ಪರ್ತ್‌ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್‌ಗೆ ಆರಂಭಿಕ ಆಘಾತವಾಗಿದೆ. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಮೊದಲ ಮೂರು ವಿಕೆಟ್‌ಗಳನ್ನು ಕಬಳಿಸಿ ಪ್ರವಾಸಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

ಪರ್ತ್: ಆ್ಯಶಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್‌ಗೆ ಆರಂಭಿಕ ಆಘಾತ ಎದುರಾಗಿದೆ. ಪ್ರವಾಸಿ ಇಂಗ್ಲೆಂಡ್ ತಂಡವು ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಗಿದೆ. ಎಡಗೈ ವೇಗಿ ಮಿಚೆಲ್ ಸ್ಟಾರ್ಕ್‌ ಮೊದಲ ಮೂರು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ.

ಇಂಗ್ಲೆಂಡ್‌ಗೆ ಆರಂಭಿಕ ಆಘಾತ

ಆರಂಭಿಕರಾದ ಝಾಕ್ ಕ್ರಾಲಿ, ಬೆನ್ ಡಕೆಟ್ ಮತ್ತು ಜೋ ರೂಟ್ ವಿಕೆಟ್‌ಗಳನ್ನು ಇಂಗ್ಲೆಂಡ್ ಕಳೆದುಕೊಂಡಿದೆ. ಕ್ರಾಲಿ ಶೂನ್ಯಕ್ಕೆ ಔಟಾದರೆ, ಡಕೆಟ್ 20 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ಜೋ ರೂಟ್ ಖಾತೆ ತೆರೆಯುವ ಮುನ್ನವೇ ಮಿಚೆಲ್ ಸ್ಟಾರ್ಕ್ ಪೆವಿಲಿಯನ್‌ಗೆ ಕಳುಹಿಸಿದರು. ಆಸೀಸ್ ಪರ ಮೂರೂ ವಿಕೆಟ್‌ಗಳನ್ನು ಮಿಚೆಲ್ ಸ್ಟಾರ್ಕ್ ಪಡೆದರು. ಇತ್ತೀಚಿನ ವರದಿಗಳ ಪ್ರಕಾರ, ಇಂಗ್ಲೆಂಡ್ ಮೂರು ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿದೆ. ಓಲಿ ಪೋಪ್ 33 ರನ್ ಮತ್ತು ಹ್ಯಾರಿ ಬ್ರೂಕ್ 8 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದಿದೆ. ನಿನ್ನೆ ಪ್ರಕಟಿಸಿದ 12 ಸದಸ್ಯರ ತಂಡದಿಂದ ಸ್ಪಿನ್ನರ್ ಶೋಯೆಬ್ ಬಶೀರ್ ಅವರನ್ನು ಕೈಬಿಡಲಾಗಿದ್ದು, ವೇಗಿ ಬ್ರೆಂಡನ್ ಕಾರ್ಸ್ ಇಂಗ್ಲೆಂಡ್‌ನ ಅಂತಿಮ XI ನಲ್ಲಿ ಸ್ಥಾನ ಪಡೆದಿದ್ದಾರೆ. ಮೊದಲ ಓವರ್‌ನಲ್ಲೇ ಸ್ಟಾರ್ಕ್ ಕ್ರಾಲಿಯನ್ನು ಔಟ್ ಮಾಡಿದರೆ, ಬಿರುಸಿನ ಆಟ ಆರಂಭಿಸಿದ್ದ ಡಕೆಟ್‌ರನ್ನು ಸ್ಟಾರ್ಕ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಆಸ್ಟ್ರೇಲಿಯಾದಲ್ಲಿ ಶತಕವಿಲ್ಲದ ದಾಖಲೆಯನ್ನು ಮುರಿಯಲು ಬಂದಿದ್ದ ರೂಟ್ ಮೊದಲ ಟೆಸ್ಟ್‌ನಲ್ಲಿ ಎಡವಿದರು. ಖಾತೆ ತೆರೆಯುವ ಮುನ್ನವೇ ರೂಟ್ ಕೂಡ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು.

ಉಭಯ ತಂಡಗಳ ಆಟಗಾರರ ಪಟ್ಟಿ

ಆಸ್ಟ್ರೇಲಿಯಾ ಪ್ಲೇಯಿಂಗ್ XI: ಉಸ್ಮಾನ್ ಖವಾಜ, ಜೇಕ್ ವೆದರಾಲ್ಡ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ಬ್ರೆಂಡನ್ ಡಾಗೆಟ್, ಸ್ಕಾಟ್ ಬೋಲ್ಯಾಂಡ್, ನಾಥನ್ ಲಿಯಾನ್.

ಇಂಗ್ಲೆಂಡ್ ಪ್ಲೇಯಿಂಗ್ XI: ಬೆನ್ ಡಕೆಟ್, ಝಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಬೆನ್ ಸ್ಟೋಕ್ಸ್, ಜಾಮಿ ಸ್ಮಿತ್, ಗಸ್ ಅಟ್ಕಿನ್ಸನ್, ಮಾರ್ಕ್ ವುಡ್, ಜೋಫ್ರಾ ಆರ್ಚರ್, ಬ್ರೆಂಡನ್ ಕಾರ್ಸ್.