Asianet Suvarna News Asianet Suvarna News

Ind vs Aus 'ಹ್ಯಾಟ್ರಿಕ್ ಶೂನ್ಯ ಸಂಪಾದಕ': ಸೂರ್ಯಕುಮಾರ್ ಯಾದವ್ ಕಾಲೆಳೆದ ನೆಟ್ಟಿಗರು..!

ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಸಂಪೂರ್ಣ ಫೇಲ್
ಮೂರು ಪಂದ್ಯಗಳಲ್ಲೂ ಶೂನ್ಯ ಸುತ್ತಿ ವಿಕೆಟ್ ಒಪ್ಪಿಸಿದ ಸೂರ್ಯಕುಮಾರ್ ಯಾದವ್
ಶೂನ್ಯ ಸಂಪಾದಕ ಸೂರ್ಯಕುಮಾರ್ ಬ್ಯಾಟಿಂಗ್‌ಗೆ ನೆಟ್ಟಿಗರು ಗರಂ

Social Media Reaction on Suryakumar Yadav getting out on 3 consecutive golden duck against Australia ODI Series kvn
Author
First Published Mar 23, 2023, 10:34 AM IST

ಬೆಂಗಳೂರು(ಮಾ.23): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡವು 2-1 ಅಂತರದಲ್ಲಿ ಜಯಿಸಿದೆ. ಈ ಸರಣಿಯು ಕೆಲವು ಕ್ರಿಕೆಟಿಗರ ಪಾಲಿಗೆ ಅತ್ಯುತ್ತಮವಾಗಿ ಮೂಡಿ ಬಂದರೆ, ಮತ್ತೆ ಕೆಲವು ಆಟಗಾರರನ್ನು ದುಃಸ್ವಪ್ನವಾಗಿ ಕಾಡುತ್ತಿದೆ. ಈ ಪೈಕಿ ಟೀಂ ಇಂಡಿಯಾದ ಪ್ರತಿಭಾನ್ವಿತ ಬ್ಯಾಟರ್ ಸೂರ್ಯಕುಮಾರ್ ಯಾದವ್, ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳಲ್ಲೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಅದರಲ್ಲೂ ಮೂರು ಪಂದ್ಯಗಳಲ್ಲೂ ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸುವ ಮೂಲಕ ದಯನೀಯ ವೈಫಲ್ಯವನ್ನು ಅನುಭವಿಸಿದರು. ಸೂರ್ಯಕುಮಾರ್ ಯಾದವ್ ಹ್ಯಾಟ್ರಿಕ್ ಶೂನ್ಯ ಸಂಪಾದನೆ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸೂರ್ಯನನ್ನು ಫುಲ್ ಟ್ರೋಲ್ ಮಾಡಿದ್ದಾರೆ.

ಹೌದು, ಮೊದಲೆರಡು ಏಕದಿನ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್, ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ಆಸೀಸ್‌ ಎಡಗೈ ಸ್ಪಿನ್ನರ್ ಆಸ್ಟನ್ ಏಗರ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗುವ ಮೂಲಕ ಮೂರು ಬಾರಿಯು ಗೋಲ್ಡನ್ ಡಕ್ ಆಗಿ ಪೆವಿಲಿಯನ್ ಸೇರಿದರು.

ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನದ ಬಗ್ಗೆ ತುಟಿಬಿಚ್ಚಿದ್ದ ಟೀಂ ಇಂಡಿಯಾ ಹೆಡ್‌ ಕೋಚ್ ರಾಹುಲ್ ದ್ರಾವಿಡ್, ಪ್ರತಿಭಾನ್ವಿತ ಕ್ರಿಕೆಟಿಗನಾಗಿರುವ ಸೂರ್ಯಕುಮಾರ್ ಯಾದವ್, 50 ಓವರ್‌ಗಳ ಕ್ರಿಕೆಟ್‌ ಅನ್ನು ಕಲಿಯುತ್ತಿದ್ದಾರೆ ಎಂದಿದ್ದರು. ಇನ್ನು ಮತ್ತೊಂದೆಡೆ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, 'ಸೂರ್ಯಕುಮಾರ್ ಯಾದವ್ ಅವರಲ್ಲಿ ಅಪಾರ ಪ್ರತಿಭೆಯಿದೆ. ಅವರಿಗೆ ಮತ್ತಷ್ಟು ಅವಕಾಶವನ್ನು ನೀಡಲಿದ್ದೇವೆ ಎಂದು ಹೇಳಿದ್ದರು. ಆದರೆ ಮೂರನೇ ಪಂದ್ಯದಲ್ಲೂ ಸೂರ್ಯ, ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ನೆಟ್ಟಿಗರು ಸೂರ್ಯಕುಮಾರ್ ಮಾತ್ರವಲ್ಲದೇ, ಅವರಿಗೆ ಅವಕಾಶ ನೀಡಿದ ಟೀಂ ಮ್ಯಾಜೇಜ್‌ಮೆಂಟ್‌ಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

Ind vs Aus: ಟೀಂ ಇಂಡಿಯಾ ಸೋಲಿಸಿದ ಆ್ಯಡಂ ಜಂಪಾ ಹೆಸರಿಗೆ ಅಪರೂಪದ ದಾಖಲೆ ಸೇರ್ಪಡೆ..!

ಸೂರ್ಯಕುಮಾರ್ ಯಾದವ್, 3 ಪಂದ್ಯಗಳ ಏಕದಿನ ಸರಣಿಯಲ್ಲಿ ಗೋಲ್ಡನ್ ಡಕ್ ಆದ ಮೊದಲ ಬ್ಯಾಟರ್ ಎನ್ನುವ ಕುಖ್ಯಾತಿಗೆ ಕಾರಣರಾಗಿದ್ದಾರೆ. ದಾಖಲೆ ವೀರ ಸೂರ್ಯಕುಮಾರ್ ಯಾದವ್, ಇದೀಗ ಶೂನ್ಯ ಸುತ್ತುವುದರಲ್ಲೂ ದಾಖಲೆ ಬರೆದಿದ್ದಾರೆ ಎಂದು ನೆಟ್ಟಿಗರು ಸೂರ್ಯನನ್ನು ಕಾಲೆಳೆದಿದ್ದಾರೆ.

ಸೂರ್ಯಕುಮಾರ್ ಯಾದವ್, ಏಕದಿನ ಕ್ರಿಕೆಟ್‌ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಹೊಂದಿದ್ದಾರೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಆಸೀಸ್‌ ಎದುರು ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಕ್ಕೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

Ind vs Aus 2019ರ ಬಳಿಕ ತವರಿನಲ್ಲಿ ಏಕದಿನ ಸರಣಿ ಸೋತು ನಂ.1 ಪಟ್ಟ ಕಳೆದುಕೊಂಡ ಟೀಂ ಇಂಡಿಯಾ..!

ಇನ್ನು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 49 ಓವರ್‌ಗಳನ್ನಾಡಿ 269 ರನ್ ಬಾರಿಸಿ ಸರ್ವಪತನ ಕಂಡಿತು. ಆಸ್ಟ್ರೇಲಿಯಾದ ಯಾವೊಬ್ಬ ಬ್ಯಾಟರ್ ಕೂಡಾ ಅರ್ಧಶತಕ ಬಾರಿಸಲು ಸಫಲರಾಗಲಿಲ್ಲ. ಭಾರತ ಪರ ಹಾರ್ದಿಕ್ ಪಾಂಡ್ಯ ಹಾಗೂ ಕುಲ್ದೀಪ್ ಯಾದವ್ ತಲಾ ಮೂರು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಎರಡೆರಡು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.

ಇನ್ನು ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರು. ಇನ್ನು ಹಾರ್ದಿಕ್ ಪಾಂಡ್ಯ 40 ರನ್ ಬಾರಿಸಿದರು ತಂಡವನ್ನು ಗೆಲುವಿನ ದಡ ಸೇರಿಸಲು ಯಶಸ್ವಿಯಾಗಲಿಲ್ಲ. ಆಸೀಸ್‌ ಸ್ಪಿನ್ನರ್ ಆಡಂ ಜಂಪಾ 45 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಅಂತಿಮವಾಗಿ ಟೀಂ ಇಂಡಿಯಾ 49.1 ಓವರ್‌ಗಳಿಗೆ 248 ರನ್ ಬಾರಿಸಿ ಸರ್ವಪತನ ಕಂಡಿತು.

Follow Us:
Download App:
  • android
  • ios