ಮುಂಬೈ ಎದುರು ಪಂದ್ಯ ಗೆದ್ದ ಆರ್‌ಸಿಬಿ ಸಂಭ್ರಮಕ್ಕೆ ಬ್ರೇಕ್; ನಾಯಕ ರಜತ್ ಪಾಟೀದಾರ್‌ಗೆ ಶಾಕ್!
ಮುಂಬೈ: ಒಂದು ದಶಕದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈನ ವಾಂಖೆಡೆ ಮೈದಾನದಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಆದ್ರೆ ಆರ್‌ಸಿಬಿ ಸಂಭ್ರಕ್ಕೆ ಬ್ರೇಕ್ ಬಿದ್ದಿದ್ದು, ನಾಯಕ ರಜತ್ ಪಾಟೀದಾರ್‌ಗೆ ಬಿಗ್ ಶಾಕ್ ಎದುರಾಗಿದೆ.

18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಾಚೆ ಮೂರನೇ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿಯೇ ಭದ್ರವಾಗಿದೆ.
5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಆರ್‌ಸಿಬಿ ತಂಡವು ಅವರದ್ಧೇ ನೆಲದಲ್ಲಿ 12 ರನ್ ಅಂತರದ ಭರ್ಜರಿ ಜಯ ಸಾಧಿಸಿದೆ. ಇದು ಆರ್‌ಸಿಬಿ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಆರ್‌ಸಿಬಿ ತಂಡವು ವಾಂಖೆಡೆ ಮೈದಾನದಲ್ಲಿ 2015ರಲ್ಲಿ ಕೊನೆಯ ಬಾರಿಗೆ ಗೆಲುವಿನ ನಗೆ ಬೀರಿತ್ತು. ಇದಾದ ಬಳಿಕ ಕಳೆದೊಂದು ದಶಕದಿಂದ ವಾಂಖೆಡೆಯಲ್ಲಿ ಆರ್‌ಸಿಬಿಗೆ ಗೆಲುವು ಎನ್ನುವುದು ಮರೀಚಿಕೆಯಾಗಿತ್ತು.
ಆದರೆ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಹಾಗೂ ಜಿತೇಶ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಹಾಗೂ ಕೃನಾಲ್ ಪಾಂಡ್ಯ ಮಿಂಚಿನ ಬೌಲಿಂಗ್ ನೆರವಿನಿಂದ ಮುಂಬೈ ತಂಡವನ್ನು ಅವರದ್ದೇ ನೆಲದಲ್ಲಿ ಮಣಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ.
ಆರ್‌ಸಿಬಿ ತಂಡವು ಈ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿರುವಾಗಲೇ ನಾಯಕ ರಜತ್ ಪಾಟೀದಾರ್‌ಗೆ ಬಿಗ್ ಶಾಕ್ ಎದುರಾಗಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ತಪ್ಪಿಗಾಗಿ ಪಾಟೀದಾರ್‌ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ.
ಮುಂಬೈ ಇಂಡಿಯನ್ಸ್ ಎದುರು ಆರ್‌ಸಿಬಿ ತಂಡವು ಮಂದಗತಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್ ಆರ್ಟಿಕಲ್ 2.2 ನೀತಿ ಸಂಹಿತೆ ಉಲ್ಲಂಘಿಸಿದೆ. ಈ ಕಾರಣಕ್ಕಾಗಿ ಆರ್‌ಸಿಬಿ ನಾಯಕ ರಜತ್ ಪಾಟೀದಾರ್‌ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
Rajat Patidar. (Photo- IPL)
ಆರ್‌ಸಿಬಿ ತಂಡವು ಇದೀಗ ಏಪ್ರಿಲ್ 10ರಂದು ತವರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಆರ್‌ಸಿಬಿ ತಂಡವು ತವರಿನಾಚೆ ಮೂರು ಪಂದ್ಯ ಗೆದ್ದಿದ್ದು ತವರಿನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.