Asianet Suvarna News Asianet Suvarna News

Eng vs Ind: ಬುಮ್ರಾ ಬೆಂಕಿದಾಳಿಗೆ ಬೆಂಡಾದ ಇಂಗ್ಲೆಂಡ್‌!

ಜಸ್‌ಪ್ರೀತ್‌ ಬುಮ್ರಾ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌ ತಂಡ ಪ್ರವಾಸಿ ಭಾರತ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಆಲೌಟ್‌ ಆಗಿದೆ. ಇಂಗ್ಲೆಂಡ್‌ನ ಬ್ಯಾಟಿಂಗ್‌ ವಿಭಾಗದ ದಿಕ್ಕು ತಪ್ಪಿಸಿದ ಜಸ್‌ಪ್ರೀತ್‌ ಬುಮ್ರಾ 6 ವಿಕೆಟ್‌ ಉರುಳಿಸಿದರು.
 

Jasprit Bumrah super Bowling India restricts England in first ODI in Kennington Oval san
Author
Bengaluru, First Published Jul 12, 2022, 7:37 PM IST

ಲಂಡನ್‌ (ಜುಲೈ 12): ಭರ್ಜರಿ ಬೌಲಿಂಗ್‌ ಮೂಲಕ ಮಿಂಚಿದ ಜಸ್‌ಪ್ರೀತ್‌ ಬುಮ್ರಾ, ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಮೇಲುಗೈಗೆ ಕಾರಣರಾಗಿದ್ದಾರೆ. ತಮ್ಮ 7.2 ಓವರ್‌ಗಳ ದಾಳಿಯಲ್ಲಿ ಕೇವಲ 19 ರನ್‌ ನೀಡಿದ ಜಸ್‌ಪ್ರೀತ್‌ ಬುಮ್ರಾ 6 ವಿಕೆಟ್ ಉರುಳಿಸಿದ್ದರಿಂದ ಇಂಗ್ಲೆಂಡ್ ತಂಡ ಕೇವಲ 110 ರನ್‌ಗೆ ಆಲೌಟ್‌ ಆಯಿತು.ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್‌ ಇಂಡಿಯಾ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಬುಮ್ರಾ ಅವರ ಉರಿವೇಗದ ದಾಳಿಯ ಮುಂದೆ ಕೇವಲ 26 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ ತಂಡ ಕೆಳ ಹಂತದಲ್ಲಿ ಬಾಲಂಗೋಚಿಗಳ ಸಹಾಯದಿಂದ 25.2 ಓವರ್‌ಗಳಲ್ಲಿ 110 ರನ್‌ ಪೇರಿಸಲು ಯಶಸ್ವಿಯಾಯಿತು. ಇಂಗ್ಲೆಂಡ್‌ ತಂಡದ ಈ ಮೊತ್ತ ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಈವರೆಗಿನ ಅತ್ಯಂತ ಕನಿಷ್ಠ ಮೊತ್ತ ಎನಿಸಿದೆ. ಇದಕ್ಕೂ ಮುನ್ನ 2006ರಲ್ಲಿ ಜೈಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ 125 ರನ್‌ಗೆ ಅಲೌಟ್‌ ಆಗಿದ್ದು ಅತ್ಯಂತ ಕನಿಷ್ಠ ಮೊತ್ತ ಎನಿಸಿತ್ತು.

ಅದಲ್ಲದೆ, ಬುಮ್ರಾ ಅವರ ನಿರ್ವಹಣೆ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್‌ಗಳ ಮೂರನೇ ಶ್ರೇಷ್ಠ ನಿರ್ವಹಣೆ ಎನಿಸಿದೆ. ಬಾಂಗ್ಲಾದೇಶದ ವಿರುದ್ಧ ಸ್ಟುವರ್ಟ್‌ ಬಿನ್ನಿ 4 ರನ್‌ಗೆ 6 ವಿಕೆಟ್‌ ಹಾಗೂ 1993ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಕೋಲ್ಕತದಲ್ಲಿ ನಡೆದ ಪಂದ್ಯದಲ್ಲಿ ಅನಿಲ್‌ ಕುಂಬ್ಳೆ 12 ರನ್‌ಗೆ 6 ವಿಕೆಟ್ ಉರುಳಿಸಿದ್ದು, ಬುಮ್ರಾ ಅವರ ಸಾಧನೆಗಿಂತ ಮೇಲಿನ ಸ್ಥಾನದಲ್ಲಿದೆ. 

ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡಕ್ಕೆ ಆರಂಭದಿಂದಲೇ ಭಾರತ ಒತ್ತಡ ಹೇರಿತು. 5 ಎಸೆತ ಎದುರಿಸಿದ ಜೇಸನ್‌ ರಾಯ್‌ (Jason Roy) ಇನ್ನಿಂಗ್ಸ್‌ 2ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬುಮ್ರಾಗೆ (Jasprit Bumrah ) ಮೊದಲ ಬಲಿಯಾದರೆ, ಅದೇ ಓವರ್‌ನ ಕೊನೇ ಎಸೆತದಲ್ಲಿ ಜೋ ರೂಟ್‌ (Joe Root) ವಿಕೆಟ್ ಉರುಳಿಸಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾದ ಕಾರಣ ಇಂಗ್ಲೆಂಡ್‌ ತಂಡ 6 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಮೊತ್ತಕ್ಕೆ 1 ರನ್‌ ಸೇರಿಸುವ ವೇಳೆಗೆ ಮೊಹಮದ್‌ ಶಮಿ (Shami), ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ (Stokes) ವಿಕೆಟ್‌ ಅನ್ನು ಉರುಳಿಸಿದರು. ಬಳಿಕ ಜಾನಿ ಬೇರ್‌ ಸ್ಟೋ ಹಾಗೂ ವಿಕೆಟ್‌ ಕೀಪರ್‌-ಕ್ಯಾಪ್ಟನ್‌ ಜೋಸ್‌ ಬಟ್ಲರ್‌ ತಂಡದ ಮೊತ್ತವನ್ನು ಎರಡಂಕಿ ಮೊತ್ತಕ್ಕೆ ಏರಿಸಿದರು.

ಇದನ್ನೂ ಓದಿ: ವಿರಾಟ್ ಕೊಹ್ಲಿ ವಿರುದ್ದ ಸಮರ ಸಾರಿದ ಮಾಜಿ ಕ್ರಿಕೆಟರ್ಸ್‌..!

6ನೇ ಓವರ್‌ನಲ್ಲಿ ಮತ್ತೆ ದಾಳಿಗಿಳಿದ ಬುಮ್ರಾ, ಬೇರ್‌ಸ್ಟೋ ವಿಕೆಟ್‌ ಅನ್ನು ಉರುಳಿಸಿದರೆ. ಲಿಯಾಮ್‌ ಲಿವಿಂಗ್‌ಸ್ಟೋನ್‌ 8 ಎಸೆತಗಳನ್ನು ಎದುರಿಸಿ ಬುಮ್ರಾ ಎಸೆತದಲ್ಲಿ ಶೂನ್ಯಕ್ಕೆ ಔಟಾದರು. ಈ ಹಂತದಲ್ಲಿ ಭಾರತವನ್ನು(Team India)  ಇಂಗ್ಲೆಂಡ್‌ (England) ತಂಡಕ್ಕೆ ಇನ್ನೂ ಕನಿಷ್ಠ ಮೊತ್ತಕ್ಕೆ ಆಲೌಟ್‌ ಮಾಡುವ ಗುರಿಗಳಿದ್ದವು. ಆದರೆ, ಬಟ್ಲರ್ ಹಾಗೂ ಮೊಯಿನ್‌ ಅಲಿ 6ನೇ ವಿಕೆಟ್‌ಗೆ 28 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. 18 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 14 ರನ್‌ ಬಾರಿಸಿದ್ದ ಮೊಯಿನ್‌ ಅಲಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್‌ ಒಪ್ಪಿಸಿದರೆ, ಈ ಮೊತ್ತ್ಕೆ 6 ರನ್‌ ಸೇರಿಸುವ ವೇಳಗೆ ನಾಯಕ ಬಟ್ಲರ್‌, ಮೊಹಮದ್‌ ಶಮಿ ಎಸೆತದಲ್ಲಿ ಸೂರ್ಯಕುಮಾರ್‌ ಯಾದವ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಇದನ್ನೂ ಓದಿ: Ind vs Eng ಕೊನೆಗೂ ನಿಜವಾಯ್ತು ಸೂರ್ಯಕುಮಾರ್ ಬಗ್ಗೆ ರೋಹಿತ್​​ ನುಡಿದ ಭವಿಷ್ಯ..!

ಬಳಿಕ ಕ್ರೇಗ್‌ ಓವರ್ಟನ್‌ ವಿಕೆಟ್‌ ಉರುಳಿಸುವ ಮೂಲಕ ಶಮಿ 3 ವಿಕೆಟ್‌ ಸಾಧನೆ ಮಾಡಿದರೆ, ಕೊನೆಯಲ್ಲಿ ಡೇವಿಡ್‌ ವಿಲ್ಲಿ (21) ಹಾಗೂ ಬ್ರಾಡಾನ್‌ ಕಾರ್ಸೆ (15) ಕೆಲ ಶಾಟ್‌ ಗಳನ್ನು ಬಾರಿಸಿದ್ದರಿಂದ ಇಂಗ್ಲೆಂಡ್‌ ತಂಡ 100ರ ಗಡಿ ದಾಟಿಸುವಲ್ಲಿ ಯಶ ಕಂಡಿತು. ಈ ಎರಡೂ ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದ ಜಸ್‌ಪ್ರೀತ್‌ ಬುಮ್ರಾ 6 ವಿಕೆಟ್‌ ಸಾಧನೆ ಮಾಡಿದರು.

Follow Us:
Download App:
  • android
  • ios