* ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ದಿನಗಣನೆ* ಜುಲೈ 01ರಿಂದ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ ಕೊನೆಯ ಟೆಸ್ಟ್* ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೂ ತಗುಲಿತ್ತು ಕೋವಿಡ್ ಟೆಸ್ಟ್

ಬರ್ಮಿಂಗ್‌ಹ್ಯಾಮ್‌(ಜೂ.22): ಟೀಂ ಇಂಡಿಯಾ ಬಹುನಿರೀಕ್ಷಿತ ಇಂಗ್ಲೆಂಡ್ ಎದುರಿನ ಏಕೈಕ ಟೆಸ್ಟ್‌ಗೆ ಸಿದ್ದತೆ ನಡೆಸುತ್ತಿದೆ. ಮುಂಬರುವ ಜುಲೈ 01ರಿಂದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ 5ನೇ ಟೆಸ್ಟ್‌ ಆರಂಭಕ್ಕೂ ಮುನ್ನ ಭಾರತ ತಂಡವು ಸಾಕಷ್ಟು ಸಂಕಷ್ಟದ ಸುಳಿಗೆ ಸಿಲುಕಿದೆ. ಇಂಗ್ಲೆಂಡ್‌ ಎದುರಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿಗೆ ಕೋವಿಡ್ 19 ಸೋಂಕು ತಗುಲಿತ್ತು ಎಂದು ವರದಿಯಾಗಿದೆ.

15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯನ್ ಪ್ರೀಮಿಯರ್ ಲೀಗ್‌ (Indian Premier League) ಟೂರ್ನಿ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ (Virat Kohli) ಹಾಗೂ ಅನುಷ್ಕಾ ಶರ್ಮಾ (Anushka Sharma) ಹಾಲಿಡೇ ಎಂಜಾಯ್ ಮಾಡಲು ಮಾಲ್ಡೀವ್ಸ್‌ಗೆ ತೆರಳಿದ್ದರು. ಈ ವೇಳೆ ಕೊಹ್ಲಿಗೆ ಸೋಂಕು ತಗುಲಿತ್ತು ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹೌದು, ವಿರಾಟ್ ಕೊಹ್ಲಿ ಕೂಡಾ ಕೋವಿಡ್‌ಗೆ ಒಳಗಾಗಿದ್ದರು. ಮಾಲ್ಡೀವ್ಸ್‌ನಿಂದ ಹಾಲಿಡೇ ಮುಗಿಸಿ ವಾಪಾಸ್ಸಾಗುವ ವೇಳೆಯಲ್ಲಿ ವಿರಾಟ್ ಕೊಹ್ಲಿಗೆ ಸೋಂಕು ದೃಢಪಟ್ಟಿತ್ತು. ಆದರೆ ಇದೀಗ ಕೊಹ್ಲಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಮೂಲಗಳು ಟೈಮ್ಸ್ ಆಫ್‌ ಇಂಡಿಯಾಗೆ ತಿಳಿಸಿವೆ ಎಂದು ವರದಿಯಾಗಿದೆ.

ಸದ್ಯ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ (Team India), ಇಂಗ್ಲೆಂಡ್‌ಗೆ ಬಂದಿಳಿದ್ದು, ಲೀಸೆಸ್ಟರ್‌ಶೈರ್ ಕೌಂಟಿ ಗ್ರೌಂಡ್‌ನಲ್ಲಿ ಜೂನ್ 24ರಿಂದ 4 ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ. ಈಗಾಗಲೇ ಬಹುತೇಕ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರು ಜೂನ್ 16ರಂದೇ ಇಂಗ್ಲೆಂಡ್‌ಗೆ ಬಂದಿಳಿದಿದ್ದಾರೆ. ಇನ್ನು ನಾಯಕ ರೋಹಿತ್ ಶರ್ಮಾ (Rohit Sharma) ಒಂದು ದಿನ ತಡವಾಗಿ ಇಂಗ್ಲೆಂಡ್ ತಲುಪಿದ್ದಾರೆ. ಲೀಸೆಸ್ಟರ್‌ಶೈರ್‌ ವಿರುದ್ದ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡಿರುವ ಆಟಗಾರರಿಗೆ ಹೆಚ್ಚಿನ ಒತ್ತಡ ಬೀಳದಂತೆ ನೋಡಿಕೊಳ್ಳುವತ್ತ ಟೀಂ ಇಂಡಿಯಾ ಹೆಡ್‌ ಕೋಚ್ ರಾಹುಲ್ ದ್ರಾವಿಡ್ (Rahul Dravid) ಗಮನ ಹರಿಸಿದ್ದಾರೆ.

ಕಳೆದ ವರ್ಷ ಇದೇ 5 ಪಂದ್ಯಗಳ ಟೆಸ್ಟ್‌ ಸರಣಿಯ ವೇಳೆ ತಂಡದಲ್ಲಿ ಕೋವಿಡ್‌ ಪ್ರಕರಣಗಳು ಕಂಡುಬಂದಿದ್ದು, ಕೋಚ್‌ ರವಿಶಾಸ್ತ್ರಿ (Ravi Shastri) ಅವರ ಪುಸ್ತಕ ಬಿಡುಗಡೆ ಕಾರ‍್ಯಕ್ರಮದಲ್ಲೇ ಕೋವಿಡ್‌ ಹಬ್ಬಿತ್ತು ಎಂದು ಹೇಳಲಾಗುತ್ತಿತ್ತು. ಕೋವಿಡ್‌ ಹೆಚ್ಚಾದ ಬಳಿಕ 5ನೇ ಪಂದ್ಯ ನಡೆಸದೆ ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಸದ್ಯ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-1 ಅಂತರದ ಮುನ್ನಡೆ ಸಾಧಿಸಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಖಡಕ್ ವಾರ್ನಿಂಗ್ ನೀಡಿದ BCCI..! ಯಾಕೆ ಏನಾಯ್ತು?

ಟೆಸ್ಟ್‌ ಪಂದ್ಯಕ್ಕಾಗಿ ಇಂಗ್ಲೆಂಡ್‌ಗೆ ತೆರಳಿರುವ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್‌ ಕೊಹ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸದೆ ಸುತ್ತಾಡುತ್ತಿದ್ದು, ಅಭಿಮಾನಿಗಳ ಜೊತೆಗಿನ ಫೋಟೋಗಳೂ ವೈರಲ್‌ ಆಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಆಟಗಾರರಿಗೆ ಎಚ್ಚರಿಕೆ ನೀಡಿದ್ದು, ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ ಎಂದು ವರದಿಯಾಗಿದೆ.

ಇಂಗ್ಲೆಂಡ್‌ನಲ್ಲಿ ಕೋವಿಡ್ ಭೀತಿ ಕಡಿಮೆಯಾಗಿದೆ. ಹೀಗಿದ್ದೂ ಆಟಗಾರರು ಕೋವಿಡ್ ಕುರಿತಂತೆ ಕೊಂಚ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಈ ಬಗ್ಗೆ ಇಡೀ ತಂಡವೇ ಕೊಂಚ ಎಚ್ಚರಿಕೆಯಿಂದ ಇರವಂತೆ ನಾವು ಸೂಚಿಸುತ್ತಿದ್ದೇವೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ತಿಳಿಸಿದ್ದಾರೆ.