ಬ್ರಿಟಿಷ್ ಮದ್ಯ ತಯಾರಕ ಡಿಯಾಜಿಯೋ ತನ್ನ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪಾಲನ್ನು ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ತಂಡದ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಬೆಂಗಳೂರು: ಬ್ರಿಟಿಷ್ ಮದ್ಯ ತಯಾರಿಕಾ ದೈತ್ಯ ಡಿಯಾಜಿಯೋ ಪಿಎಲ್‌ಸಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಪಾಲನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮಾರಾಟ ಮಾಡಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದ್ದು, ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
ಆರ್‌ಸಿಬಿ ತಂಡವು ಅಹಮದಾಬಾದ್‌ನಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿ ಚಾಂಪಿಯನ್ ಆಗುವ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ನಡೆದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಎಂ ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ನೂಕುನುಗ್ಗಲಿನಲ್ಲಿ 11 ಮಂದಿ ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ಆರ್‌ಸಿಬಿ ಮಾರಾಟದ ಸುದ್ದಿ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಡಿಯಾಜಿಯೋ ತನ್ನ ಭಾರತೀಯ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮೂಲಕ ಆರ್‌ಸಿಬಿಯ ಮಾಲೀಕತ್ವವನ್ನು ಪಡೆದುಕೊಂಡಿದೆ. ಈ ತಂಡದ ಮೌಲ್ಯವನ್ನು ಸುಮಾರು 2 ಬಿಲಿಯನ್ ಡಾಲರ್‌ಗೆ (ಸುಮಾರು 16,700 ಕೋಟಿ ರೂ.) ನಿರ್ಧರಿಸಲಾಗುವ ಸಾಧ್ಯತೆಯಿದೆ ಎಂದು ಬ್ಲೂಮ್‌ಬರ್ಗ್ ವರದಿಯೊಂದು ಉಲ್ಲೇಖಿಸಿದೆ.
ಆರ್‌ಸಿಬಿ ಇತ್ತೀಚೆಗೆ 2025ರ ಐಪಿಎಲ್ ಟ್ರೋಫಿಯನ್ನು ಮೊದಲ ಬಾರಿಗೆ ಗೆದ್ದುಕೊಂಡಿದ್ದು, ಇದು ತಂಡದ ಬ್ರಾಂಡ್ ಮೌಲ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ. ಆದರೆ, ಭಾರತದ ಆರೋಗ್ಯ ಸಚಿವಾಲಯವು ಐಪಿಎಲ್‌ನಲ್ಲಿ ಮದ್ಯ ಮತ್ತು ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ನಿಷೇಧಿಸಲು ಒತ್ತಾಯಿಸುತ್ತಿರುವುದು ಡಿಯಾಜಿಯೋಗೆ ಒಂದು ಪ್ರಮುಖ ಕಾರಣವಾಗಿರಬಹುದು. ಇದರ ಜೊತೆಗೆ, ಅಮೆರಿಕಾದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರೀಮಿಯಂ ಮದ್ಯದ ಮಾರಾಟ ಕಡಿಮೆಯಾಗಿರುವುದು ಕಂಪನಿಯನ್ನು ತನ್ನ ಪ್ರಮುಖ ವ್ಯವಹಾರದ ಮೇಲೆ ಕೇಂದ್ರೀಕರಿಸಲು ಪ್ರೇರೇಪಿಸಿದೆ ಎನ್ನಲಾಗುತ್ತಿದೆ.
2008ರಲ್ಲಿ ಆರ್‌ಸಿಬಿಯನ್ನು ಉದ್ಯಮಿ ವಿಜಯ್ ಮಲ್ಯ ತಮ್ಮ ಕಿಂಗ್‌ಫಿಶರ್ ಏರ್‌ಲೈನ್ಸ್ ಮೂಲಕ 111.6 ಮಿಲಿಯನ್ ಡಾಲರ್‌ಗೆ ಖರೀದಿಸಿದ್ದರು. ಮಲ್ಯರ ವ್ಯಾಪಾರ ಸಾಮ್ರಾಜ್ಯ ಕುಸಿದ ನಂತರ, ಡಿಯಾಜಿಯೋ ಯುನೈಟೆಡ್ ಸ್ಪಿರಿಟ್ಸ್‌ನ್ನು ಸ್ವಾಧೀನಪಡಿಸಿಕೊಂಡು ಆರ್‌ಸಿಬಿಯ ಮಾಲೀಕತ್ವವನ್ನು ಪಡೆದುಕೊಂಡಿತು. ಈಗ, ತಂಡದ ಇತ್ತೀಚಿನ ಯಶಸ್ಸಿನಿಂದಾಗಿ, ಡಿಯಾಜಿಯೋ ಈ ಒಪ್ಪಂದದಿಂದ ಗಣನೀಯ ಲಾಭವನ್ನು ಗಳಿಸಲು ಯೋಜಿಸುತ್ತಿದೆ. ಈ ಸುದ್ದಿಯಿಂದ ಯುನೈಟೆಡ್ ಸ್ಪಿರಿಟ್ಸ್‌ನ ಷೇರುಗಳು ಶೇ. 3.3ರಷ್ಟು ಏರಿಕೆಯಾಗಿದ್ದು, ಐದು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿವೆ. ಆದಾಗ್ಯೂ, ಈ ವಹಿವಾಟಿನ ಕುರಿತು ಅಂತಿಮ ತೀರ್ಮಾನವನ್ನು ಇನ್ನೂ ಕೈಗೊಳ್ಳಲಾಗಿಲ್ಲ, ಮತ್ತು ಡಿಯಾಜಿಯೋ ತನ್ನ ಮಾಲೀಕತ್ವವನ್ನು ಉಳಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಮತ್ತೆ ಮಲ್ಯ ತೆಕ್ಕೆಗೆ ಬರುತ್ತಾ ಆರ್‌ಸಿಬಿ?
ಸಾಲದ ಸುಳಿಗೆ ಸಿಲುಕಿ ಭಾರತವನ್ನೇ ತೊರೆದಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರ ಇತ್ತೀಚಿಗಿನ ಸಂದರ್ಶನವೊಂದ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲವನ್ನೇ ಹುಟ್ಟುಹಾಕಿದೆ. ವಿಜಯ್ ಮಲ್ಯ ಅವರು ತಾವು ಭಾರತದಲ್ಲಿ ಮಾಡಿರುವ ಸಾಲ 6203 ಕೋಟಿ ರುಪಾಯಿ ಎಂದು ಹೇಳಿಕೊಂಡಿದ್ದಾರೆ. ಆದರೆ ಸರ್ಕಾರ, ಮಲ್ಯ ಮಾಡಿರುವ ಸಾಲ 9 ಸಾವಿರ ಕೋಟಿ ರುಪಾಯಿ ಎಂದು ಹೇಳಿಕೊಂಡಿದೆ. ವಿಜಯ್ ಮಲ್ಯ ಭಾರತದಿಂದ ಪಲಾಯನಗೊಂಡ ಬೆನ್ನಲ್ಲೇ ಮಲ್ಯ ಅವರ ಸುಮಾರು 14 ಸಾವಿರ ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಇದೆಲ್ಲದರ ಹೊರತಾಗಿಯೂ ವಿಜಯ್ ಮಲ್ಯ, ವಿದೇಶದಲ್ಲಿ ಸಾಕಷ್ಟು ಆಸ್ತಿ ಹಾಗೂ ಸಂಪತ್ತು ಹೊಂದಿದ್ದಾರೆ. ಹೀಗಾಗಿ ಒಂದು ವೇಳೆ ಆರ್‌ಸಿಬಿಯನ್ನು ಡಿಯಾಜಿಯೋ ಮಾರಾಟ ಮಾಡಲು ಮುಂದಾದರೇ, ವಿಜಯ್ ಮಲ್ಯ ಮತ್ತೆ ಆರ್‌ಸಿಬಿಯ ಮೇಲೆ ಹಿಡಿತ ಸಾಧಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಚೊಚ್ಚಲ ಟ್ರೋಫಿ ಗೆದ್ದ ಆರ್‌ಸಿಬಿ:
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಅಂತರದಲ್ಲಿ ರೋಚಕವಾಗಿ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಆರ್‌ಸಿಬಿ ತಂಡವು ಯಶಸ್ವಿಯಾಗಿತ್ತು.