ಲಂಡನ್‌(ಮೇ.29): ಬಲ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಇಂಗ್ಲೆಂಡ್ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ತಾವು ಸಂಪೂರ್ಣ ಫಿಟ್‌ ಆದ ಬಳಿಕವಷ್ಟೇ ತಂಡ ಕೂಡಿಕೊಳ್ಳುವುದಾಗಿ ತಿಳಿಸಿದ್ದಾರೆ. ತನ್ನ ಪ್ರಾಥಮಿಕ ಗುರಿ ಏನಿದ್ದರೂ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಹಾಗೂ ವರ್ಷಾಂತ್ಯದಲ್ಲಿ ನಡೆಯುವ ಆ್ಯಷಸ್‌ ಸರಣಿಯಲ್ಲಿ ಪಾಲ್ಗೊಳ್ಳುವುದಾಗಿದೆ ಎಂದು 26 ವರ್ಷದ ವೇಗಿ ಆರ್ಚರ್‌ ತಿಳಿಸಿದ್ದಾರೆ.

ಸದ್ಯ ಜೋಫ್ರಾ ಆರ್ಚರ್‌ ಶಸ್ತ್ರಚಿಕಿತ್ಸೆ ಬಳಿಕ 4 ವಾರಗಳ ಕಾಲ ಪುನಶ್ಚೇತನ ಶಿಬಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಜೂನ್ ತಿಂಗಳಾಂತ್ಯದ ವೇಳೆಗೆ ಆರ್ಚರ್‌ ಫಿಟ್‌ ಆಗಿದ್ದಾರೆಯೇ ಇಲ್ಲವೇ? ಆಗಸ್ಟ್‌ ತಿಂಗಳಿನಲ್ಲಿ ಭಾರತ ವಿರುದ್ದ ಅರಂಭವಾಗಲಿರುವ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆರ್ಚರ್‌ಗೆ ಸ್ಥಾನ ನೀಡುವ ಕುರಿತಂತೆ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯು ಪ್ರಗತಿ ಪರಿಶೀಲನೆ ನಡೆಸಲಿದೆ.

ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ 4 ವಾರ ಕ್ರಿಕೆಟ್‌ನಿಂದ ಔಟ್..!

ಬಲ ಮೊಣಕೈ ಶಸ್ತ್ರಚಿಕಿತ್ಸೆ ಆಗಿರುವುದರಿಂದ ಇಂಗ್ಲೆಂಡ್‌ ಕ್ರಿಕೆಟ್ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ವಿಚಾರದಲ್ಲಿ ಆತುರ ಪಡುವುದಿಲ್ಲ. ಏಕೆಂದರೆ ಸದ್ಯ ನನ್ನ ಮುಂದಿರುವ ಮೊದಲ ಆದ್ಯತೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವುದಾಗಿದೆ. ಆ ಬಳಿಕ ವರ್ಷಾಂತ್ಯದಲ್ಲಿ ನಡೆಯಲಿರುವ ಆ್ಯಷಸ್‌ ಸರಣಿಯಲ್ಲಿ ಭಾಗವಹಿಸಲು ಎದುರು ನೋಡುತ್ತಿರುವುದಾಗಿ ಡೇಲಿ ಮೇಲ್‌ಗೆ ಬರೆದ ಲೇಖನದಲ್ಲಿ ತಿಳಿಸಿದ್ದಾರೆ.

ಇವೆರಡು ನನ್ನ ಮೊದಲ ಆದ್ಯತೆ. ಇದಕ್ಕಿಂತ ಮುಂಚೆಯೇ ನಾನು ಫಿಟ್ನೆಸ್ ಗಳಿಸಿದರೆ ತವರಿನಲ್ಲಿ ಭಾರತ ವಿರುದ್ದದ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಡಲಿದ್ದೇನೆ ಎಂದು ಬಾರ್ಬಡೊಸ್ ಮೂಲದ ಆರ್ಚರ್‌ ತಿಳಿಸಿದ್ಧಾರೆ.

ಇಂಗ್ಲೆಂಡ್‌ ಮಾರಕ ವೇಗಿ ಜೋಫ್ರಾ ಆರ್ಚರ್‌ 2020ರ ಆರಂಭದಿಂದಲೂ ಗಾಯದ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಜೋಫ್ರಾ ಆರ್ಚರ್‌ ಈಗಾಗಲೇ ನ್ಯೂಜಿಲೆಂಡ್ ವಿರುದ್ದದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ.