4ನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಭಾರತದ ವಿರುದ್ಧ ಮೇಲುಗೈ ಸಾಧಿಸಿದೆ. ಭಾರತ 358 ರನ್‌ಗಳಿಗೆ ಆಲೌಟ್ ಆದರೆ, ಇಂಗ್ಲೆಂಡ್ 2 ವಿಕೆಟ್‌ಗೆ 225 ರನ್ ಗಳಿಸಿದೆ. ಪಂದ್ಯದ ಮೂರನೇ ದಿನ ನಿರ್ಣಾಯಕವಾಗಿದೆ.

ಮ್ಯಾಂಚೆಸ್ಟರ್‌: 4ನೇ ಟೆಸ್ಟ್‌ ಪಂದ್ಯದ 2ನೇ ದಿನ ಇಂಗ್ಲೆಂಡ್‌ ತಂಡ ಭಾರತದ ಮೇಲೆ ಅಕ್ಷರಶಃ ಸವಾರಿ ಮಾಡಿದೆ. ಇಂಗ್ಲೆಂಡ್‌ ಬೌಲರ್‌ಗಳ ಮುಂದೆ ಹೋರಾಟ ಪ್ರದರ್ಶಿಸಿ ಭಾರತೀಯ ಬ್ಯಾಟರ್‌ಗಳು ಉತ್ತಮ ಮೊತ್ತ ಕಲೆಹಾಕಿದರೂ, ತಂಡದ ಬೌಲರ್‌ಗಳು ಮಂಕಾಗಿದ್ದಾರೆ. ಆಕ್ರಮಣಕಾರಿ ಆಟದ ಮೂಲಕ ಇಂಗ್ಲೆಂಡ್‌ ಇನ್ನಿಂಗ್ಸ್‌ ಮುನ್ನಡೆಯತ್ತ ದಾಪುಗಾಲಿಟ್ಟಿದೆ. 3ನೇ ದಿನವಾದ ಶುಕ್ರವಾರ ಭಾರತೀಯ ಬೌಲರ್ಸ್‌ ಯಾವ ರೀತಿ ದಾಳಿ ನಡೆಸಲಿದ್ದಾರೆ ಎಂಬುದರ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ.

ಮೊದಲ ದಿನ 4 ವಿಕೆಟ್‌ಗೆ 264 ರನ್‌ ಗಳಿಸಿದ್ದ ಭಾರತ, ಗುರುವಾರ 358 ರನ್‌ಗೆ ಆಲೌಟಾಯಿತು. ಬಳಿಕ ಇನ್ನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್‌ ದಿನದಂತ್ಯಕ್ಕೆ 2 ವಿಕೆಟ್‌ಗೆ 225 ರನ್‌ ಗಳಿಸಿದೆ. ತಂಡ 133 ರನ್‌ ಹಿನ್ನಡೆಯಲ್ಲಿದೆ.

Scroll to load tweet…

ರಿಷಭ್‌ ಹೋರಾಟ:

ಮೊದಲ ದಿನದ ಮೊತ್ತಕ್ಕೆ 1 ರನ್‌ ಸೇರಿಸಿ ಜಡೇಜಾ(20) ಔಟಾದ ಬಳಿಕ ಶಾರ್ದೂಲ್‌ ಠಾಕೂರ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಇನ್ನಿಂಗ್ಸ್‌ ಕಟ್ಟಿದರು. 6ನೇ ವಿಕೆಟ್‌ಗೆ ಈ ಜೋಡಿ 48 ರನ್‌ ಸೇರಿಸಿತು. ಶಾರ್ದೂಲ್‌ 88 ಎಸೆತಕ್ಕೆ 41 ರನ್‌ ಕೊಡುಗೆ ನೀಡಿ, ತಮ್ಮ ಆಯ್ಕೆ ಸಮರ್ಥಿಸಿಕೊಂಡರು. ಮೊದಲ ದಿನ ಗಾಯಗೊಂಡು ಕ್ರೀಸ್‌ ತೊರೆದಿದ್ದ ರಿಷಭ್‌, ಶಾರ್ದೂಲ್‌ ಔಟಾದ ಬಳಿಕ ಮತ್ತೆ ಬ್ಯಾಟಿಂಗ್‌ಗೆ ಆಗಮಿಸಿದರು. ಅವರು ಸರಣಿಯಲ್ಲಿ 5ನೇ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. 54 ರನ್‌ ಗಳಿಸಿದ್ದಾಗ ಆರ್ಚರ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಸುಂದರ್‌ 27 ರನ್‌ ಕೊಡುಗೆ ನೀಡಿದರು. ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಟೆಸ್ಟ್‌ನಲ್ಲಿ 8 ವರ್ಷ ಬಳಿಕ 5 ವಿಕೆಟ್‌ ಕಿತ್ತರು.

ಉತ್ತಮ ಆರಂಭ:

ಓಲ್ಡ್‌ ಟ್ರಾಫರ್ಡ್‌ ಪಿಚ್‌ ಭಾರತೀಯ ವೇಗಿಗಳಿಗೆ ನೆರವಾಗಲೇ ಇಲ್ಲ. ವೇಗ ಕಡಿಮೆಯಾಗಿದ್ದ ಪಿಚ್‌ನಲ್ಲಿ ಇಂಗ್ಲೆಂಡ್‌ ಸುಲಭದಲ್ಲಿ ರನ್‌ ಗಳಿಸಿತು. ಮೊದಲ ವಿಕೆಟ್‌ಗೆ 166 ರನ್‌ ಸೇರಿಸಿತು. 32ನೇ ಓವರ್‌ನ ಕೊನೆ ಎಸೆತದಲ್ಲಿ ಜಡೇಜಾ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಜ್ಯಾಕ್‌ ಕ್ರಾವ್ಲಿ 84 ರನ್‌ಗೆ ಔಟಾದರು. ಬೆನ್ ಡಕೆಟ್‌(94) ರನ್ ಬಾರಿಸಿ ಅನ್ಶೂಲ್ ಕಂಬೋಜ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಓಲಿ ಪೋಪ್ ಹಾಗೂ ಜೋ ರೂಟ್ ಮೂರನೇ ವಿಕೆಟ್‌ಗೆ ಮುರಿಯದ 28 ರನ್‌ಗಳ ಜತೆಯಾಟವಾಡುವ ಮೂಲಕ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಓಲಿ ಪೋಪ್ 20 ರನ್ ಹಾಗೂ ಜೋ ರೂಟ್ 11 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದುಕೊಂಡಿದ್ದಾರೆ.

ಸ್ಕೋರ್‌: ಭಾರತ 358/10 (ರಿಷಭ್ 54, ಶಾರ್ದೂಲ್‌ 41, ಸ್ಟೋಕ್ಸ್ 5-72, ಆರ್ಚರ್‌ 3-73), ಇಂಗ್ಲೆಂಡ್ 225/2 (2ನೇ ದಿನದಂತ್ಯಕ್ಕೆ) (ಡಕೆಟ್‌ 94, ಕ್ರಾವ್ಲಿ 84, ಜಡೇಜಾ 37/1)

ಕ್ರಿಕೆಟ್‌ ಮೂಲಕ ಭಾರತ, ಬ್ರಿಟನ್‌ ಸಂಬಂಧದ ಬಗ್ಗೆ ಪ್ರಧಾನಿ ಮೋದಿ ವರ್ಣನೆ

ಲಂಡನ್‌: ಬ್ರಿಟನ್‌ ಜೊತೆಗಿನ ಭಾರತದ ಸಂಬಂಧವನ್ನು ಬಣ್ಣಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಕೆಟ್‌ಅನ್ನು ಉದಾಹರಣೆಯಾಗಿ ಬಳಸಿದ್ದಾರೆ. ಎರಡು ದೇಶಗಳಿಗೂ ಕ್ರಿಕೆಟ್‌ ಕೇವಲ ಒಂದು ಆಟವಲ್ಲ, ಅದು ಉತ್ಸಾಹ ಎಂದಿದ್ದಾರೆ.

ಬ್ರಿಟನ್‌ ಪ್ರವಾಸದಲ್ಲಿರುವ ಮೋದಿ ಅವರು ಅಲ್ಲಿನ ಪ್ರಧಾನಿ ಕೀರ್‌ ಸ್ಟಾರ್ಮರ್‌ ಜೊತೆ ಮಾತುಕತೆ ನಡೆಸಿದರು. ಈ ಬಗ್ಗೆ ಮಾಧ್ಯಮ ಪ್ರಕಟನೆ ಬಿಡುಗಡೆ ಮಾಡಿರುವ ಅವರು, ‘ಕ್ರಿಕೆಟ್ ಭಾರತ-ಬ್ರಿಟನ್‌ ಪಾಲುದಾರಿಕೆಗೆ ಒಂದು ಉತ್ತಮ ರೂಪಕ. ಕೆಲವೊಮ್ಮೆ ಸ್ವಿಂಗ್ ಇರಬಹುದು, ಇಲ್ಲದೇ ಇರಬಹುದು. ಆದರೆ ನಾವು ಯಾವಾಗಲೂ ನೇರ ಬ್ಯಾಟ್‌ನಲ್ಲಿ ಆಡುತ್ತೇವೆ. ಹೆಚ್ಚಿನ ಸ್ಕೋರ್‌ ಹಾಗೂ ಉತ್ತಮ ಜೊತೆಯಾಟ ನಿರ್ಮಿಸಲು ನಾವು ಬದ್ಧರಾಗಿದ್ದೇವೆ’ ಎಂದು ತಿಳಿಸಿದ್ದಾರೆ.

ಮೋದಿ ಹಾಗೂ ಸ್ಟಾರ್ಮರ್‌ ಬರ್ಮಿಂಗ್‌ಹ್ಯಾಮ್‌ ಸ್ಟ್ರೀಕ್‌ ಕ್ರಿಕೆಟ್‌ ಕ್ಲಬ್‌ ಆಟಗಾರ್ತಿಯರ ಜೊತೆ ಮಾತುಕತೆಯನ್ನೂ ನಡೆಸಿದರು. ಈ ವೇಳೆ ಇಬ್ಬರಿಗೂ ಕ್ರಿಕೆಟ್‌ ಬ್ಯಾಟ್‌, ಜೆರ್ಸಿ ಉಡುಗೊರೆ ನೀಡಲಾಯಿತು.