14 ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡಿದ ಆರ್‌ಸಿಬಿ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್, ಮುಂಬರುವ ಹರಾಜಿನಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಐಪಿಎಲ್ ಬದಲಿಗೆ ಅವರು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (ಪಿಎಸ್‌ಎಲ್) ಆಡುವ ಮೂಲಕ ಹೊಸ ಕ್ರಿಕೆಟ್ ಪಯಣ ಆರಂಭಿಸಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಬೆಂಗಳೂರು (ನ.29): ಕಳೆದ 14 ವರ್ಷಗಳ ಕಾಲ ನಿರಂತರವಾಗಿ ಐಪಿಎಲ್‌ನಲ್ಲಿ ಆಡುತ್ತಿದ್ದ ಆರ್‌ಸಿಬಿ ಮಾಜಿ ಆಟಗಾರ ಹಾಗೂ ನಾಯಕ ಫಾಫ್‌ ಡು ಪ್ಲೆಸಿಸ್‌ ಮುಂಬರುವ ಐಪಿಎಲ್‌ ಹರಾಜಿನಲ್ಲಿ ಭಾಗವಹಿಸದೇ ಇರುವ ನಿರ್ಧಾರ ಮಾಡಿದ್ದಾರೆ. 41 ವರ್ಷದ ಫಾಫ್‌ ಡು ಪ್ಲೆಸಿಸ್‌ ಈದನ್ನು ಅಧಿಕೃತವಾಗಿ ಶನಿವಾರ ಸೋಶಿಯಲ್‌ ಮೀಡಿಯಾದಲ್ಲಿ ಘೋಷಣೆ ಮಾಡಿದ ಬಳಿಕ ಐಪಿಎಲ್‌ನೊಂದಿಗೆ ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರನ ಸತತ 14 ವರ್ಷಗಳ ಸಾಂಗತ್ಯ ಕೊನೆಗೊಂಡಂತಾಗಿದೆ. ಐಪಿಎಲ್‌ ಬದಲಿಗೆ ಅವರಿ 2026ರ ಪಾಕಿಸ್ತಾನ ಸೂಪರ್‌ ಲೀಗ್‌ ಅಥವಾ ಪಿಎಸ್‌ಎಲ್‌ನಲ್ಲಿ ಆಡುವ ಮೂಲಕ ಹೊಸ ಪ್ರಯಾಣ ಆರಂಭಿಸಲಿದ್ದಾರೆ.

2012ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರವಾಗಿ ಆಡುವ ಮೂಲಕ ಡು ಪ್ಲೆಸಿಸ್‌ ಐಪಿಎಲ್‌ ಪದಾರ್ಪಣೆ ಮಾಡಿದ್ದರು. ತಮ್ಮ ಪಾದಾರ್ಪಣಾ ಸೀಸ್‌ನಲ್ಲಿಯೇ ಅವರು 398 ರನ್‌ ಬಾರಿಸಿದ್ದರು. ಆದರೆ, ಅವರ ಅತ್ಯುತ್ತಮ ಐಪಿಎಲ್‌ ಸೀಸನ್‌ಗಳು ಆರಂಭವಾಗಿದ್ದೇ 2020ರ ನಂತರ. ಅದೇ ವರ್ಷ ಅವರು ಐಪಿಎಲ್‌ನಲ್ಲಿ ಮೊದಲ ಬಾರಿಗೆ ಒಂದೇ ಸೀಸನ್‌ನಲ್ಲಿ 400ಕ್ಕೂ ಅಧಿಕ ರನ್‌ ಬಾರಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್‌ ಪರವಾಗಿ ಹಲವಾರು ವರ್ಷಗಳ ಕಾಲ ಉತ್ತಮ ಕ್ರಿಕೆಟ್‌ ಆಡಿದ್ದ ಫಾಫ್‌ ಡು ಪ್ಲೆಸಿಸ್‌ 2018 ಹಾಗೂ 2021ರಲ್ಲಿ ಇದೇ ತಂಡದ ಭಾಗವಾಗಿ ಟ್ರೋಫಿ ಕೂಡ ಜಯಿಸಿದ್ದರು.

ಐಪಿಎಲ್‌ನಲ್ಲಿ ಹಲವು ಫ್ರಾಂಚೈಸಿ ಪರ ಆಡಿದ್ದ ಪ್ಲೆಸಿಸ್‌

2020-2024ರ ಅವಧಿಯಲ್ಲಿ, ಡು ಪ್ಲೆಸಿಸ್ ಐಪಿಎಲ್‌ನಲ್ಲಿ ಬ್ಯಾಟ್ಸ್‌ಮನ್ ಆಗಿ ಅತ್ಯಂತ ಪ್ರಮುಖ ಹಂತ ದಾಟಿದರು. 2021 ರ ಆವೃತ್ತಿಯಲ್ಲಿ ತಮ್ಮ ಆರಂಭಿಕ ಜೊತೆಗಾರ ರುತುರಾಜ್ ಗಾಯಕ್ವಾಡ್ ಅವರ ಅತಿ ಹೆಚ್ಚು ರನ್‌ಗಳ ದಾಖಲೆಗಿಂತ ಕೇವಲ ಎರಡು ರನ್‌ಗಳ ಕಡಿಮೆ ಗಳಿಸಿದರು ಮತ್ತು ನಂತರ 2023 ರ ಆವೃತ್ತಿಯಲ್ಲಿ ಮತ್ತೊಮ್ಮೆ ಎರಡನೇ ಅತ್ಯುತ್ತಮ ಸ್ಥಾನ ಪಡೆದರು, ಈ ಬಾರಿ ಅವರು ನಾಯಕತ್ವ ವಹಿಸಿದ್ದ ತಮ್ಮ ಹೊಸ ಫ್ರಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ರನ್‌ ಗಳಿಸಿದ್ದರು. 2025 ರ ಆವೃತ್ತಿಗೆ ಮುಂಚಿತವಾಗಿ ದೆಹಲಿ ಕ್ಯಾಪಿಟಲ್ಸ್ ಪರ ಆಡಿದ್ದ ಡು ಪ್ಲೆಸಿಸ್ ಹೆಚ್ಚಿನ ಆಕ್ರಮಣಕಾರಿ ಆಟ ತೋರಿರಲಿಲ್ಲ, ಅಲ್ಲಿ ಅವರು 22.44 ರ ಸರಾಸರಿಯಲ್ಲಿ ಕೇವಲ 202 ರನ್‌ಗಳನ್ನು ಗಳಿಸಿದರು.

"ಐಪಿಎಲ್‌ನಲ್ಲಿ 14 ಋತುಗಳ ನಂತರ, ಈ ವರ್ಷ ನನ್ನ ಹೆಸರನ್ನು ಹರಾಜಿನಲ್ಲಿ ಹಾಕದಿರಲು ನಾನು ನಿರ್ಧರಿಸಿದ್ದೇನೆ" ಎಂದು ಡು ಪ್ಲೆಸಿಸ್ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಬರೆದಿದ್ದಾರೆ. "ಇದು ಒಂದು ದೊಡ್ಡ ನಿರ್ಧಾರ, ಮತ್ತು ನಾನು ಹಿಂತಿರುಗಿ ನೋಡಿದಾಗ ಬಹಳಷ್ಟು ಕೃತಜ್ಞತೆಯೊಂದಿಗೆ ಬರುತ್ತದೆ. ಈ ಲೀಗ್ ನನ್ನ ಪ್ರಯಾಣದ ಒಂದು ದೊಡ್ಡ ಭಾಗವಾಗಿದೆ. ವಿಶ್ವ ದರ್ಜೆಯ ತಂಡದ ಸಹ ಆಟಗಾರರೊಂದಿಗೆ, ಅದ್ಭುತ ಫ್ರಾಂಚೈಸಿಗಳಿಗಾಗಿ ಮತ್ತು ಮಹಾನ್‌ ಅಭಿಮಾನಿಗಳ ಮುಂದೆ ಆಡಲು ನಾನು ಅದೃಷ್ಟಶಾಲಿಯಾಗಿದ್ದೇನೆ' ಎಂದು ಬರೆದಿದ್ದಾರೆ.

"ಹದಿನಾಲ್ಕು ವರ್ಷಗಳು ಅನ್ನೋದು ಬಹಳ ದೊಡ್ಡ ಸಮಯ, ಮತ್ತು ಈ ಅಧ್ಯಾಯವು ನನಗೆ ಎಷ್ಟು ಅರ್ಥಪೂರ್ಣವಾಗಿದೆ ಎಂಬುದರ ಬಗ್ಗೆ ನನಗೆ ಹೆಮ್ಮೆ ಇದೆ. ಭಾರತವು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ, ಮತ್ತು ಇದು ಖಂಡಿತವಾಗಿಯೂ ವಿದಾಯವಲ್ಲ - ನೀವು ನನ್ನನ್ನು ಮತ್ತೆ ನೋಡುತ್ತೀರಿ' ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಪಿಎಸ್‌ಎಲ್‌ನ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪೇಶಾವರ್ ಝಲ್ಮಿ ಪರ ಆಡಿರುವ ಡು ಪ್ಲೆಸಿಸ್, ಮುಂಬರುವ ಆವೃತ್ತಿಯ ಭಾಗವಾಗುವುದಾಗಿ ದೃಢಪಡಿಸಿದ್ದಾರೆ. "ಈ ವರ್ಷ, ನಾನು ಹೊಸ ಸವಾಲನ್ನು ಸ್ವೀಕರಿಸಲು ಆಯ್ಕೆ ಮಾಡಿಕೊಂಡಿದ್ದೇನೆ ಮತ್ತು ಮುಂಬರುವ ಪಿಎಸ್ಎಲ್ ಋತುವಿನಲ್ಲಿ ಆಡಲಿದ್ದೇನೆ" ಎಂದು ಅವರು ಬರೆದಿದ್ದಾರೆ. "ಇದು ನನಗೆ ಒಂದು ರೋಮಾಂಚಕಾರಿ ಹೆಜ್ಜೆ - ಹೊಸದನ್ನು ಅನುಭವಿಸಲು, ಅದನ್ನು ಆಟಗಾರನಾಗಿ ಬೆಳೆಸಲು ಮತ್ತು ಅದ್ಭುತ ಪ್ರತಿಭೆ ಮತ್ತು ಶಕ್ತಿಯಿಂದ ತುಂಬಿದ ಲೀಗ್ ಅನ್ನು ಅಳವಡಿಸಿಕೊಳ್ಳಲು ಒಂದು ಅವಕಾಶ' ಎಂದಿದ್ದಾರೆ.