ಹೃದಯಾಘಾತದಿಂದ ಕೊನೆಯುಸಿರೆಳೆದ ಬಿಸಿಸಿಐ ಮಾಜಿ ಜಂಟಿ ಕಾರ್ಯದರ್ಶಿ ಅಮಿತಾಬ್ ಚೌಧರಿ..!
ಬಿಸಿಸಿಐ ಮಾಜಿ ಜಂಟಿ ಕಾರ್ಯದರ್ಶಿ ಅಮಿತಾಬ್ ಚೌಧರಿ ಹೃದಯಾಘಾತದಿಂದ ನಿಧನ
ಇಂದು ಬೆಳಗ್ಗೆ ಮನೆಯಲ್ಲಿ ದಿಢೀರ್ ಕುಸಿದು ಬಿದ್ದ ಮಾಜಿ ಐಪಿಎಸ್ ಅಧಿಕಾರಿ
ಅಮಿತಾಬ್ ಚೌಧರಿ ನಿಧನಕ್ಕೆ ಕಂಬನಿ ಮಿಡಿದ ಜಾರ್ಖಂಡ್ ಮುಖ್ಯಮಂತ್ರಿ
ರಾಂಚಿ(ಆ.16): ಬಿಸಿಸಿಐ ಮಾಜಿ ಜಂಟಿ ಕಾರ್ಯದರ್ಶಿ ಹಾಗೂ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಅಮಿತಾಬ್ ಚೌಧರಿ, ಮಂಗಳವಾರವಾದ ಇಂದು ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಅಮಿತಾಬ್ ಚೌಧರಿ ನಿಧನಕ್ಕೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೈನ್, ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ.
ಇಲ್ಲಿನ ಅಶೋಕ್ ನಗರ ನಿವಾಸಿಯಾಗಿದ್ದ ಅಮಿತಾಬ್ ಚೌಧರಿ, ಇಂದು ಮುಂಜಾನೆ ತಮ್ಮ ನಿವಾಸದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯ ಮೂಲಗಳ ಪ್ರಕಾರ ಅಮಿತಾಬ್ ಚೌಧರಿ ಅವರಿಗೆ ಹೃದಯಸ್ತಂಭನವಾಗಿದೆ. ಆಸ್ಪತ್ರೆಯಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಪ್ರಯತ್ನಿಸಲಾಯಿತಾದರೂ, ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಲು ವೈದ್ಯರಿಗೆ ಸಾಧ್ಯವಾಗಲಿಲ್ಲ.
ಇನ್ನು ಅಮಿತಾಬ್ ಚೌಧರಿಯವರ ನಿಧನಕ್ಕೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕಂಬನಿ ಮಿಡಿದಿದ್ದಾರೆ. ಜಾರ್ಖಂಡ್ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷರಾದ ಶ್ರೀಯುತ ಅಮಿತಾಬ್ ಚೌಧರಿಯವರ ಆಕಸ್ಮಿಕ ನಿಧನದ ದುಃಖಕರವಾದ ಸುದ್ದಿ ತಿಳಿಯಿತು. ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಅಮಿತಾಬ್ ಚೌಧರಿಯವರು, ರಾಜ್ಯದಲ್ಲಿ ಕ್ರಿಕೆಟ್ ಕ್ರೀಡೆ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ನಿಭಾಯಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಅಗಲಿಕೆಯ ದುಃಖ ಮರೆಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಅಮಿತಾಬ್ ಚೌಧರಿ, 2019ರವರೆಗೆಗೂ ಬಿಸಿಸಿಐ ಕಾರ್ಯದರ್ಶಿಯಾಗಿ ಕರ್ತವ್ಯ ನಿಭಾಯಿಸಿದ್ದರು. ಇದಷ್ಟೇ ಅಲ್ಲದೇ ಜಾರ್ಖಂಡ್ ಲೋಕಸೇವಾ ಆಯೋಗದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿ ಗಮನ ಸೆಳೆದಿದ್ದರು. ಹಿಂದುಳಿದ ರಾಜ್ಯಗಳಲ್ಲಿ ಒಂದು ಎನಿಸಿಕೊಂಡಿರುವ ಜಾರ್ಖಂಡ್‌ನಲ್ಲಿ ಕ್ರಿಕೆಟ್ ಮೂಲಭೂತ ಸೌಕರ್ಯ ಅಭಿವೃದ್ದಿ ಪಡಿಸುವಲ್ಲಿ ಅಮಿತಾಬ್ ಚೌಧರಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ನಿರ್ಮಾಣದ ಹಿಂದೆಯೂ ಅಮಿತಾಬ್ ಚೌಧರಿಯವರ ಮಹತ್ತರ ಪಾತ್ರವಿದೆ.
ಸಚಿನ್, ಕೊಹ್ಲಿ, ಅಲ್ಲ, ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ಹುಲಿ, ರಣಥಂಬೋರ್ ಘಟನೆ ಬಿಚ್ಚಿಟ್ಟ ಟೇಲರ್!
ಇನ್ನು ಅಮಿತಾಬ್ ಚೌಧರಿ, ಭಾರತ ಪುರುಷರ ತಂಡದ ಮ್ಯಾನೇಜರ್ ಆಗಿಯೂ ಸೈ ಎನಿಸಿಕೊಂಡಿದ್ದರು. ಈ ಪೈಕಿ 2005-06ರ ಜಿಂಬಾಬ್ವೆ ಪ್ರವಾಸವೂ ಒಂದು ಎನಿಸಿದೆ. ಈ ಪ್ರವಾಸದ ವೇಳೆಯಲ್ಲಿಯೇ ಟೀಂ ಇಂಡಿಯಾ ನಾಯಕರಾಗಿದ್ದ ಸೌರವ್ ಗಂಗೂಲಿ ಹಾಗೂ ಕೋಚ್ ಗ್ರೆಗ್ ಚಾಪೆಲ್ ನಡುವೆ ಮನಸ್ತಾಪ ಏರ್ಪಟ್ಟಿತ್ತು.