ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ರಿಷಭ್ ಪಂತ್ ಗಾಯಗೊಂಡು ಹೊರ ನಡೆದಿದ್ದಾರೆ. ಆದರೆ ಇಂಗ್ಲೆಂಡ್‌ನಲ್ಲಿ 1000 ಟೆಸ್ಟ್ ರನ್ ಗಳಿಸಿದ ಮೊದಲ ವಿದೇಶಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದ್ದಾರೆ.  

ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಫಾರ್ಮ್‌ನಲ್ಲಿರುವ ವಿಕೆಟ್ ಕೀಪರ್ ರಿಷಭ್ ಪಂತ್ ಗಾಯಗೊಂಡು ಹೊರ ನಡೆದಿದ್ದಾರೆ. 37 ರನ್ ಗಳಿಸಿದ್ದಾಗ ಕ್ರಿಸ್ ವೋಕ್ಸ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡಲು ಯತ್ನಿಸುವಾಗ ರಿಷಭ್ ಪಂತ್ ಕಾಲಿಗೆ ಪೆಟ್ಟಾಯಿತು. ಪಂತ್ ಕಾಲಿನ ಬೆರಳಿಗೆ ಪೆಟ್ಟಾಗಿದ್ದು, ಊದಿಕೊಂಡು ರಕ್ತ ಸೋರಿತು. ನಡೆಯಲು ಕಷ್ಟಪಟ್ಟ ಪಂತ್‌ರನ್ನು ಕಾರ್ಟ್‌ನಲ್ಲಿ ಕರೆದೊಯ್ಯಲಾಯಿತು. ಅವರು ಯಾವಾಗ ಮೈದಾನಕ್ಕೆ ಮರಳುತ್ತಾರೆ ಎಂಬುದಕ್ಕೆ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.

ಇದೇ ವೇಳೆ ರಿಷಭ್ ಪಂತ್ ಒಂದು ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್‌ನಲ್ಲಿ 1000 ಟೆಸ್ಟ್ ರನ್ ಗಳಿಸಿದ ಮೊದಲ ವಿದೇಶಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 24ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್‌ನಲ್ಲಿ 1000 ರನ್ ಗಳಿಸಿದ ಆರನೇ ಭಾರತೀಯ ಆಟಗಾರ ಕೂಡ ಪಂತ್. ಇಂಗ್ಲೆಂಡ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ 778, ಆಸ್ಟ್ರೇಲಿಯಾದ ರಾಡ್‌ ಮಾರ್ಷ್‌ 773, ದ.ಆಫ್ರಿಕಾದ ಜಾನ್‌ ವೇಟ್‌ 684, ಆಸ್ಟ್ರೇಲಿಯಾದ ಇಯಾನ್‌ ಹೀಲಿ 624 ರನ್‌ ಗಳಿಸಿದ್ದಾರೆ.

Scroll to load tweet…

89 ಸಿಕ್ಸರ್‌: ರೋಹಿತ್‌ ದಾಖಲೆ ಮುರಿದ ಪಂತ್‌

ಭಾರತ ಪರ ಟೆಸ್ಟ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ಪಂತ್‌, ರೋಹಿತ್‌ ಶರ್ಮಾರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ. ಪಂತ್‌ 89 ಸಿಕ್ಸರ್‌ ಬಾರಿಸಿದ್ದು, 88 ಸಿಕ್ಸರ್‌ ಬಾರಿಸಿರುವ ರೋಹಿತ್‌ರನ್ನು ಹಿಂದಿಕ್ಕಿದ್ದಾರೆ. ವೀರೇಂದ್ರ ಸೆಹ್ವಾಗ್‌ 90 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಇನ್ನು ಕನ್ನಡಿಗ ಕೆ.ಎಲ್. ರಾಹುಲ್ ಕೂಡ ಇಂಗ್ಲೆಂಡ್‌ನಲ್ಲಿ 1000 ರನ್‌ಗಳ ಗಡಿ ದಾಟಿದರು. 25 ಇನ್ನಿಂಗ್ಸ್‌ಗಳಲ್ಲಿ ರಾಹುಲ್ ಈ ಸಾಧನೆ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಇಂಗ್ಲೆಂಡ್ ನೆಲದಲ್ಲಿ ಒಂದು ಸಾವಿರ ರನ್ ಪೂರೈಸಿದ ಎರಡನೇ ಭಾರತೀಯ ಆರಂಭಿಕ ಬ್ಯಾಟರ್ ಎನ್ನುವ ಹಿರಿಮೆಗೆ ರಾಹುಲ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಸುನಿಲ್ ಗವಾಸ್ಕರ್ ಈ ಸಾಧನೆ ಮಾಡಿದ್ದರು.

ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್. 30 ಇನ್ನಿಂಗ್ಸ್‌ಗಳಲ್ಲಿ 1,575 ರನ್ ಗಳಿಸಿದ್ದಾರೆ. ರಾಹುಲ್ ದ್ರಾವಿಡ್ ಎರಡನೇ ಸ್ಥಾನದಲ್ಲಿದ್ದಾರೆ. 23 ಇನ್ನಿಂಗ್ಸ್‌ಗಳಲ್ಲಿ 1367 ರನ್ ಗಳಿಸಿದ್ದಾರೆ. ಸುನಿಲ್ ಗವಾಸ್ಕರ್ 28 ಇನ್ನಿಂಗ್ಸ್‌ಗಳಲ್ಲಿ 1152 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 33 ಇನ್ನಿಂಗ್ಸ್‌ಗಳಲ್ಲಿ 1096 ರನ್ ಗಳಿಸಿದ್ದಾರೆ. ರವೀಂದ್ರ ಜಡೇಜ 29 ಇನ್ನಿಂಗ್ಸ್‌ಗಳಲ್ಲಿ 969 ರನ್ ಗಳಿಸಿದ್ದಾರೆ.

ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಿಂದ ಒಂದು ಬದಲಾವಣೆಯೊಂದಿಗೆ ಇಂಗ್ಲೆಂಡ್ ನಾಲ್ಕನೇ ಟೆಸ್ಟ್‌ಗೆ ಇಳಿದಿದೆ. ಗಾಯಗೊಂಡಿರುವ ಶೋಯೆಬ್ ಬಶೀರ್ ಬದಲಿಗೆ ಲಿಯಾಮ್ ಡಾಸನ್ ತಂಡ ಸೇರಿದ್ದಾರೆ. ಭಾರತ ಮೂರು ಬದಲಾವಣೆಗಳನ್ನು ಮಾಡಿದೆ. ಕರುಣ್ ನಾಯರ್ ಬದಲಿಗೆ ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಶಾರ್ದೂಲ್ ಠಾಕೂರ್ ಮತ್ತು ಆಕಾಶ್ ದೀಪ್ ಬದಲಿಗೆ ಅನ್ಶೂಲ್ ಕಾಂಬೋಜ್ ತಂಡ ಸೇರಿದ್ದಾರೆ.

ತೆಂಡುಲ್ಕರ್‌-ಆ್ಯಂಡರ್‌ಸನ್‌ ಟ್ರೋಫಿಯಲ್ಲಿ ಸರಣಿ ಸೋಲು ತಪ್ಪಿಸಿಕೊಳ್ಳುವ ಗುರಿ ಹೊಂದಿರುವ ಭಾರತ, ಬುಧವಾರ ಇಲ್ಲಿ ಆರಂಭಗೊಂಡ ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ನಲ್ಲಿ ಮೊದಲ ದಿನ ಗೌರವ ಮೊತ್ತ ದಾಖಲಿಸಿದೆ. ಮೊದಲ ದಿನದಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 260 ರನ್‌ ಕಲೆಹಾಕಿದ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಲು ಎದುರು ನೋಡುತ್ತಿದೆ.

14ನೇ ಟಾಸ್‌ ಸೋಲು: ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 14 ಪಂದ್ಯಗಳಲ್ಲಿ ಟಾಸ್‌ ಸೋತಿದೆ. ಇದೊಂದು ವಿಶ್ವ ದಾಖಲೆ. ವಿಂಡೀಸ್‌ ಸತತ 12 ಟಾಸ್‌ ಸೋತಿತ್ತು.