ಆರ್‌ಸಿಬಿ ತೊರೆದು ಈ ತಂಡದ ನಾಯಕರಾಗ್ತಾರಾ ಫಾಫ್ ಡು ಪ್ಲೆಸಿಸ್?
ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಕೊಂಡೊಯ್ದ ಫಾಫ್ ಡು ಪ್ಲೆಸಿಸ್, ಐಪಿಎಲ್ 2025ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಬಹುದು ಎಂಬ ಸುದ್ದಿ ಹರಿದಾಡುತ್ತಿದೆ.
ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್‌ನ ತಂಡವಾದ ಸೇಂಟ್ ಲೂಸಿಯಾ ಕಿಂಗ್ಸ್ 11 ವರ್ಷಗಳ ಬಳಿಕ ಮೊದಲ ಬಾರಿಗೆ ಟ್ರೋಫಿ ಗೆದ್ದಿದೆ. ಪ್ರೀತಿ ಜಿಂಟಾ ಅವರ ಸೇಂಟ್ ಲೂಸಿಯಾ ಕಿಂಗ್ಸ್ ತಂಡವನ್ನು ಫಾಫ್ ಡು ಪ್ಲೆಸಿಸ್ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೆ ಕೊಂಡೊಯ್ದರು. ಆದರೆ, ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕರಾಗಿ ಫಾಫ್ ಇನ್ನೂ ಟ್ರೋಫಿ ಗೆದ್ದಿಲ್ಲ. ಈಗಾಗಲೇ ಆರ್‌ಸಿಬಿಯಿಂದ ಫಾಫ್ ಡು ಪ್ಲೆಸಿಸ್‌ರನ್ನು ಬಿಡುಗಡೆ ಮಾಡುವ ಸುದ್ದಿ ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರು ಪಂಜಾಬ್ ಕಿಂಗ್ಸ್ ತಂಡ ಸೇರಬಹುದು ಎನ್ನಲಾಗುತ್ತಿದೆ.
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದಲ್ಲಿ ನಡೆದ ಎಸ್‌ಎ20 ಲೀಗ್‌ನಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಆ ಟೂರ್ನಿಯಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ನಾಯಕರಾಗಿದ್ದ ಪ್ಯಾಟ್ ಕಮಿನ್ಸ್ ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಕೊಂಡೊಯ್ದರು. ಇದರೊಂದಿಗೆ 2023ರಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಎರಡನೇ ಬಾರಿಗೆ ಟ್ರೋಫಿ ಗೆದ್ದಿತು. ಇದಾದ ಬಳಿಕ ದುಬೈನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್‌ಗಿಂತ ಮೊದಲು ಪ್ಯಾಟ್ ಕಮಿನ್ಸ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ 20.50 ಕೋಟಿ ರೂ.ಗಳಿಗೆ ಖರೀದಿಸಿತು. ಆದರೆ, ಬಳಿಕ ಕೋಲ್ಕತಾ ನೈಟ್ ರೈಡರ್ಸ್ ಮಿಚೆಲ್ ಸ್ಟಾರ್ಕ್‌ರನ್ನು 21.75 ಕೋಟಿ ರೂ.ಗಳಿಗೆ ಖರೀದಿಸಿ ಹೊಸ ದಾಖಲೆ ಬರೆದಿತು.
ಇದಲ್ಲದೆ, ಪ್ಯಾಟ್ ಕಮಿನ್ಸ್ ಅವರನ್ನು 2024ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರನ್ನಾಗಿ ಘೋಷಿಸಲಾಯಿತು. ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ಮೂರು ಬಾರಿ 260ಕ್ಕೂ ಹೆಚ್ಚು ರನ್ ಗಳಿಸಿ ಹೊಸ ದಾಖಲೆ ಬರೆದಿದೆ. ಆರ್‌ಸಿಬಿ, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕ್ರಮವಾಗಿ 287/3, 277/3 ಮತ್ತು 266/7 ರನ್ ಗಳಿಸಿತು. ಇದಕ್ಕೂ ಮುನ್ನ ಹೈದರಾಬಾದ್‌ನ ಅತ್ಯಧಿಕ ಸ್ಕೋರ್ 231 ರನ್‌ಗಳು. ಇದನ್ನು 2019ರಲ್ಲಿ ಆರ್‌ಸಿಬಿ ವಿರುದ್ಧ ಗಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡಕ್ಕೆ ಮೊದಲ ಬಾರಿಗೆ ಟ್ರೋಫಿ ಗೆದ್ದುಕೊಟ್ಟ ಫಾಫ್ ಡು ಪ್ಲೆಸಿಸ್ ಅವರನ್ನು ಪಂಜಾಬ್ ಕಿಂಗ್ಸ್ 2025ರ ಮೆಗಾ ಹರಾಜಿನಲ್ಲಿ ಖರೀದಿಸಬಹುದು ಎನ್ನಲಾಗುತ್ತಿದೆ.
ಒಂದು ವೇಳೆ ಆರ್‌ಸಿಬಿ ಫಾಫ್ ಡು ಪ್ಲೆಸಿಸ್‌ರನ್ನು ಬಿಡುಗಡೆ ಮಾಡಿದರೆ, ಪಂಜಾಬ್ ಕಿಂಗ್ಸ್ ಅವರನ್ನು ಖರೀದಿಸಿ ನಾಯಕತ್ವ ನೀಡಬಹುದು. ಏಕೆಂದರೆ, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ತಂಡವಾದ ಸೇಂಟ್ ಲೂಸಿಯಾ ಕಿಂಗ್ಸ್‌ಗೆ ಮೊದಲ ಬಾರಿಗೆ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಅವರ ಮೇಲೆ ನಂಬಿಕೆ ಇಟ್ಟು ಪಂಜಾಬ್ ಕಿಂಗ್ಸ್ 18 ಕೋಟಿ ರೂ.ಗಳವರೆಗೆ ಖರ್ಚು ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದು. ಅದೇ ರೀತಿ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರನ್ನು ಬಿಡುಗಡೆ ಮಾಡಿದರೆ, ಆರ್‌ಸಿಬಿ ಅವರನ್ನು ಖರೀದಿಸಿ ನಾಯಕತ್ವ ನೀಡಬಹುದು.
ಸಿಎಸ್‌ಕೆಯಲ್ಲಿ ಋತುರಾಜ್ ಗಾಯಕ್ವಾಡ್, ಮುಂಬೈ ಇಂಡಿಯನ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ, ಲಕ್ನೋದಲ್ಲಿ ಕೆಎಲ್ ರಾಹುಲ್, ಡೆಲ್ಲಿಯಲ್ಲಿ ರಿಷಭ್ ಪಂತ್, ಕೆಕೆಆರ್‌ನಲ್ಲಿ ಶ್ರೇಯಸ್ ಅಯ್ಯರ್, ಗುಜರಾತ್‌ನಲ್ಲಿ ಶುಭ್‌ಮನ್ ಗಿಲ್ ನಾಯಕರಾಗಿದ್ದಾರೆ. ಅದರ ಜೊತೆಗೆ ಹೈದರಾಬಾದ್‌ನಲ್ಲಿ ಪ್ಯಾಟ್ ಕಮಿನ್ಸ್ ನಾಯಕರಾಗಿದ್ದಾರೆ. ಹೀಗಾಗಿ, ಈ ತಂಡಗಳನ್ನು ಹೊರತುಪಡಿಸಿ ಡೆಲ್ಲಿ ಕ್ಯಾಪಿಟಲ್ಸ್, ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಮಾತ್ರ 17 ವರ್ಷಗಳಿಂದ ಟ್ರೋಫಿಗಾಗಿ ಹೋರಾಡುತ್ತಿವೆ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಈ ಮೂರು ತಂಡಗಳಲ್ಲಿ ಒಂದು ತಂಡ ಟ್ರೋಫಿ ಗೆದ್ದರೆ ಪ್ರಶಸ್ತಿ ಬರ ನೀಗಿದಂತಾಗುತ್ತದೆ.
ಐಪಿಎಲ್ ಕ್ರಿಕೆಟ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಫಾಫ್ ಡು ಪ್ಲೆಸಿಸ್ 145 ಪಂದ್ಯಗಳಲ್ಲಿ 37 ಅರ್ಧಶತಕಗಳೊಂದಿಗೆ 4571 ರನ್ ಗಳಿಸಿದ್ದಾರೆ. 2022ರಿಂದ ಆರ್‌ಸಿಬಿ ತಂಡದಲ್ಲಿರುವ ಫಾಫ್ ಡು ಪ್ಲೆಸಿಸ್ 7 ಕೋಟಿ ರೂ.ಗಳಿಗೆ ಐಪಿಎಲ್ ಆಡುತ್ತಿದ್ದಾರೆ. 2025ರ ಮೆಗಾ ಹರಾಜಿನ ಮೊದಲು ಆರ್‌ಸಿಬಿ ಅವರನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. 2024ರ ಐಪಿಎಲ್‌ನಲ್ಲಿ 15 ಪಂದ್ಯಗಳಲ್ಲಿ 4 ಅರ್ಧಶತಕಗಳೊಂದಿಗೆ 438 ರನ್ ಗಳಿಸಿದ್ದಾರೆ. ಅವರ ಅತ್ಯಧಿಕ ಸ್ಕೋರ್ 64 ರನ್‌ಗಳು.