ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚುನಾವಣೆಯ ಮತದಾರರ ಪಟ್ಟಿಯಲ್ಲಿ ಹಲವು ನಕಲಿ ಹಾಗೂ ಅಸ್ತಿತ್ವದಲ್ಲಿಲ್ಲದ ಕ್ಲಬ್‌ಗಳಿವೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ, ಅಭ್ಯರ್ಥಿ ವಿಎಂ ಮಂಜುನಾಥ್‌ ಅವರು ಚುನಾವಣಾ ಅಕ್ರಮ ತಡೆಯಲು ಆಗ್ರಹಿಸಿ ದೂರು ನೀಡಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯ ಚುನಾವಣಾ ಕಣ ಕಾವೇರುತ್ತಿರುವಾಗಲೇ, ಸಂಸ್ಥೆಯಲ್ಲಿ ಹಲವು ನಕಲಿ ಹಾಗೂ ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳು ಇರುವ ಆರೋಪ ಕೇಳಿಬಂದಿದೆ. ‘ಕೆಎಸ್‌ಸಿಎ ಮತದಾರರ ಪಟ್ಟಿಯಲ್ಲಿ ನಕಲಿ ಕ್ಲಬ್‌ಗಳಿವೆ. ಇದರಿಂದ ಚುನಾವಣೆಯಲ್ಲೂ ಮೋಸ ನಡೆಯುವ ಸಾಧ್ಯತೆಯಿದೆ. ಇದನ್ನು ತಡೆಗಟ್ಟಬೇಕು’ ಎಂದು ಕೆಎಸ್‌ಸಿಎ ಆಜೀವ ಸದಸ್ಯ, ಈ ಬಾರಿ ಚುನಾವಣೆಯಲ್ಲಿ ವೆಂಕಟೇಶ್‌ ಪ್ರಸಾದ್‌ ಬಣದ ಅಭ್ಯರ್ಥಿಯಾಗಿ, ವ್ಯವಸ್ಥಾಪಕ ಮಂಡಳಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ವಿಎಂ ಮಂಜುನಾಥ್‌ ಆರೋಪಿಸಿದ್ದಾರೆ. ಇದರ ವಿರುದ್ಧ ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆಗೂ ದೂರು ನೀಡಿದ್ದಾರೆ.

1500ಕ್ಕೂ ಹೆಚ್ಚು ಸದಸ್ಯರು, 350ರಷ್ಟು ಕ್ಲಬ್‌ಗಳಿಗೆ ಮತದಾನದ ಹಕ್ಕು

ರಾಜ್ಯ ಕ್ರಿಕೆಟ್‌ನಲ್ಲಿ 1500ಕ್ಕೂ ಹೆಚ್ಚು ಸದಸ್ಯರು, 350ರಷ್ಟು ಕ್ಲಬ್‌ಗಳಿಗೆ ಮತದಾನದ ಹಕ್ಕು ಇವೆ. ಆದರೆ ಈ ಪಟ್ಟಿಯಲ್ಲಿ ನಕಲಿ ಕ್ಲಬ್‌ಗಳೂ ಸೇರಿವೆ ಎಂಬುದು ಮಂಜುನಾಥ್‌ ಅವರ ಆರೋಪ. ಇದರ ಬಗ್ಗೆ ಮಂಗಳವಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಕೆಎಸ್‌ಸಿಎ ಚುನಾವಣಾಧಿಕಾರಿಗೂ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

‘ಎನ್‌ಜಿಇಎಫ್‌ ಸ್ಪೋರ್ಟ್‌ ಅಸೋಸಿಯೇಷನ್‌, ಐಡಿಯಲ್‌ ಜಾವಾ ಸ್ಪೋರ್ಟ್ಸ್‌ ಕ್ಲಬ್‌, ಬಿಜಿಎಂಎಲ್‌, ಮಫತ್‌ಲಾಲ್‌ ಪ್ಲೈವುಡ್‌ ಇಂಡಸ್ಟ್ರಿ ಸ್ಪೋರ್ಟ್ಸ್‌ ಕ್ಲಬ್‌ ಹಾಗೂ ಕಿರ್ಲೋಸ್ಕರ್‌ ರಿಕ್ರಿಯೇಷನ್‌ ಕ್ಲಬ್‌ ಹೆಸರು ಕೆಎಸ್‌ಸಿಎ ಪಟ್ಟಿಯಲ್ಲಿವೆ. ಆದರೆ ಈ ಕ್ಲಬ್‌ಗಳು ಅಸ್ತಿತ್ವದಲ್ಲೇ ಇಲ್ಲ. ಕೆಲ ಕ್ಲಬ್‌ಗಳು 20 ವರ್ಷಗಳ ಹಿಂದೆಯೇ ಆಡುವುದನ್ನು ನಿಲ್ಲಿಸಿದೆ. ಕೆಎಸ್‌ಸಿಎ ಟೂರ್ನಿಗಳಲ್ಲಿ ಈ ಕ್ಲಬ್‌ಗಳು ಆಡುತ್ತಿಲ್ಲ’ ಎಂದು ಮಂಜುನಾಥ್‌ ಆರೋಪಿಸಿದ್ದಾರೆ.

‘ಕೆಲ ಕ್ಲಬ್‌ಗಳ ಅಸಲಿ ಮಾಲೀಕರು ಅಸ್ತಿತ್ವದಲ್ಲೇ ಇಲ್ಲ. ಆದರೆ ಕೆಲ ವ್ಯಕ್ತಿಗಳು ಈ ಕ್ಲಬ್‌ಗಳ ಪ್ರತಿನಿಧಿಗಳು ಎಂದು ಹೇಳಿ, ಕ್ಲಬ್‌ಗಳ ಸೀಲ್‌, ಸಹಿ ದುರುಪಯೋಗ ಮಾಡುತ್ತಿದ್ದಾರೆ. ನಕಲಿ ದಾಖಲೆ ಸಲ್ಲಿಸಿ ಮತದಾನದ ಹಕ್ಕು ಪಡೆಯಲೂ ಪ್ರಯತ್ನಿಸುತ್ತಿದ್ದಾರೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕ್ಲಬ್‌ಗಳ ವಿರುದ್ಧ ನಕಲಿ ದಾಖಲೆ ಸೃಷ್ಟಿ, ವಂಚನೆ, ಅಧಿಕಾರ ದುರುಪಯೋಗ ಪ್ರಕರಣ ದಾಖಲಿಸಬೇಕು ಎಂದು ಕೋರಿದ್ದಾರೆ.

ಸೀಲ್‌, ಸಹಿ ಸಿಕ್ಕಿದ್ದೇಗೆ?

‘ಕೆಲವು ಕ್ಲಬ್‌ಗಳು ಕಾರ್ಯಾಚರಣೆ ನಿಲ್ಲಿಸಿವೆ. ಆದರೂ ಈ ಕ್ಲಬ್‌ಗಳ ಹೆಸರಲ್ಲಿ ಅಧ್ಯಕ್ಷ, ಕಾರ್ಯದರ್ಶಿಗಳಿದ್ದಾರೆ. ಮತದಾನದ ಪಟ್ಟಿಯಲ್ಲೂ ಈ ಕ್ಲಬ್‌ಗಳ ಪ್ರತಿನಿಧಿಗಳಿದ್ದಾರೆ. ಇದೆಲ್ಲಾ ಹೇಗೆ ಸಾಧ್ಯ? ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಸೀಲ್‌, ಸಹಿ ಅವರಿಗೆ ಹೇಗೆ ಸಿಕ್ಕಿತು?. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರನ್ನು ಮತದಾನ ಮಾಡದಂತೆ ತಡೆಯಬೇಕು’ ಎಂದು ಮಂಜುನಾಥ್‌ ಅವರು ‘ಕನ್ನಡಪ್ರಭ’ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯೆ ಕೋರಿ ಕೆಎಸ್‌ಸಿಎ ಸದಸ್ಯರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ, ಸೂಕ್ತ ಉತ್ತರ ಸಿಗಲಿಲ್ಲ.