ತಮ್ಮ ಆಕರ್ಷಕ ಸಿಕ್ಸರ್‌ಗಳ ಮೂಲಕವೇ ಹೆಸರುವಾಸಿಯಾಗಿರುವ ರೋಹಿತ್ ಶರ್ಮ, ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದಾರೆ. ಇನ್ನಿಂಗ್ಸ್‌ನಲ್ಲಿ ಅವರು ಬಾರಿಸಿದ ಭರ್ಜರಿ ಸಿಕ್ಸರ್‌ವೊಂದು ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಬಾಲಕಿಯ ತಲೆಗೆ ಬಿದ್ದ ಘಟನೆ ನಡೆದಿದೆ.
ಲಂಡನ್ (ಜುಲೈ12): ಅಬ್ಬರದ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ಬೌಲಿಂಗ್ ವಿಭಾಗವನ್ನು ಬೆಂಡೆತ್ತಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ, ಇನ್ನಿಂಗ್ಸ್‌ನ ವೇಳೆ ಭರ್ಜರಿ ಸಿಕ್ಸರ್ ಸಿಡಿಸಿದರು. ಅವರು ಬಾರಿಸಿದ ಈ ಸಿಕ್ಸರ್‌ವೊಂದು ಸ್ಟ್ಯಾಂಡ್‌ನಲ್ಲಿ ಕುಳಿತ ಬಾಲಕಿಯ ಬೆನ್ನಿಗೆ ಬಿದ್ದಿತ್ತು. ಪುಲ್ ಶಾಟ್ ಮೂಲಕ ರೋಹಿತ್ ಬಾರಿಸಿದ ಆಕರ್ಷಕ ಸಿಕ್ಸರ್ ಬಿರುಸಾಗಿ ಸಾಗಿ ಬಾಲಕಿಗೆ ಬಡಿದಿತ್ತು. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದರಿಂದ ಪಂದ್ಯವನ್ನೂ ಸ್ವಲ್ಪ ಹೊತ್ತು ನಿಲ್ಲಿಸಲಾಗಿತ್ತು. ಈ ವೇಳೆ, ಇಂಗ್ಲೆಂಡ್ ತಂಡ ತಮ್ಮ ಟೀಮ್ ಡಾಕ್ಟರ್‌ಅನ್ನು ಬಾಲಕಿಯಿದ್ದಲ್ಲಿಗೆ ಕಳಿಸುವ ಮೂಲಕ ಜನರಿಂದ ಮೆಚ್ಚುಗೆಗೆ ಪಾತ್ರವಾಯಿತು. ಟೀಮ್ ಡಾಕ್ಟರ್ ಬಾಲಕಿಯನ್ನು ಪರಿಶೀಲಿಸಿದ್ದಲ್ಲದೆ, ಆಕೆ ಕ್ಷೇಮವಾಗಿದ್ದಾಳೆ ಎನ್ನುವ ಮಾಹಿತಿಯನ್ನೂ ನೀಡಿದರು. ಪಂದ್ಯದ ಐದನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ಡೇವಿಡ್ ವಿಲ್ಲಿ ಎಸೆದ ಎಸೆತವನ್ನು ಪುಲ್ ಶಾಟ್‌ನಲ್ಲಿ ರೋಹಿತ್ ಶರ್ಮ ಸಿಕ್ಸರ್‌ಗೆ ಅಟ್ಟಿದ್ದರು. ಅಂಪೈರ್‌ಗಳು ಸಿಕ್ಸರ್ ಎಂದು ಹೇಳುವ ವೇಳೆ, ಕ್ಯಾಮೆರಾ ಕೂಡ ಸಿಕ್ಸರ್ ಸಾಗಿದ ಹಾದಿಯಲ್ಲೇ ಸಾಗಿತು. ಅಲ್ಲಿ ಒಬ್ಬ ವ್ಯಕ್ತಿ ಚಿಕ್ಕ ಹುಡುಗಿಯ ತಲೆ ಹಾಗೂ ತೋಳುಗಳನ್ನು ಉಜ್ಜುತ್ತಾ ಸಮಾಧಾನ ಮಾಡುತ್ತಿದ್ದ. ಆಕೆಯ ಬೆನ್ನು ಕೂಡ ಸವರುತ್ತಿದ್ದ. ಚೆಂಡು ಆಕೆಯ ಬೆನ್ನು ಹಾಗೂ ತೋಳುಗಳಿಗೆ ತಾಕಿದ್ದರಿಂದ ಅಳುತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಲಾಗಿತ್ತು.
ಪಂದ್ಯವಾಡುತ್ತಿದ್ದ ಕ್ರಿಕೆಟಿಗರು ಎಲ್ಲವೂ ಸರಿಯಾಗಿದೆಯೇ ಎಂದು ಪರಿಶೀಲಿಸಲು ಸ್ವಲ್ಪ ಸಮಯ ತೆಗೆದುಕೊಂಡಾಗ, ಕೆಲವು ಸೆಕೆಂಡುಗಳ ಕಾಲ ಆಟವನ್ನು ನಿಲ್ಲಿಸಲಾಗಿತ್ತು. ಪಂದ್ಯದ ವಿಶ್ಲೇಷಕರಾಗಿದ್ದ ರವಿಶಾಸ್ತ್ರಿ ಮತ್ತು ಅಥರ್ಟನ್ ಅವರು ಚೆಂಡು ಗುಂಪಿನಲ್ಲಿ ಯಾರೋ ಒಬ್ಬರಿಗೆ ಬಡಿದಿದೆ ಎಂದು ದೃಢಪಡಿಸಿದರು. "ರೋಹಿತ್ ಶರ್ಮಾ (Rohit Sharma) ಅವರ ಈ ಸಿಕ್ಸರ್, ಪ್ರೇಕ್ಷಕರ ಗುಂಪಿನಲ್ಲಿರುವ (Six Hit to Kid) ಯಾರಿಗಾದರೂ ಬಡಿದಿರುವ ಸಾಧ್ಯತೆ ಕಾಣುತ್ತಿದೆ. ಬಹುಶಃ ಯಾರಿಗೂ ಗಾಯವಾಗಿಲ್ಲ ಎನ್ನುವ ರೀತಿಯೂ ತೋರುತ್ತಿದೆ' ಎಂದು ಅಥರ್ಟನ್ ಹೇಳಿದರು. ಅದಕ್ಕೆ ಉತ್ತರಿಸುತ್ತಾ ರವಿಶಾಸ್ತ್ರಿ, ಹೌದು ಅದೇ ರೀತಿಯಲ್ಲೇ ಕಾಣುತ್ತಿದೆ. ರೋಹಿತ್ ಶರ್ಮ ಕೂಡ ಚೆಂಡು ಬಿದ್ದ ಪ್ರದೇಶದ ಕಡೆಗೆ ನೋಡುತ್ತಿದ್ದಾರೆ. ಚೆಂಡು ಪ್ರೇಕ್ಷಕರಲ್ಲಿ ಒಬ್ಬರಿಗೆ ಬಡಿದಿದೆ ಎನ್ನುವ ಸೂಚನೆ ಅವರಿಗೂ ಸಿಕ್ಕಿದೆ' ಎಂದು ಹೇಳಿದ್ದರು.
ಇದನ್ನೂ ಓದಿ: Eng vs Ind: ಬುಮ್ರಾ ಬೆಂಕಿದಾಳಿಗೆ ಬೆಂಡಾದ ಇಂಗ್ಲೆಂಡ್!
ನಂತರ ಕ್ಯಾಮರಾ ಮತ್ತೊಮ್ಮೆ ಅದೇ ಗುಂಪಿನ ಕಡೆಗೆ ತಿರುಗಿತು, ಅಲ್ಲಿ ವ್ಯಕ್ತಿಯೊಬ್ಬ ಪುಟ್ಟ ಬಾಲಕಿಗೆ (Small Kid) ಸಮಾಧಾನಪಡಿಸುವುದನ್ನು ಮುಂದುವರಿಸಿದ್ದರು. ಇನ್ನೊಬ್ಬ ವ್ಯಕ್ತಿ ಕೂಡ ಈ ವೇಳೆ ಆಕೆಯನ್ನು ಪರೀಕ್ಷಿಸಿದ ದೃಶ್ಯ ನಡೆಯಿತು. ಆ ಬಳಿಕ ಇಂಗ್ಲೆಂಡ್ ತಂಡದ ಫಿಸಿಯೋ (England Team physio), ಬೌಂಡರಿಲೈನ್‌ನ ತುದಿಯಿಂದ ಬಾಲಕಿ ಇದ್ದ ಕಡೆಗೆ ಧಾವಿಸಿ ಆಕೆಯನ್ನು ಪರಿಶೀಲಿಸುವ ಮೂಲಕ ಆಕೆ, ಕ್ಷೇಮವಾಗಿದ್ದಾಳೆ ಎನ್ನುವ ಮಾಹಿತಿ ನೀಡಿದರು. ಅ ಬಳಿಕ ಪಂದ್ಯ ಮತ್ತೆ ಆರಂಭವಾಯಿತು.
ಇದನ್ನೂ ಓದಿ: ಮುಂದಿನ 3 ತಿಂಗಳೊಳಗಾಗಿ ಕೆ ಎಲ್ ರಾಹುಲ್ - ಆತಿಯಾ ಶೆಟ್ಟಿ ಮದುವೆ ಫಿಕ್ಸ್..?
ಜಸ್ ಪ್ರೀತ್ ಬುಮ್ರಾ (Bumrah) ಅವರ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಕೇವಲ 110 ರನ್‌ಗೆ ಆಲೌಟ್ ಆಯಿತು. 7.2 ಓವರ್‌ಗಳ ದಾಳಿ ನಡೆಸಿದ ಬುಮ್ರಾ 3 ಮೇಡನ್ ಓವರ್‌ಗಳೊಂದಿಗೆ ಕೇವಲ 19 ರನ್ ನೀಡಿ ಪ್ರಮುಖ 6 ವಿಕೆಟ್ ಉರುಳಿಸಿ ಮಿಂಚಿದರು. ಇದು ಭಾರತ ತಂಡದ ವಿರುದ್ಧ ಇಂಗ್ಲೆಂಡ್ ತಂಡದ ಅತ್ಯಂತ ಕನಿಷ್ಠ ಮೊತ್ತ ಎನಿಸಿದೆ. ಬುಮ್ರಾಗೆ ಉತ್ತಮ ಸಾಥ್ ನೀಡಿದ ಮೊಹಮದ್ ಶಮಿ ಮೂರು ವಿಕೆಟ್ ಉರುಳಿಸಿ ಮಿಂಚಿದರು.
