ಮುಂದಿನ 3 ತಿಂಗಳೊಳಗಾಗಿ ಕೆ ಎಲ್ ರಾಹುಲ್ - ಆತಿಯಾ ಶೆಟ್ಟಿ ಮದುವೆ ಫಿಕ್ಸ್..?
* ಕೆ ಎಲ್ ರಾಹುಲ್-ಆತಿಯಾ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಡಲು ಭರ್ಜರಿ ಸಿದ್ದತೆ
* ಮುಂದಿನ ಮೂರು ತಿಂಗಳಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆ
* ಸದ್ಯ ಜರ್ಮನಿಯಲ್ಲಿರುವ ಈ ತಾರಾ ಜೋಡಿ
ಬೆಂಗಳೂರು(ಜು.12): ಭಾರತ ಕ್ರಿಕೆಟ್ ತಂಡದ ತಾರಾ ಕ್ರಿಕೆಟಿಗ ಕೆ ಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ನಡೆಸುತ್ತಿರುವುದು ಜಗಜ್ಜಾಹೀರಾಗಿದೆ. ಇಷ್ಟು ದಿನಗಳ ಕಾಲ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿದ್ದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿವೆ. ಇನ್ನು ಮುಂದಿನ ಮೂರು ತಿಂಗಳೊಳಗಾಗಿ ಕೆ ಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು India Today ವರದಿ ಮಾಡಿದೆ. ಮೂಲಗಳ ಪ್ರಕಾರ ಬಾಲಿವುಡ್‌ನ ಖ್ಯಾತ ನಟ ಸುನಿಲ್ ಶೆಟ್ಟಿ ಹಾಗೂ ಮಾನಾ ಶೆಟ್ಟಿ ದಂಪತಿಯ ಪುತ್ರಿ ಆತಿಯಾ ಶೆಟ್ಟಿಯನ್ನು ಟೀಂ ಇಂಡಿಯಾ ಉಪನಾಯಕ ಕೆ ಎಲ್ ರಾಹುಲ್ ಕೈಹಿಡಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೆ ವೆಬ್‌ಸೈಟ್ ವರದಿ ಮಾಡಿದೆ.
ಆತಿಯಾ ಶೆಟ್ಟಿಯವರ ಸಮೀಪವರ್ತಿಗಳು IndiaToday.in ಸುದ್ದಿಸಂಸ್ಥೆಗೆ ಈ ವಿಚಾರವನ್ನು ಖಚಿತಪಡಿಸಿವೆ. ಕೆ ಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ ಕಳೆದ ಮೂರು ವರ್ಷಕ್ಕೂ ಹೆಚ್ಚು ಸಮಯದಿಂದ ಡೇಟಿಂಗ್ ನಡೆಸುತ್ತಿದ್ದಾರೆ. ಇದೀಗ ಈ ಜೋಡಿ ವಿವಾಹವಾಗುವ ತೀರ್ಮಾನಕ್ಕೆ ಬಂದಿದ್ದು, ಮುಂದಿನ ಮೂರು ತಿಂಗಳೊಳಗಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಿನಿಂದಲೇ ಭರ್ಜರಿ ಸಿದ್ದತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಕೆ ಎಲ್ ರಾಹುಲ್ ಅವರ ಕುಟುಂಬಸ್ಥರು ಇತ್ತೀಚೆಗಷ್ಟೇ ಆತಿಯಾ ಶೆಟ್ಟಿ ಕುಟುಂಬದವನ್ನು ಭೇಟಿಯಾಗಲು ಮುಂಬೈಗೆ ಬಂದಿದ್ದರು. ಕೆ ಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ (Athiya Shetty and KL Rahul) ಜೋಡಿ ಹೊಸದಾಗಿ ನೆಲೆಸಲು ತೀರ್ಮಾನಿಸಿರುವ ಮನೆಗೆ ಎರಡು ಕುಟುಂಬಸ್ಥರು ಭೇಟಿ ನೀಡಿದ್ದಾರೆ. ಮುಂಬೈನಲ್ಲೇ ಮುಂದಿನ ಮೂರು ತಿಂಗಳಿನೊಳಗಾಗಿ ಈ ಜೋಡಿ ವಿವಾಹವಾಗಲಿದ್ದಾರೆ. ಎರಡು ಕುಟುಂಬದಲ್ಲೂ ಅದ್ಧೂರಿ ಸಂಭ್ರಮಾಚರಣೆಗೆ ಸಕಲ ಸಿದ್ದತೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜರ್ಮನಿಯಲ್ಲಿ ಕೆ ಎಲ್ ರಾಹುಲ್‌ಗೆ ಜತೆಯಾದ ಆತಿಯಾ ಶೆಟ್ಟಿ
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕೆ ಎಲ್ ರಾಹುಲ್, ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದರು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಕೆ ಎಲ್ ರಾಹುಲ್, ಜರ್ಮನಿಗೆ ತೆರಳಿದ್ದರು. 30 ವರ್ಷದ ಕೆ ಎಲ್ ರಾಹುಲ್ ತೊಡೆ ಸಂದಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಜರ್ಮನಿಯಲ್ಲಿ ಸರ್ಜರಿ ಮಾಡಿಸಿಕೊಳ್ಳಲು ತೆರಳಿದ್ದಾರೆ. ಈ ವೇಳೆ ಆತಿಯಾ ಶೆಟ್ಟಿ ಟೀಂ ಇಂಡಿಯಾ ಕ್ರಿಕೆಟಿಗ ರಾಹುಲ್‌ಗೆ ಜತೆಯಾಗಿದ್ದಾರೆ. ಕೆ ಎಲ್ ರಾಹುಲ್ ಇನ್ನೊಂದು ತಿಂಗಳು ಕಾಲ ಜರ್ಮನಿಯಲ್ಲಿಯೇ ಉಳಿದುಕೊಳ್ಳಲಿದ್ದು, ಅವರು ಗುಣಮುಖರಾಗುವವರೆಗೂ ಆತಿಯಾ ಶೆಟ್ಟಿ ಕೂಡಾ ಜರ್ಮನಿಯಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಹುಲ್-ಆತಿಯಾ ಮದುವೆ ಬಗ್ಗೆ ಸುನೀಲ್ ಶೆಟ್ಟಿ ಹೇಳಿದ್ದೇನು..?
ಕೆ ಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ ಡೇಟಿಂಗ್ ನಡೆಸುತ್ತಿರುವುದರ ಬಗ್ಗೆ ಸಾಕಷ್ಟು ಹಿಂದಿನಿಂದಲೇ ಗಾಳಿ ಸುದ್ದಿಗಳು ಹರಿದಾಡುತ್ತಿದ್ದರೂ, ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಕಳೆದ ವರ್ಷ ಅತಿಯಾ ಶೆಟ್ಟಿಯವರ ಸಹೋದರ ಆಹಾನ್ ಶೆಟ್ಟಿಯ ಪಾದಾರ್ಪಣೆ ಸಿನಿಮಾವಾದ ತಡಪ್ ಚಿತ್ರದ ಬಿಡುಗಡೆ ವೇಳೆ ಕೆ ಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ ಒಟ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಇದಾದ ಬಳಿಕ ರಾಹುಲ್ ಅಂತರರಾಷ್ಟ್ರೀಯ ಪಂದ್ಯಗಳನ್ನಾಡುವ ಸಂದರ್ಭದಲ್ಲಿ ಆತಿಯಾ ಶೆಟ್ಟಿ ಗ್ಯಾಲರಿಯಲ್ಲಿ ಕುಳಿತು ತನ್ನ ಇನಿಯನನ್ನು ಹುರಿದುಂಬಿಸುತ್ತಿದ್ದರು.