ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ, ಪಿಚ್ ಕುರಿತು ಕೋಚ್ ಗೌತಮ್ ಗಂಭೀರ್ ನೀಡಿದ ಹೇಳಿಕೆಯಿಂದ ಬಿಸಿಸಿಐ ಅಸಮಾಧಾನಗೊಂಡಿದೆ. ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದಿದ್ದರೂ, ಮುಂಬರುವ ಟಿ20 ವಿಶ್ವಕಪ್‌ನಲ್ಲಿ ತಂಡದ ಕಳಪೆ ಪ್ರದರ್ಶನ ಮುಂದುವರೆದರೆ ಗಂಭೀರ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆ.
ಮುಂಬೈ: ದಕ್ಷಿಣ ಆಫ್ರಿಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ತವರಿನಲ್ಲಿಯೇ ವೈಟ್‌ವಾಷ್ ಮುಖಭಂಗ ಅನುಭವಿಸಿದೆ. ಇದರ ನಡುವೆ ಮೊದಲ ಟೆಸ್ಟ್ ಮುಕ್ತಾಯದ ಬಳಿಕ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಆಡಿದ ಕೆಲವು ಮಾತುಗಳು ಬಿಸಿಸಿಐ ಕೆರಳಿ ಕೆಂಡವಾಗುವಂತೆ ಮಾಡಿದೆ.
ಹೌದು, ದಕ್ಷಿಣ ಆಫ್ರಿಕಾ ವಿರುದ್ಧದ ಕೋಲ್ಕತ್ತಾ ಟೆಸ್ಟ್ ಸೋಲಿನ ನಂತರ ಪಿಚ್ ಬಗ್ಗೆ ಭಾರತೀಯ ಕೋಚ್ ಗೌತಮ್ ಗಂಭೀರ್ ನೀಡಿದ ಹೇಳಿಕೆಯಿಂದ ಬಿಸಿಸಿಐಗೆ ಅಸಮಾಧಾನವಾಗಿದೆ. ಎರಡೂವರೆ ದಿನಗಳಲ್ಲಿ ಮುಗಿದ ಕೋಲ್ಕತಾ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 124 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, 93 ರನ್‌ಗಳಿಗೆ ಆಲೌಟ್ ಆಗಿ 30 ರನ್‌ಗಳ ಆಘಾತಕಾರಿ ಸೋಲು ಕಂಡಿತ್ತು. ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾದ ಪಿಚ್‌ನಲ್ಲಿ ದಕ್ಷಿಣ ಆಫ್ರಿಕಾದ ಸಿಮನ್ ಹಾರ್ಮರ್ ಮತ್ತು ಕೇಶವ್ ಮಹಾರಾಜ್ ಸ್ಪಿನ್‌ಗೆ ಭಾರತ ತತ್ತರಿಸಿತ್ತು. ಆದರೆ, ಪಂದ್ಯದ ನಂತರ ಕೋಲ್ಕತಾದಲ್ಲಿ ನಾವು ಬಯಸಿದ ವಿಕೆಟ್ ಸಿಕ್ಕಿದೆ, ಸೋಲಿಗೆ ಪಿಚ್ ಅನ್ನು ದೂಷಿಸುವುದಿಲ್ಲ ಎಂದು ಗಂಭೀರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಬಿಸಿಸಿಐ ಕೆರಳಿಸುವಂತೆ ಗಂಭೀರ್ ಹೇಳಿಕೆ
ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್‌ನ ನಿರ್ದೇಶನದಂತೆ ಪಿಚ್ ಸಿದ್ಧಪಡಿಸಲಾಗಿದೆ ಎಂದು ಚೀಫ್ ಕ್ಯುರೇಟರ್ ಸ್ಪಷ್ಟಪಡಿಸಿದ ನಂತರ, ಗಂಭೀರ್ ಪಿಚ್‌ನಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದರು. ಕ್ಯುರೇಟರ್ ಕೋಲ್ಕತಾದಲ್ಲಿ ಉತ್ತಮ ಪಿಚ್ ಸಿದ್ಧಪಡಿಸಿದ್ದಾರೆ, ಆದರೆ ಉತ್ತಮ ಪ್ರದರ್ಶನ ನೀಡದಿದ್ದರೆ ಹೀಗೆಲ್ಲಾ ಆಗುತ್ತದೆ ಎಂದು ಗಂಭೀರ್ ಹೇಳಿದ್ದರು. ಗಂಭೀರ್ ಅವರ ಈ ಹೇಳಿಕೆಯಿಂದ ಬಿಸಿಸಿಐಗೆ ತೀವ್ರ ಅಸಮಾಧಾನವಿದ್ದರೂ, ಸದ್ಯಕ್ಕೆ ಗಂಭೀರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಆದರೆ, ಎರಡು ತಿಂಗಳ ನಂತರ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿದರೆ, ಗಂಭೀರ್ ಅವರನ್ನು ವಜಾಗೊಳಿಸುವುದು ಸೇರಿದಂತೆ ಕಠಿಣ ಕ್ರಮಗಳ ಬಗ್ಗೆ ಬಿಸಿಸಿಐ ಆಲೋಚಿಸಲಿದೆ. ಸದ್ಯಕ್ಕೆ ಕೋಚ್ ಹುದ್ದೆಗೆ ಬೇರೆ ಯಾರನ್ನೂ ಪರಿಗಣಿಸಲು ಸಾಧ್ಯವಿಲ್ಲದ ಕಾರಣ, ಗಂಭೀರ್ ಅವರನ್ನೇ ಮುಂದುವರಿಸಲು ಬಿಸಿಸಿಐ ನಿರ್ಧರಿಸಿದೆ. ಟಿ20 ವಿಶ್ವಕಪ್‌ಗೆ ಇನ್ನು ಕೇವಲ ಎರಡು ತಿಂಗಳು ಮಾತ್ರ ಬಾಕಿ ಇರುವುದನ್ನು ಬಿಸಿಸಿಐ ಗಣನೆಗೆ ತೆಗೆದುಕೊಂಡಿದೆ.
ಆದರೆ, ಟೆಸ್ಟ್‌ನಲ್ಲಿ ಭಾರತದ ಪ್ರದರ್ಶನ ಕುಸಿತದ ಬಗ್ಗೆ ಬಿಸಿಸಿಐ, ಕೋಚ್ ಗೌತಮ್ ಗಂಭೀರ್ ಮತ್ತು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರೊಂದಿಗೆ ಚರ್ಚಿಸಲಿದೆ, ಆದರೆ ತಕ್ಷಣ ಯಾವುದೇ ಕ್ರಮ ಇರುವುದಿಲ್ಲ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿಗಳು ಹೇಳಿವೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಲಿದೆ.
ಗಂಭೀರ್ ಮಾರ್ಗದರ್ಶನದಲ್ಲಿ ಭಾರತ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು!
ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ತವರಿನಲ್ಲಿ ಆಡಿದ 9 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇದಕ್ಕಿಂತ ಮುಖ್ಯವಾಗಿ ನ್ಯೂಜಿಲೆಂಡ್ ಎದುರು 3-0 ಹಾಗೂ ದಕ್ಷಿಣ ಆಫ್ರಿಕಾ ಎದುರು 2-0 ಅಂತರದಲ್ಲಿ ವೈಟ್‌ವಾಷ್ ಅನುಭವಿಸುವ ಮೂಲಕ ಭಾರತ ಟೆಸ್ಟ್ ತಂಡವು ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದಾರೆ ಎನ್ನುವ ಆರೋಪ ಗಂಭೀರ್ ಮೇಲಿದೆ.


