2027ರ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಕೆಕೆಆರ್ ಮತ್ತು ಸಿಎಸ್‌ಕೆ ಹೆಸರುಗಳು ಕೇಳಿಬರುತ್ತಿರುವ ಮಧ್ಯೆ, ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಪಾಂಡ್ಯ ತಮ್ಮ ಹಳೆಯ ತಂಡವಾದ ಗುಜರಾತ್ ಟೈಟಾನ್ಸ್‌ಗೆ ಮರಳಲಿದ್ದಾರೆ ಎಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

ಬೆಂಗಳೂರು: 2027ರ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡವನ್ನು ಪ್ರತಿನಿಧಿಸುತ್ತಾರೆ ಎನ್ನುವುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈಗಾಗಲೇ ಮುಂಬೈ ಇಂಡಿಯನ್ಸ್‌ ತಂಡದಿಂದ ಒಂದು ಕಾಲು ಹೊರಗಿಟ್ಟಿರುವ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಮಾಜಿ ಚಾಂಪಿಯನ್ನರಾದ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪೈಪೋಟಿ ನಡೆಸುತ್ತಿವೆ ಎನ್ನುವ ಸುದ್ದಿ ಗುಟ್ಟಾಗಿಯೇನು ಉಳಿದಿಲ್ಲ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಈ ಎರಡೂ ತಂಡಗಳನ್ನು ಬಿಟ್ಟು ಬೇರೆಯದ್ದೇ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ಕೆಲದಿನಗಳ ಹಿಂದಷ್ಟೇ ಮುಂಬೈ ಇಂಡಿಯನ್ಸ್ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ, ತಮ್ಮ ಮಾಜಿ ತಂಡವಾಗಿರುವ ಗುಜರಾತ್ ಟೈಟಾನ್ಸ್ ಸೇರಲು ಒಲವು ತೋರಿದ್ದರು ಎಂದು ವರದಿಯಾಗಿತ್ತು. ಆದರೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಬಳಿ ಪಾಂಡ್ಯ ನಾಯಕತ್ವ ಬೇಡಿಕೆಯಿಟ್ಟಿದ್ದರು, ಗುಜರಾತ್ ಫ್ರಾಂಚೈಸಿ ಪಾಂಡ್ಯ ಬೇಡಿಕೆಯನ್ನು ತಿರಸ್ಕರಿಸಿತ್ತು ಎಂದೆಲ್ಲಾ ವರದಿಯಾಗಿತ್ತು. ಸದ್ಯ ಗುಜರಾತ್ ಟೈಟಾನ್ಸ್ ತಂಡವನ್ನು ಶುಭ್‌ಮನ್ ಮುನ್ನಡೆಸುತ್ತಿದ್ದು, ಕಳೆದ ಸೀಸನ್ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಿ, ಆರ್‌ಸಿಬಿ ಎದುರು ಸೋಲುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಅಶ್ವಿನ್ ಪ್ರಕಾರ, ಹಾರ್ದಿಕ್ ಪಾಂಡ್ಯ ಮತ್ತೆ ಗುಜರಾತ್ ಟೈಟಾನ್ಸ್ ತೆಕ್ಕೆಗೆ ಜಾರಲಿದ್ದಾರೆ ಎಂದು ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ಪಾಂಡ್ಯ, ಗುಜರಾತ್ ಟೈಟಾನ್ಸ್ ಮಾತುಕತೆ ನಡೆಸಿದ್ದರೇ ತಪ್ಪಲ್ಲ

'ಗುಜರಾತ್ ಟೈಟಾನ್ಸ್ ತಂಡವನ್ನು ಭೇಟಿ ಮಾಡಿ ಹಾರ್ದಿಕ್ ಪಾಂಡ್ಯ ಮಾತುಕತೆ ನಡೆಸಿದ್ದರೇ ಅದು ತಪ್ಪೇನು ಅಲ್ಲ. ಅವರು ಆ ತಂಡದ ಜತೆಗೆ ನಿಜಕ್ಕೂ ಎಂಜಾಯ್ ಮಾಡಿಕೊಂಡು ಆಡಿದ್ದಾರೆ. ಅದು ನಾಯಕತ್ವವೇ ಇರಲಿ ಅಥವಾ ಬ್ಯಾಟಿಂಗ್ ವಿಚಾರವೇ ಇರಲಿ, ಅವರಿಂದ ಶ್ರೇಷ್ಠ ಪ್ರದರ್ಶನ ಮೂಡಿಬಂದಿದ್ದೇ ಅವರು ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾಗ. ನನಗೆ ಈಗಲೂ ಅನಿಸ್ತಿದೆ ಅವರು ಮತ್ತೆ ಗುಜರಾತ್ ಟೈಟಾನ್ಸ್ ತೆಕ್ಕೆಗೆ ಜಾರುತ್ತಾರೆಂದು' ಎಂದು ಅಶ್ವಿನ್ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಎರಡು ಸೀಸನ್‌ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. 2022ರಲ್ಲಿ ನಾಯಕರಾಗಿ ಮೊದಲ ಸೀಸನ್‌ನಲ್ಲಿಯೇ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಇದಾದ ಮರು ವರ್ಷ ಅಂದರೆ 2023ರ ಐಪಿಎಲ್ ಟೂರ್ನಿಯಲ್ಲೂ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಚನ್ನೈ ಸೂಪರ್ ಕಿಂಗ್ಸ್ ಎದುರು ವಿರೋಚಿತ ಸೋಲು ಅನುಭವಿಸುವ ಮೂಲಕ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದಾದ ಬಳಿಕ 2024ರ ಐಪಿಎಲ್ ಟೂರ್ನಿಗೂ ಮುನ್ನ ಗುಜರಾತ್ ಟೈಟಾನ್ಸ್ ತೊರೆದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಜಾರಿದ್ದರು.

ಹಾರ್ದಿಕ್ ಪಾಂಡ್ಯ ಯಾಕೆ ಗುಜರಾತ್ ಟೈಟಾನ್ಸ್‌ಗೆ ವಾಪಾಸ್ಸಾಗಬೇಕು?

ಗುಜರಾತ್ ಟೈಟಾನ್ಸ್ ಹಾರ್ದಿಕ್ ಪಾಂಡ್ಯ ಪಾಲಿಗೆ ನಿಜಕ್ಕೂ ಒಳ್ಳೆಯ ವೇದಿಕೆ. ಗುಜರಾತ್ ಟೈಟಾನ್ಸ್ ಕೂಡಾ ಒಳ್ಳೆಯ ತಂಡ. ಕಳೆದ ಎರಡು ವರ್ಷಗಳಿಂದ ಶುಭ್‌ಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಚೆನ್ನಾಗಿ ಆಡುತ್ತಾ ಬಂದಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್‌ಗೆ ವಾಪಾಸ್ಸಾದರೂ ನಾಯಕತ್ವ ಸಿಗುವುದು ಅನುಮಾನ. ಆದರೆ ಆಟಗಾರನಾಗಿ ಪಾಂಡ್ಯ ಮತ್ತೆ ಗುಜರಾತ್ ಟೈಟಾನ್ಸ್ ತಂಡದಲ್ಲಿ ಮಿಂಚಬಹುದು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.