದ್ದ ಹೇಳಿಕೆ ವೈರಲ್
ನವದೆಹಲಿ(ಫೆ.02): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ತಮ್ಮ ರಜಾ ದಿನಗಳನ್ನು ಪತ್ನಿ ಮತ್ತು ಮಗಳ ಜತೆ ಬಿಂದಾಸ್ ಆಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ, ಸದ್ಯ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿದಿದ್ದರು. ಇದೀಗ ವಿರಾಟ್ ಕೊಹ್ಲಿ ಮುಂದಿನ ವಾರ ತವರಿನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.
ಇನ್ನು ವಿರಾಟ್ ಕೊಹ್ಲಿ, ತಮ್ಮ ಬಹುಪಾಲು ಬಿಡುವಿನ ಸಮಯವನ್ನು ತಮ್ಮ ಪತ್ನಿ ಅನುಷ್ಕಾ ಶರ್ಮಾ ಜತೆ ಕಳೆಯುವುದನ್ನು ನಾವೆಲ್ಲರೂ ನೋಡಿದ್ದೇವೆ. ಕೆಲ ದಿನಗಳ ಹಿಂದಷ್ಟೇ ವಿರಾಟ್ ಕೊಹ್ಲಿ ತಮ್ಮ ಪತ್ನಿ ಹಾಗೂ ಪುತ್ರಿ ವಾಮಿಕಾ ಜತೆ ರಿಷಿಕೇಶ್‌ನಲ್ಲಿರುವ ಸ್ವಾಮಿ ದಯಾನಂದ ಗಿರಿ ಆಶ್ರಮಕ್ಕೆ ಭೇಟಿ ನೀಡಿ ಗಮನ ಸೆಳೆದಿದ್ದರು. ಈ ಆಶ್ರಮದಲ್ಲಿ ವಿರಾಟ್ ಕೊಹ್ಲಿ ಪ್ರಾರ್ಥನೆ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆಸ್ಟ್ರೇಲಿಯಾ ಎದುರಿನ ಮಹತ್ವದ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ರಿಲ್ಯಾಕ್ಸ್ ಆಗಲು ರಿಷಿಕೇಶ್‌ಗೆ ಭೇಟಿ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.
ಇನ್ನು ಇದೆಲ್ಲದರ ನಡುವೆ, ವಿರಾಟ್ ಕೊಹ್ಲಿ, ಈ ಹಿಂದೆ ಪೂಜೆಗೆ ಸಂಬಂಧಿಸಿದಂತೆ ನೀಡಿದ್ದ ಹಳೆಯ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ನಾನು ಪೂಜೆ-ಗೀಜೆ ಮಾಡುವ ವ್ಯಕ್ತಿಯಂತೆ ಕಾಣುತ್ತೀನಾ ಎಂದು ಪ್ರಶ್ನಿಸಿದ ವಿಡಿಯೋ ತುಣುಕೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಈ ವಿಡಿಯೋ ಕಳೆದ 7 ವರ್ಷಗಳ ಹಿಂದಿನದಾಗಿದ್ದು, 2016ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿನದಾಗಿದ್ದು, ಮಾಧ್ಯಮದವರ ಜತೆ ಮಾತನಾಡುವಾಗ ವಿರಾಟ್ ಕೊಹ್ಲಿ ಹೀಗಂದಿದ್ದರು. 2016ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಆಸ್ಟ್ರೇಲಿಯಾ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯಕ್ಕೂ ಮುನ್ನ ಮಾಧ್ಯಮದವರ ಜತೆ ಮಾತನಾಡುವಾಗ, ಪತ್ರಕರ್ತರೊಬ್ಬರು, " ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಲು, ತಾಳ್ಮೆಯಿಂದಿರಲು, ನೀವು ದೇವರ ಬಳಿಕ ಪೂಜೆ-ಪ್ರಾರ್ಥನೆ ಮಾಡುತ್ತೀರಾ" ಎಂದು ಪ್ರಶ್ನಿಸಿದ್ದರು. ಅದಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯೆ ನೀಡಿದ್ದ ವಿರಾಟ್ ಕೊಹ್ಲಿ, "ನಾನು ನಿಮ್ಮ ಕಣ್ಣಿಗೆ ಪೂಜೆ-ಪ್ರಾರ್ಥನೆ ಮಾಡುವವನಂತೆ ಕಾಣುತ್ತೀನಾ?" ಎಂದು ನಗುತ್ತಲೇ ಉತ್ತರ ನೀಡಿದ್ದರು.
ಆಸ್ಟ್ರೇಲಿಯಾ ಸರಣಿಗೂ ಮುನ್ನ ಪತ್ನಿ ಜೊತೆ ರಿಷಿಕೇಶ ಆಶ್ರಮಕ್ಕೆ ಭೇಟಿ ನೀಡಿದ ವಿರಾಟ್ ಕೊಹ್ಲಿ
" ನಾನು ಕ್ರಿಕೆಟ್ ಆರಂಭಿಸಿದಾಗ ಸಾಕಷ್ಟು ತಪ್ಪುಗಳಾಗುತ್ತಿದ್ದವು. ನಾನು ಟ್ಯಾಟೂ ಹಾಕಿಕೊಳ್ಳುತ್ತಿದ್ದೆ, ಸ್ಟೈಲೀಶ್ ಬಟ್ಟೆಗಳನ್ನು ಹಾಕುತ್ತಿದ್ದೆ. ಋಣಾತ್ಮಕ ವಿಷಯಗಳ ಕಡೆ ಗಮನ ಬೇಗ ಹೋಗುತ್ತದೆ. ಹಾಗಂತ ನಾನದನ್ನು ಮಾಡುವುದಿಲ್ಲ. ನನ್ನ ಮೂಲ ಆಲೋಚನೆ ಇರುವುದು ದಿನದಿಂದ ದಿನಕ್ಕೆ ಕ್ರಿಕೆಟ್‌ನಲ್ಲಿ ಬೆಳವಣಿಗೆ ಸಾಧಿಸುವುದಾಗಿದೆ. ಎಲ್ಲಾ ಕಠಿಣ ಪರಿಶ್ರಮ ಒಂದಲ್ಲಾ ಒಂದು ದಿನ ನಮಗೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ನಾನು ತಂಡವನ್ನು ಗೆಲುವಿನ ದಡ ಸೇರಿಸಬೇಕು ಎಂದುಕೊಂಡೇ ಮೈದಾನಕ್ಕೆ ಕಣಕ್ಕಿಳಿಯುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದರು.