"ಈ ಸಲ ಕಪ್ ನಮ್ದೇ"..! RCB ನಾಯಕ ಫಾಫ್ ಡು ಪ್ಲೆಸಿಸ್‌ಗೆ ಕತಾರ್‌ನಲ್ಲಿ ಕನ್ನಡಿಗನ ಸಪ್ರೈಸ್ ಗಿಫ್ಟ್..!
ಬೆಂಗಳೂರು: 2008ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ 16 ಆವೃತ್ತಿಗಳು ಕಳೆದಿವೆ. ಆದರೆ ಚೊಚ್ಚಲ ಆವತ್ತಿಯಿಂದಲೂ ಐಪಿಎಲ್ ಆಡುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್‌ಗೆ ಇದುವರೆಗೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ಕತಾರ್‌ನಲ್ಲಿರುವ ಕನ್ನಡಿಗ ಅಭಿಮಾನಿಯೊಬ್ಬ ಆರ್‌ಸಿಬಿ ನಾಯಕನಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾನೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್‌ಗೆ ಕತಾರ್‌ನ ದೋಹಾದಲ್ಲಿರುವ ರೆಸ್ಟೋರೆಂಟ್‌ನಲ್ಲಿ ಕನ್ನಡಿಗ ಆರ್‌ಸಿಬಿ ಅಭಿಮಾನಿಯೊಬ್ಬರು ಸಪ್ರೈಸ್ ಗಿಫ್ಟ್ ನೀಡುವ ಮೂಲಕ, ಕಪ್ ಗೆಲ್ಲಲು ಮತ್ತೊಮ್ಮೆ ಪ್ರೇರಣೆ ನೀಡಿದ್ದಾರೆ.
ಹೌದು, ದೋಹಾದ ರೆಸ್ಟೋರೆಂಟ್‌ನಲ್ಲಿರುವ ಸಿಬ್ಬಂದಿ ಆರ್‌ಸಿಬಿ ಅಭಿಮಾನಿಯಾಗಿದ್ದು, ಒಂದು ಪ್ಲೇಟ್ ಮೇಲೆ "ಹಲೋ ಫಾಫ್, ಈ ಸಲ ಕಪ್ ನಮ್ದೇ (ಆರ್‌ಸಿಬಿ) ಎಂದು ಇ ಎಂ ಶೆರಿಫ್ ಎನ್ನುವ ಅಭಿಮಾನಿ ಸಪ್ರೈಸ್ ಗಿಫ್ಟ್ ನೀಡಿದ್ದಾರೆ.
ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಸೆಪ್ಟೆಂಬರ್ 01ರಂದು ಸ್ವತಃ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಈ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Faf Du Plessis
ಕಳೆದ ಕೆಲ ವರ್ಷಗಳಿಂದ ಆರ್‌ಸಿಬಿ ತಂಡದ ಭಾಗವಾಗಿ ತಂಡವನ್ನು ಮುನ್ನಡೆಸುತ್ತಿರುವ ಫಾಫ್ ಡು ಪ್ಲೆಸಿಸ್‌ಗೆ, ದೋಹಾದ ಹೋಟೆಲ್ ಸಿಬ್ಬಂದಿಗಳು ಸೇರಿ ವಿನೂತನವಾದ ಸಪ್ರೈಸ್ ನೀಡಿದ್ದಾರೆ. ಕತಾರ್‌ನ ದೋಹಾದಲ್ಲಿ ಡಿನ್ನರ್ ಮುಗಿದ ಬಳಿಕ ಸಿಕ್ಕ ಸಪ್ರೈಸ್ ಇದು ಎಂದು ಫಾಫ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ಮೂಲದ ಅನುಭವಿ ಬಲಗೈ ಬ್ಯಾಟರ್ ಫಾಫ್ ಡು ಪ್ಲೆಸಿಸ್, ಕಳೆದೆರಡು ಐಪಿಎಲ್ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದು, ಇದುವರೆಗೂ ಆರ್‌ಸಿಬಿ ಪರ 1,198 ರನ್ ಸಿಡಿಸಿದ್ದಾರೆ.
2022ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಮೂರನೇ ಸ್ಥಾನ ಪಡೆದಿತ್ತು. ಇನ್ನು 2023ರ ಐಪಿಎಲ್‌ನಲ್ಲಿ ಬೆಂಗಳೂರು ತಂಡವು ಕೂದಲೆಳೆ ಅಂತರದಲ್ಲಿ ಪ್ಲೇ ಆಫ್‌ಗೇರುವ ಅವಕಾಶವನ್ನು ಕೈಚೆಲ್ಲಿತ್ತು.
ಹೀಗಿದ್ದೂ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ಅತ್ಯಂತ ಸ್ಥಿರ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ಟೂರ್ನಿಯುದ್ದಕ್ಕೂ ಆರೆಂಜ್ ಕ್ಯಾಪ್ ಹೊಂದಿದ್ದ ಫಾಫ್, ಕೊನೆಗೆ ಆರೆಂಜ್ ಕ್ಯಾಪ್ ಶುಭ್‌ಮನ್ ಗಿಲ್ ಪಾಲಾಗಿತ್ತು.
ಈ ಸಲ ಕಪ್ ನಮ್ದೇ ಎನ್ನುವುದು ಒಂದು ರೀತಿ ಆರ್‌ಸಿಬಿ ಅಭಿಮಾನಿಗಳ ಪಾಲಿನ ಅಧಿಕೃತ ಧ್ಯೇಯವಾಕ್ಯವಾಗಿದೆ. ಆರ್‌ಸಿಬಿ ಸೋಲಲಿ ಗೆಲ್ಲಲಿ, ತಂಡವನ್ನು ಬೆಂಬಲಿಸುವ ಅಭಿಮಾನಿಗಳ ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ.
ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಶೇನ್ ವಾಟ್ಸನ್, ಯುವರಾಜ್ ಸಿಂಗ್ ಅವರಂತಹ ಬಲಾಢ್ಯ ಟಿ20 ಸ್ಪೆಷಲಿಸ್ಟ್ ಆಟಗಾರರು ಆರ್‌ಸಿಬಿ ಪರ ಆಡಿದ್ದರೂ ಸಹಾ ಕಪ್ ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ.
ಪ್ರತಿ ಬಾರಿಯು ಈ ಸಲ ಕಪ್ ನಮ್ದೇ ಎಂದು ಅಭಿಮಾನಿಗಳು ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಮುಂದಿನ ಸೀಸನ್‌ನಲ್ಲಾದರೂ ಆರ್‌ಸಿಬಿ ಐಪಿಎಲ್ ಕಪ್ ಗೆದ್ದು, ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.