ಮುಂಬರುವ ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು, ಹ್ಯಾರಿ ಬ್ರೂಕ್‌ಗೆ ನಾಯಕತ್ವ ನೀಡಲಾಗಿದೆ. ಮಾರಕ ವೇಗಿ ಜೋಫ್ರಾ ಆರ್ಚರ್ ತಂಡಕ್ಕೆ ಮರಳಿದ್ದು, ಶ್ರೀಲಂಕಾ ವಿರುದ್ಧದ ಸರಣಿಗೂ ತಂಡವನ್ನು ಹೆಸರಿಸಲಾಗಿದೆ. ಆರ್‌ಸಿಬಿಯ ಇಬ್ಬರು ಆಟಗಾರರು ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಲಂಡನ್: ಮುಂಬರುವ ಫೆಬ್ರವರಿ 07ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಮಾರಕ ವೇಗಿ ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡಕ್ಕೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ಟಿ20 ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ಹ್ಯಾರಿ ಬ್ರೂಕ್‌ಗೆ ಇಂಗ್ಲೆಂಡ್ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ.

ಇಂಗ್ಲೆಂಡ್ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮುನ್ನ ಶ್ರೀಲಂಕಾ ಎದುರು ಏಕದಿನ ಹಾಗೂ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಗೂ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟವಾಗಿದೆ. ಇನ್ನು ಆಷಸ್ ಟೆಸ್ಟ್‌ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಜೋಶ್ ಟಂಗ್ ಮೊದಲ ಬಾರಿಗೆ ಇಂಗ್ಲೆಂಡ್ ಟಿ20 ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಇನ್ನು ವಿಲ್ ಜ್ಯಾಕ್ಸ್ ಕೂಡಾ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಆರ್‌ಸಿಬಿ ಇಬ್ಬರು ಆಟಗಾರರಿಗೆ ಸ್ಥಾನ:

ಇನ್ನು ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದ ಆಟಗಾರರ ಪೈಕಿ ಇಬ್ಬರು ಆಟಗಾರರು ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್‌ ಹಾಗೂ ಜೇಕಬ್‌ ಬೆಥೆಲ್‌ ಈ ಇಬ್ಬರು ಆಟಗಾರರು ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಇಬ್ಬರು ಆಟಗಾರರು ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಳೆದ ವಿಶ್ವಕಪ್ ಆಡಿದ ಎಂಟು ಮಂದಿಗೆ ಸ್ಥಾನ:

ಇನ್ನು 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆದಿದ್ದ ಎಂಟು ಆಟಗಾರರು ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ನಾಯಕ ಹ್ಯಾರಿ ಬ್ರೂಕ್, ಮಾಜಿ ನಾಯಕ ಜೋಸ್ ಬಟ್ಲರ್, ಫಿಲ್ ಸಾಲ್ಟ್, ಬೆನ್ ಡಕೆಟ್, ಸ್ಯಾಮ್ ಕರ್ರನ್, ವಿಲ್ ಜ್ಯಾಕ್ಸ್‌, ಆದಿಲ್ ರಶೀದ್ ಹಾಗೂ ಜೋಫ್ರಾ ಆರ್ಚರ್ ಸ್ಥಾನ ಪಡೆದಿದ್ದಾರೆ. ಇನ್ನು ಕಳೆದ ಆವೃತ್ತಿಯ ಟೂರ್ನಿಗೆ ಸ್ಥಾನ ಪಡೆದಿದ್ದ ಲಿಯಾಮ್ ಲಿವಿಂಗ್‌ಸ್ಟೋನ್, ಮೋಯಿನ್ ಅಲಿ, ಜಾನಿ ಬೇರ್‌ಸ್ಟೋವ್, ಟಾಮ್ ಹಾರ್ಟ್ಲಿ, ಕ್ರಿಸ್ ಜೋರ್ಡನ್, ರೀಸ್ ಟಾಪ್ಲೆ ಹಾಗೂ ಮಾರ್ಕ್‌ ವುಡ್‌ ತಂಡದಿಂದ ಹೊರಬಿದ್ದಿದ್ದಾರೆ.

Scroll to load tweet…

ಶ್ರೀಲಂಕಾ ಎದುರಿನ ಟಿ20 ಹಾಗೂ ಟಿ20 ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡ ಹೀಗಿದೆ:

ಹ್ಯಾರಿ ಬ್ರೂಕ್(ನಾಯಕ), ರೆಹಾನ್ ಅಹಮದ್, ಜೋಫ್ರಾ ಆರ್ಚರ್(ಟಿ20 ವಿಶ್ವಕಪ್ ಟೂರ್ನಿಗೆ ಮಾತ್ರ), ಟಾಮ್ ಬಾಂಟನ್, ಜೇಕಬ್ ಬೆಥೆಲ್, ಜೋಸ್ ಬಟ್ಲರ್, ಬ್ರೈಡನ್ ಕಾರ್ಸ್‌(ಶ್ರೀಲಂಕಾ ಎದುರಿನ ಟಿ20 ಸರಣಿಗೆ ಮಾತ್ರ), ಸ್ಯಾಮ್ ಕರ್ರನ್, ಲಿಯಾಮ್ ಡೌಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮಿ ಓವರ್‌ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟಂಗ್, ಲೂಕ್ ವುಡ್.

ಲಂಕಾ ಎದುರಿನ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ:

ಹ್ಯಾರಿ ಬ್ರೂಕ್(ನಾಯಕ), ರೆಹಾನ್ ಅಹ್ಮದ್, ಟಾಮ್ ಬಾಂಟನ್, ಜೇಕಬ್ ಬೆಥೆಲ್, ಜೋಸ್ ಬಟ್ಲರ್, ಬ್ರೈಡನ್ ಕಾರ್ಸ್‌, ಜಾಕ್ ಕ್ರಾಲಿ, ಸ್ಯಾಮ್ ಕರ್ರನ್, ಲಿಯಾಮ್ ಡೌಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್‌, ಜೇಮಿ ಓವರ್‌ಟನ್, ಆದಿಲ್ ರಶೀದ್, ಜೋ ರೂಟ್, ಲ್ಯೂಕ್ ವುಡ್.

ಶ್ರೀಲಂಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯು ಜನವರಿ 22, 24 ಹಾಗೂ 24ರಂದು ಕೊಲಂಬೊದ ಆರ್‌ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಾದ ಬಳಿಕ ಮೂರು ಪಂದ್ಯಗಳ ಮೂರು ಪಂದ್ಯಗಳ ಟಿ20 ಸರಣಿಯು ಜನವರಿ 30, ಫೆಬ್ರವರಿ 1 ಹಾಗೂ ಫೆಬ್ರವರಿ 03ರಂದು ಕ್ಯಾಂಡಿಯ ಪಲ್ಲಿಕೆಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ. ಇನ್ನು ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 07ರಿಂದ ಆರಂಭವಾಗಲಿದ್ದು, ಇಂಗ್ಲೆಂಡ್ ತಂಡವು ಫೆಬ್ರವರಿ 08ರಂದು ಮುಂಬೈನಲ್ಲಿ ನೇಪಾಳ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.