ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ವಾಪಸಾಗಿದ್ದಾರೆ. ಆದರೆ, ಫಿನಿಶರ್ ರಿಂಕು ಸಿಂಗ್ ಅವರನ್ನು ಕೈಬಿಟ್ಟಿರುವುದು ಸೇರಿದಂತೆ ಕೆಲವು ನಿರ್ಧಾರಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಬೆಂಗಳೂರು: ಬಹುನಿರೀಕ್ಷಿತ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನು ಕೇವಲ ಎರಡು ತಿಂಗಳು ಬಾಕಿ ಉಳಿದಿದೆ. ಇದರ ಹೊರತಾಗಿಯೂ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಪ್ರಯೋಗಶಾಲೆಯ ಕೆಲಸ ನಿಂತಿಲ್ಲ. ಬುಧವಾರ ದಕ್ಷಿಣ ಆಫ್ರಿಕಾ ಎದುರಿನ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಟಿ20 ಸರಣಿಯು ಡಿಸೆಂಬರ್ 09ರಿಂದ ಆರಂಭವಾಗಲಿದೆ.
ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ತಂಡ ಕೂಡಿಕೊಂಡಿದ್ದಾರೆ. ಆದರೆ ತಂಡದ ಆಯ್ಕೆಯ ವಿಚಾರದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳಿಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಕಳೆದೊಂದು ವರ್ಷದಿಂದ ಟೀಂ ಇಂಡಿಯಾ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದ ರಿಂಕು ಸಿಂಗ್ ಅವರನ್ನು ಇದ್ದಕ್ಕಿದ್ದಂತೆ ಭಾರತ ತಂಡದಿಂದ ಕೈಬಿಡಲಾಗಿದೆ. ಗಂಭೀರ್-ಅಗರ್ಕರ್ ಕೈಗೊಂಡ ಉತ್ತರ ಸಿಗದ ಐದು ಪ್ರಶ್ನೆಗಳು ಇಲ್ಲಿವೆ ನೋಡಿ.
1. ರಿಂಕು ಸಿಂಗ್ ಅವರನ್ನು ಅಚಾನಕ್ ಡ್ರಾಪ್ ಮಾಡಿದ್ದೇಕೆ?
ದಕ್ಷಿಣ ಆಫ್ರಿಕಾ ವಿರುದ್ದ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ರಿಂಕು ಸಿಂಗ್ ಅವರ ಹೆಸರಿಲ್ಲ. ರಿಂಕು ಸಾಕಷ್ಟು ಸಮಯದಿಂದ ಭಾರತ ಟಿ20 ತಂಡದ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. ರಿಂಕು ಕೆಲವು ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಇದರ ಹೊರತಾಗಿಯೂ ವಿಶ್ವಕಪ್ ಟೂರ್ನಿಗೆ ಕೆಲವೇ ತಿಂಗಳು ಬಾಕಿ ಇರುವಾಗ ರಿಂಕು ಸಿಂಗ್ ಅವರನ್ನು ಕೈಬಿಟ್ಟಿದ್ದೇಕೆ ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ.
2. ಮುಂದುವರೆದ ಓಪನ್ನರ್ಸ್ ಯಾರು ಎನ್ನುವ ಸಸ್ಪೆನ್ಸ್
ಗೌತಮ್ ಗಂಭೀರ್ ಕೋಚ್ ಆದ ಆರಂಭಿಕ ಹಂತದಲ್ಲಿ ಭಾರತ ಟಿ20 ತಂಡದ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರು. ಈ ಜೋಡಿ ಹಲವು ಸರಣಿಗಳಲ್ಲಿ ವಿಸ್ಪೋಟಕ ಆರಂಭಿಕ ಜತೆಯಾಟದ ಮೂಲಕ ಮಿಂಚಿತ್ತು. ಆದರೆ ಏಷ್ಯಾಕಪ್ ಟೂರ್ನಿಯಲ್ಲಿ ಶುಭ್‌ಮನ್ ಗಿಲ್ ಅವರನ್ನು ಕರೆ ತಂದು ಉಪನಾಯಕ ಪಟ್ಟ ಕಟ್ಟಲಾಯಿತು. ಜತೆಗೆ ಆರಂಭಿಕನಾಗಿ ಅಭಿಷೇಕ್ ಶರ್ಮಾ ಜತೆ ಗಿಲ್ ಅವರನ್ನು ಕಣಕ್ಕಿಳಿಸಲಾಯಿತು. ಇದೀಗ ಗಿಲ್ ಸಂಪೂರ್ಣ ಫಿಟ್ ಇಲ್ಲದಿದ್ದರೂ ಟಿ20 ಸರಣಿಗೆ ಆಯ್ಕೆ ಮಾಡಲಾಗಿದೆ. ಒಂದು ವೇಳೆ ಟಿ20 ಸರಣಿ ಸಮಯದಲ್ಲಿ ಗಿಲ್ ಫಿಟ್ ಆಗದಿದ್ದರೇ ಆರಂಭಿಕರು ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
3. ಹರ್ಷಿತ್ ರಾಣಾಗೆ ಸಿಕ್ತು ಮತ್ತೆ ಅವಕಾಶ!
ಟಿ20 ಕ್ರಿಕೆಟ್‌ನಲ್ಲಿ ಹರ್ಷಿತ್ ರಾಣಾ ಅವರ ಪ್ರದರ್ಶನ ಸಾಧಾರಣವಾಗಿದೆ. ಅದು ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯಲ್ಲೂ ಕಂಡುಬಂದಿತ್ತು. ಇದರ ಹೊರತಾಗಿಯೂ ಹರ್ಷಿತ್ ರಾಣಾಗೆ ಭಾರತ ಟಿ20 ತಂಡದಲ್ಲಿ ಸ್ಥಾನ ನೀಡಿರುವುದು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಪದೇ ಪದೇ ಫ್ಲಾಫ್ ಶೋ ನೀಡುತ್ತಿರುವ ರಾಣಾಗೆ ಮತ್ತೆ ಅವಕಾಶ ಸಿಕ್ಕಿದ್ದೇಕೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ ಎನಿಸಿದೆ.
4. ವಾಷಿಂಗ್ಟನ್ ಸುಂದರ್‌ಗೇಕೆ ಸ್ಥಾನ?
ಇತ್ತೀಚಿಗಿನ ದಿನಗಳಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಾಷಿಂಗ್ಟನ್ ಸುಂದರ್ ಬೌಲಿಂಗ್‌ನಿಂದಾಗಲಿ ಅಥವಾ ಬ್ಯಾಟಿಂಗ್‌ನಿಂದಾಗಲಿ ಮ್ಯಾಜಿಕ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಿದ್ದೂ ಸುಂದರ್‌ಗೆ ಭಾರತ ಟಿ20 ತಂಡದಲ್ಲಿ ಪದೇ ಪದೇ ಅವಕಾಶ ಸಿಗುತ್ತಿದೆ. ಸುಂದರ್ ಬದಲಿಗೆ ರಿಂಕು ಸಿಂಗ್‌ಗೆ ಅವಕಾಶ ನೀಡಬಹುದಿತ್ತು ಎನ್ನುವುದು ಕ್ರಿಕೆಟ್ ಫ್ಯಾನ್ಸ್ ಬಯಕೆ.
5. ಎರಡೆರಡು ವಿಕೆಟ್ ಕೀಪರ್‌ಗೆ ಏನು ಕೆಲಸ?
ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದ 15 ಆಟಗಾರರ ಪೈಕಿ ಇಬ್ಬರು ವಿಕೆಟ್ ಕೀಪರ್‌ಗಳಿಗೆ ಸ್ಥಾನ ಕಲ್ಪಿಸಲಾಗಿದೆ. ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಜತೆಗೆ ಜಿತೇಶ್ ಶರ್ಮಾ ಅವರನ್ನು ವಿಕೆಟ್ ಕೀಪರ್ ಬ್ಯಾಟರ್ ಆಗಿ ತಂಡದಲ್ಲಿ ಮಣೆ ಹಾಕಲಾಗಿದೆ. ಆಯ್ಕೆ ಸಮಿತಿಗೆ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಕೀಪರ್ ಆಗಿ ಸಂಜುವನ್ನು ಆಯ್ಕೆ ಮಾಡಬೇಕೋ ಅಥವಾ ಜಿತೇಶ್ ಶರ್ಮಾಗೆ ಅವಕಾಶ ನೀಡಬೇಕೋ ಎನ್ನುವ ಗೊಂದಲ ಇನ್ನೂ ಇದ್ದಂತಿದೆ.
ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಗೆ ಭಾರತ ತಂಡ ಹೀಗಿದೆ ನೋಡಿ:
ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್.


