ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 358 ರನ್‌ಗಳ ಬೃಹತ್ ಮೊತ್ತ ಗಳಿಸಿದರೂ ಟೀಂ ಇಂಡಿಯಾ ಸೋಲನುಭವಿಸಿದೆ. ಪಂದ್ಯದ ನಂತರ ಮಾತನಾಡಿದ ನಾಯಕ ಕೆ ಎಲ್ ರಾಹುಲ್, ಎರಡನೇ ಇನ್ನಿಂಗ್ಸ್‌ನಲ್ಲಿನ ತೀವ್ರ ಇಬ್ಬನಿಯಿಂದಾಗಿ ಬೌಲರ್‌ಗಳಿಗೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ.
ರಾಯ್ಪುರ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ ರೋಚಕ ಸೋಲು ಅನುಭವಿಸಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಋತುರಾಜ್ ಗಾಯಕ್ವಾಡ್ ಹಾಗೂ ವಿರಾಟ್ ಕೊಹ್ಲಿ ಶತಕಗಳ ನೆರವಿನಿಂದ 358 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಹೀಗಿದ್ದೂ, ದೊಡ್ಡ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಟೀಂ ಇಂಡಿಯಾ ವಿಫಲವಾಗಿತ್ತು. ಇದೀಗ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ಕೆ ಎಲ್ ರಾಹುಲ್, ಕಾರಣ ಬಿಚ್ಚಿಟ್ಟಿದ್ದಾರೆ.
ಟೀಂ ಇಂಡಿಯಾದ ಕಳಪೆ ಬೌಲಿಂಗ್ ಹಾಗೂ ಸಾಧಾರಣ ಕ್ಷೇತ್ರರಕ್ಷಣೆ ಪಂದ್ಯ ಭಾರತದ ಕೈಜಾರುವಂತೆ ಮಾಡಿತು. ಇನ್ನು ದಕ್ಷಿಣ ಆಫ್ರಿಕಾ ಪರ ಆರಂಭಿಕ ಬ್ಯಾಟರ್ ಏಯ್ಡನ್ ಮಾರ್ಕ್‌ರಮ್ ಶತಕ ಹಾಗೂ ಡೆವಾಲ್ಡ್ ಬ್ರೆವೀಸ್ ಅದ್ಭುತ ಅರ್ಧಶತಕ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಿತು. ಇದೆಲ್ಲದರ ನಡುವೆ ಕೆ ಎಲ್ ರಾಹುಲ್, ಭಾರತ ತಂಡದ ಸೋಲಿಗೆ ನಿಜವಾದ ಕಾರಣ ಏನು ಎನ್ನುವುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.
ಸೋಲಿಗೆ ನಿಜವಾದ ಕಾರಣ ಬಿಚ್ಚಿಟ್ಟ ರಾಹುಲ್:
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಕೆ ಎಲ್ ರಾಹುಲ್, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ಎರಡನೇ ಇನ್ನಿಂಗ್ಸ್ ವೇಳೆ ಸಾಕಷ್ಟು ಇಬ್ಬನಿ ಬೀಳಲಾರಂಭಿಸಿತು. ಹೀಗಾಗಿ ಬೌಲರ್‌ಗಳು ಚೆಂಡಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ನಾವು ಕಳೆದ ಪಂದ್ಯಕ್ಕಿಂತಲೂ ಚೆನ್ನಾಗಿಯೇ ಪ್ರದರ್ಶನ ನೀಡಿದೆವು. ಇನ್ನೂ ಕೆಲವೊಂದು ವಿಭಾಗಗಳಲ್ಲಿ ನಾವು ಚೆನ್ನಾಗಿ ಪ್ರದರ್ಶನ ತೋರಬಹುದಿತ್ತು. ಬ್ಯಾಟಿಂಗ್‌ನಲ್ಲಿ ನಾವು 350+ ರನ್ ಬಾರಿಸಿದ್ದು ಒಳ್ಳೆಯ ಪ್ರದರ್ಶನ. ಆದರೆ ಕಳೆದ ಪಂದ್ಯದ ಬಳಿಕ ನಾವು ಡ್ರೆಸ್ಸಿಂಗ್ ರೂಮ್‌ನಲ್ಲಿ ಇದೇ ವಿಚಾರವನ್ನು ಚರ್ಚಿಸಿದ್ದೆವು. ಯಾಕೆಂದರೆ ಒದ್ದೆಯಾದ ಚೆಂಡಿನಲ್ಲಿ ಬೌಲಿಂಗ್ ಮಾಡುವಾಗ ಇನ್ನೂ 20-25 ರನ್ ಹೇಗೆ ಗಳಿಸಬೇಕು ಎನ್ನುವುದನ್ನು ಚರ್ಚಿಸಿದ್ದೆವು ಎಂದು ರಾಹುಲ್ ಹೇಳಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದು ನಮ್ಮ ಪಾಲಿಗೆ ಕೊಂಚ ದುಬಾರಿಯಾಯಿತು ಎಂದು ಕೆ ಎಲ್ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.ಆದರೆ ಇದೇ ವೇಳೆ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಹಾಗೂ ಋತುರಾಜ್ ಗಾಯಕ್ವಾಡ್ ಅವರ ಬ್ಯಾಟಿಂಗ್ ಕೊಂಡಾಡಿದ್ದಾರೆ. ಋತುರಾಜ್ ಬ್ಯಾಟಿಂಗ್ ಆಡಿದ ರೀತಿ ನೋಡಿದಾಗ ಖುಷಿಯಾಯಿತು. ಇನ್ನು ವಿರಾಟ್ ಕೊಹ್ಲಿ ಆ ರೀತಿ 53 ಬಾರಿ ಮಾಡಿ ತೋರಿಸಿದ್ದಾರೆ. ಅವರು ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಋತುರಾಜ್ ಕೂಡಾ ಚೆನ್ನಾಗಿ ಬ್ಯಾಟಿಂಗ್ ಮಾಡಿದರು ಎಂದು ರಾಹುಲ್ ಹೇಳಿದ್ದಾರೆ.
ಹೀಗಿತ್ತು ನೋಡಿ ಎರಡನೇ ಮ್ಯಾಚ್:
ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ವಿರಾಟ್ ಕೊಹ್ಲಿ, ಋತುರಾಜ್ ಗಾಯಕ್ವಾಡ್ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 358 ರನ್ ಕಲೆಹಾಕಿತು. ಇನ್ನು ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಕ್ವಿಂಟನ್ ಡಿ ಕಾಕ್ ವಿಕೆಟ್ ಕಳೆದುಕೊಂಡಿತಾದರೂ, ಏಯ್ಡನ್ ಮಾರ್ಕ್‌ರಮ್(110), ತೆಂಬಾ ಬವುಮಾ(46), ಬ್ರೀಟ್ಸ್‌ಕೆ 68, ಡೆವಾಲ್ಡ್ ಬ್ರೆವೀಸ್(54) ಹಾಗೂ ಕೊನೆಯಲ್ಲಿ ಕಾರ್ಬಿನ್ ಬಾಶ್ ಅಜೇಯ 29 ರನ್ ಸಿಡಿಸುವ ಮೂಲಕ ಇನ್ನೂ 4 ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ಅಂತರದ ರೋಚಕ ಜಯ ಸಾಧಿಸಿತು.
ಇದೀಗ ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ 1-1ರ ಸಮಬಲ ಸಾಧಿಸಿದ್ದು, ಡಿಸೆಂಬರ್ 06ರಂದು ವಿಶಾಖಪಟ್ಟಣದಲ್ಲಿ ನಡೆಯಲಿರುವ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.


