ಐಪಿಎಲ್‌ನಲ್ಲಿ 3.4 ಕೋಟಿಗೆ ಹರಾಜಾದ ಪ್ರಿಯಾನ್ಶ್ ಆರ್ಯಾ, ಚೆನ್ನೈ ವಿರುದ್ಧ 39 ಎಸೆತಗಳಲ್ಲಿ ಶತಕ ಸಿಡಿಸಿ ಅಚ್ಚರಿ ಮೂಡಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಅನ್‌ಕ್ಯಾಪ್ಡ್ ಆಟಗಾರನ ಶತಕವಾಗಿದೆ. ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 219 ರನ್ ಗಳಿಸಿತು. ಪ್ರಿಯಾನ್ಶ್ 103, ಶಶಾಂಕ್ ಸಿಂಗ್ 52 ರನ್ ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ 201 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ 18 ರನ್‌ಗಳಿಂದ ಜಯಗಳಿಸಿತು.

ಮುಲ್ಲಾನ್‌ಪುರ್‌: ಐಪಿಎಲ್‌ ಆಟಗಾರರ ಹರಾಜಿನಲ್ಲಿ 3.4 ಕೋಟಿ ರು.ಗೆ ಬಿಕರಿಯಾಗಿ ಭಾರೀ ಅಚ್ಚರಿ ಮೂಡಿಸಿದ್ದ ದೆಹಲಿ ಮೂಲದ 24 ವರ್ಷದ ಪ್ರಿಯಾನ್ಶ್‌ ಆರ್ಯಾ, ಐಪಿಎಲ್‌ನಲ್ಲಿ ತಾವಾಡಿದ ಕೇವಲ 4ನೇ ಪಂದ್ಯದಲ್ಲೇ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಮಂಗಳವಾರ ಇಲ್ಲಿ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ 39 ಎಸೆತದಲ್ಲಿ ಶತಕ ಸಿಡಿಸುವ ಮೂಲಕ, ಪ್ರಿಯಾನ್ಶ್‌ ಎಲ್ಲರನ್ನೂ ಬೆರಗಾಗಿಸಿದರು.

ಚೆನ್ನೈ ಬೌಲರ್‌ಗಳನ್ನು ಚೆಂಡಾಡಿದ ಪ್ರಿಯಾನ್ಶ್‌ ಮೊದಲು 19 ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಬಳಿಕ 20 ಎಸೆತಗಳಲ್ಲಿ ಮತ್ತೆ 50 ರನ್‌ ಕಲೆಹಾಕಿ, ಐಪಿಎಲ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದರು.

ಇದನ್ನೂ ಓದಿ: ಮುಂಬೈ ಎದುರು ಪಂದ್ಯ ಗೆದ್ದ ಆರ್‌ಸಿಬಿ ಸಂಭ್ರಮಕ್ಕೆ ಬ್ರೇಕ್; ನಾಯಕ ರಜತ್ ಪಾಟೀದಾರ್‌ಗೆ ಶಾಕ್!

ಐಪಿಎಲ್‌ ಇತಿಹಾಸದಲ್ಲೇ ಅತಿವೇಗವಾಗಿ ಶತಕ ಸಿಡಿಸಿದ ಅನ್‌ಕ್ಯಾಪ್ಡ್‌ (ಅಂ.ರಾ. ಕ್ರಿಕೆಟ್‌ ಆಡದ) ಆಟಗಾರ ಎನ್ನುವ ದಾಖಲೆ ಬರೆದ ಪ್ರಿಯಾನ್ಶ್‌, ಭಾರತೀಯನಿಂದ ದಾಖಲಾದ 2ನೇ ಅತಿವೇಗದ ಶತಕದ ದಾಖಲೆಗೂ ಪಾತ್ರರಾದರು.

2010ರಲ್ಲಿ ಯೂಸುಫ್‌ ಪಠಾಣ್ 37 ಎಸೆತದಲ್ಲಿ ಶತಕ ಸಿಡಿಸಿದ್ದರು. ಇನ್ನು, ಐಪಿಎಲ್‌ನಲ್ಲಿ ಇದು ಒಟ್ಟಾರೆ 5ನೇ ಅತಿವೇಗದ ಶತಕ ಎನಿಸಿತು.

ಐಪಿಎಲ್‌ನಲ್ಲಿ ಅತಿವೇಗದ ಶತಕ

ಆಟಗಾರ ಎಸೆತ ತಂಡ ವಿರುದ್ಧ ವರ್ಷ

ಕ್ರಿಸ್‌ ಗೇಲ್‌ 30 ಆರ್‌ಸಿಬಿ ಪುಣೆ 2013

ಯೂಸುಫ್‌ 37 ರಾಜಸ್ಥಾನ ಮುಂಬೈ 2010

ಮಿಲ್ಲರ್‌ ಪಂಜಾಬ್‌ ಆರ್‌ಸಿಬಿ 2013

ಹೆಡ್‌ ಹೈದ್ರಾಬಾದ್‌ ಆರ್‌ಸಿಬಿ 2024

ಪ್ರಿಯಾನ್ಶ್‌ ಪಂಜಾಬ್‌ ಚೆನ್ನೈ 2025

ಪಂಜಾಬ್‌ ಮುಂದೆ ಮಂಕಾದ ಚೆನ್ನೈ!

ಮುಲ್ಲಾನ್‌ಪುರ್‌: ಕೇವಲ ಮೂವರು ಬ್ಯಾಟರ್‌ಗಳು ನೀಡಿದ ರನ್‌ ಕೊಡುಗೆಯಿಂದ 219 ರನ್‌ಗಳ ಬೃಹತ್‌ ಮೊತ್ತ ಪೇರಿಸಿದ ಪಂಜಾಬ್‌ ಕಿಂಗ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 18 ರನ್‌ಗಳ ಅಮೋಘ ಗೆಲುವು ದಾಖಲಿಸಿತು.

8 ಓವರಲ್ಲಿ ಪಂಜಾಬ್‌ 83 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಶ್ರೇಯಸ್‌ ಅಯ್ಯರ್‌, ಪ್ರಭ್‌ಸಿಮ್ರನ್‌, ಮ್ಯಾಕ್ಸ್‌ವೆಲ್‌, ಸ್ಟೋಯ್ನಿಸ್‌, ನೇಹಲ್‌ ಔಟಾಗಿದ್ದರು. ಆದರೆ ಪ್ರಿಯಾನ್ಶ್‌ ಆರ್ಯಾ 103, ಶಶಾಂಕ್‌ ಸಿಂಗ್‌ 36 ಎಸೆತದಲ್ಲಿ ಔಟಾಗದೆ 52, ಮಾರ್ಕೊ ಯಾನ್ಸನ್‌ 19 ಎಸೆತದಲ್ಲಿ ಔಟಾಗದೆ 34 ರನ್‌ ಸಿಡಿಸಿ, ಪಂಜಾಬ್‌ ದೊಡ್ಡ ಮೊತ್ತ ದಾಖಲಿಸಲು ನೆರವಾದರು.

ಇದನ್ನೂ ಓದಿ:ಕೊಹ್ಲಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ; ಯಾವ ಭಾರತೀಯನೂ ಮಾಡದ ಸಾಧನೆ ಈಗ ವಿರಾಟ್ ಪಾಲು!

2018ರ ಬಳಿಕ ಐಪಿಎಲ್‌ನಲ್ಲಿ 180ಕ್ಕೂ ಹೆಚ್ಚು ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತದ ಚೆನ್ನೈ, ಮತ್ತೊಮ್ಮೆ ವೈಫಲ್ಯ ಅನುಭವಿಸಿತು. ರಚಿನ್‌, ಕಾನ್‌ವೇ, ದುಬೆ ಹೋರಾಟ ನಡೆಸಿದರೂ, ಗೆಲುವು ಚೆನ್ನೈ ಕೈಗೆಟುಕಲಿಲ್ಲ. ತಂಡಕ್ಕಿದು ಸತತ 4ನೇ ಸೋಲು.

ಸ್ಕೋರ್‌: ಪಂಜಾಬ್‌ 20 ಓವರಲ್ಲಿ 219/6 (ಪ್ರಿಯಾನ್ಶ್‌ 103, ಶಶಾಂಕ್‌ 52, ಖಲೀಲ್‌ 2-45), ಚೆನ್ನೈ 20 ಓವರಲ್ಲಿ 201/5 (ಕಾನ್‌ವೇ 67, ದುಬೆ 42, ಲಾಕಿ 2-26)