ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಪಾಕಿಸ್ತಾನ ಮುಖಭಂಗ ಅನುಭವಿಸಲಿದೆ ಎಂದು ಮಾಜಿ ಪಾಕಿಸ್ತಾನ ಬ್ಯಾಟ್ಸ್‌ಮನ್ ಬಾಸಿತ್ ಅಲಿ ಆತಂಕ ವ್ಯಕ್ತಪಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಸೋಲಿನ ನಂತರ ಪಾಕಿಸ್ತಾನದ ಕಳಪೆ ಪ್ರದರ್ಶನದ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇಸ್ಲಾಮಾಬಾದ್: ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮುನ್ನ ಮಾಜಿ ಪಾಕಿಸ್ತಾನ ಬ್ಯಾಟ್ಸ್‌ಮನ್ ಬಾಸಿತ್ ಅಲಿ ಆತಂಕ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 14 ರಂದು ಏಷ್ಯಾಕಪ್ ಟೂರ್ನಿಯ ಹೈವೋಲ್ಟೇಜ್ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ನಂತರ, ಸೆಪ್ಟೆಂಬರ್ 21 ರಂದು ಸೂಪರ್ 4 ಹಂತದಲ್ಲಿ ಮತ್ತೊಮ್ಮೆ ಉಭಯ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯಿದೆ. ಈ ಪಂದ್ಯಗಳಲ್ಲಿ ಭಾರತ ಎದರು ಪಾಕಿಸ್ತಾನ ಮುಖಭಂಗ ಅನುಭವಿಸುತ್ತದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಬಾಸಿತ್ ಅಲಿ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಪಾಕಿಸ್ತಾನ 2-1 ಅಂತರದಲ್ಲಿ ಏಕದಿನ ಸರಣಿಯನ್ನು ಸೋತಿತ್ತು. ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಬರೋಬ್ಬರಿ 34 ವರ್ಷಗಳ ನಂತರ ವಿಂಡೀಸ್ ವಿರುದ್ಧ ಏಕದಿನ ಸರಣಿ ಸೋತು ಮುಖಭಂಗ ಅನುಭವಿಸಿತ್ತು.
'ಲೆಜೆಂಡ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಾಡಿದಂತೆ, ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಭಾರತ ನಿರಾಕರಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಊಹಿಸಲೂ ಸಾಧ್ಯವಾಗದಷ್ಟು ಕೆಟ್ಟದಾಗಿ ಅವರು ನಮ್ಮನ್ನು ಸೋಲಿಸುತ್ತಾರೆ' ಎಂದು ಬಾಸಿತ್ ಅಲಿ ದಿ ಗೇಮ್ ಪ್ಲಾನ್ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಆತಂಕ ಹೊರಹಾಕಿದ್ದಾರೆ.
ಎರಡೂ ತಂಡಗಳು ಇಲ್ಲಿಯವರೆಗೆ ಆಡಿರುವ 13 ಪಂದ್ಯಗಳಲ್ಲಿ ಭಾರತ ಹತ್ತು ಪಂದ್ಯಗಳಲ್ಲಿ ಗೆದ್ದಿದೆ. 2024 ರ ಟಿ20 ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಭಾರತ ಎದುರು ಕೇವಲ 120 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಪಾಕಿಸ್ತಾನ ವಿಫಲವಾಯಿತು. ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮಾರಕ ದಾಳಿಯ ನೆರವಿನಿಂದ ಪಾಕ್ ಎದುರು ಟೀಂ ಇಂಡಿಯಾ 6 ರನ್ ರೋಚಕ ಜಯ ಸಾಧಿಸಿತು. ಯುಎಸ್‌ಎ, ಜಿಂಬಾಬ್ವೆ, ಅಫ್ಘಾನಿಸ್ತಾನ, ಬಾಂಗ್ಲಾದೇಶದಂತಹ ಕೆಳ ಶ್ರೇಯಾಂಕದ ತಂಡಗಳ ವಿರುದ್ಧ ಪಾಕಿಸ್ತಾನ ಇತ್ತೀಚೆಗೆ ಹಲವಾರು ಮುಖಭಂಗಗಳನ್ನು ಅನುಭವಿಸಿದೆ. ವಾಸ್ತವವಾಗಿ ಪಾಕಿಸ್ತಾನದ ಪ್ರದರ್ಶನ ಕುಸಿಯುತ್ತಿದೆ. ಏಷ್ಯಾಕಪ್‌ನಲ್ಲಿಯೂ ಪಾಕಿಸ್ತಾನಕ್ಕೆ ಇದೇ ರೀತಿಯ ಪರಿಸ್ಥಿತಿ ಎದುರಾಗಲಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾಕಪ್‌ನ ಹಾಲಿ ಚಾಂಪಿಯನ್ ಭಾರತ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಹತ್ಯೆಯ ನಂತರ ಭಾರತ ಏಷ್ಯಾಕಪ್‌ನಲ್ಲಿ ಭಾಗವಹಿಸುವುದಿಲ್ಲ ಅಥವಾ ಆತಿಥ್ಯ ವಹಿಸುವುದಿಲ್ಲ ಎಂದು ಹೇಳಿತ್ತು. ನಂತರ ಬಿಸಿಸಿಐ ತನ್ನ ನಿಲುವನ್ನು ಬದಲಾಯಿಸಿತು. ಇದರೊಂದಿಗೆ ಟೂರ್ನಿಯನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಭಾರತ ಏಷ್ಯಾಕಪ್‌ನಿಂದ ಹಿಂದೆ ಸರಿದಿದ್ದರೆ ಟೂರ್ನಿ ಆಯೋಜನೆಯಾಗುವುದೇ ಅನುಮಾನ ಎನ್ನುವಂತಾಗುತ್ತಿತ್ತು. ಟೂರ್ನಿಯ ಆರ್ಥಿಕ ಬೆಂಬಲದ ದೊಡ್ಡ ಭಾಗವು ಭಾರತೀಯ ಪ್ರಾಯೋಜಕರಿಂದ ಬರುತ್ತದೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲದೇಶ ಸೇರಿದಂತೆ ಏಷ್ಯಾದ 8 ಕ್ರಿಕೆಟ್ ತಂಡಗಳು ಏಷ್ಯಾಕಪ್ ಟೂರ್ನಿಗಾಗಿ ಹೋರಾಡಲಿವೆ.
ಏಷ್ಯಾಕಪ್ ಟೂರ್ನಿಗೆ ಭಾರತದ ಸಂಭಾವ್ಯ ತಂಡ:
ಬ್ಯಾಟರ್‌ಗಳು: ಸೂರ್ಯಕುಮಾರ್ ಯಾದವ್, ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ
ವಿಕೆಟ್ ಕೀಪರ್: ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸ್ಥಾನ ಪಡೆಯಲಿದ್ದು, ಎರಡನೇ ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಜಿತೇಶ್ ಶರ್ಮಾ ಹಾಗೂ ಧ್ರುವ್ ಜುರೇಲ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಆಲ್ರೌಂಡರ್: ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್.
ಬೌಲಿಂಗ್ ವಿಭಾಗ: ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ ಹಾಗೂ ಪ್ರಸಿದ್ದ್ ಕೃಷ್ಣ.
