ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣದಲ್ಲಿ ಬಂಧಿತರಾದ ಆರ್‌ಸಿಬಿ ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್‌ ಸಂಸ್ಥೆ DNA ಸಿಬ್ಬಂದಿ ಸೇರಿ ಐವರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೆಂಗಳೂರು (ಜೂ. 06): ಚಿನ್ನಸ್ವಾಮಿ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್‌ ಸಂಸ್ಥೆ DNA ಸಿಬ್ಬಂದಿ ಸೇರಿ ಐವರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣದಲ್ಲಿ ಬಂಧಿತರಾದ ಐವರು ಆರೋಪಿಗಳನ್ನು ಇಂದು 41ನೇ ಎಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಕಬ್ಬನ್ ಪಾರ್ಕ್ ಪೊಲೀಸರು DN ಡೈರೆಕ್ಟರ್ ಸುನೀಲ್ ಮ್ಯಾಥ್ಯೂ, DNA ಮ್ಯಾನೇಜ್‌ಮೆಂಟ್ ಮ್ಯಾನೇಜರ್ ಕಿರಣ್, DNA ಸಿಬ್ಬಂದಿ ಸುಮಂತ್, ಹಾಗೂ RCB ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯಿದ್ದರು.

ನ್ಯಾಯಾಲಯದ ವಿಚಾರಣೆ:

ನ್ಯಾಯಾಧೀಶರು ಪ್ರತಿಯೊಬ್ಬ ಆರೋಪಿಗೆ ಮಾಹಿತಿ ನೀಡಿದ ನಂತರ, 'ನಿಮ್ಮ ಪರ ವಕೀಲರಿದ್ದಾರೆನಾ? ಬಂಧನದ ಬಗ್ಗೆ ನಿಮ್ಮ ಮನೆಯವರಿಗೆ ತಿಳಿಸಿದ್ದೀರಾ?' ಎಂದು ಪ್ರಶ್ನಿಸಿದರು. ಆರೋಪಿಗಳು ಹೌದು ಎಂದು ಉತ್ತರಿಸಿದರು. ಪ್ರಕರಣದ ತನಿಖಾ ಅಧಿಕಾರಿಯಾಗಿ ಇನ್ಸ್‌ಪೆಕ್ಟರ್ ರವಿ ಮಾಹಿತಿ ನೀಡಿದ್ದು, ಸಿಎಂ ಸೂಚನೆಯ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಲಾಯಿತು.

ವಕೀಲರ ವಾದ:

ಆರೋಪಿಗಳ ಪರ ವಕೀಲರು, 'ಇದೊಂದು ಕಾನೂನು ಬಾಹಿರ ಬಂಧನವಾಗಿದೆ. ಸರ್ಕಾರ ತನ್ನ ಮೇಲಿನ ಆರೋಪಗಳನ್ನ ಮುಚ್ಚಿಹಾಕಲು ಈ ಕ್ರಮ ಕೈಗೊಂಡಿದೆ. ಪೊಲೀಸರು ತಡವಾಗಿ ಎಫ್‌ಐಆರ್ ದಾಖಲಿಸಿ, ಸರ್ಕಾರದ ಒತ್ತಡದಡಿ ಇಂದು ರಾತ್ರಿವೇಳೆಗೆ ಬಂಧನ ಮಾಡಿದ್ದಾರೆ. ಸರ್ಕಾರ ಹಾಗೂ ಪೊಲೀಸರು ಈ ದುರಂತಕ್ಕೆ ಹೊಣೆಗಾರರು. ಈ ಕಾರ್ಯಕ್ರಮಕ್ಕೆ ಸರಿಯಾದ ಅನುಮತಿ ಇಲ್ಲದೆ, ಭದ್ರತೆ ನೀಡದೇ ನಡೆಸಿದ ಈವೆಂಟ್ ಇದಾಗಿತ್ತು. 'ಪೋಲೀಸರು ಪರ್ಮಿಷನ್ ಕೊಟ್ಟಿದ್ದರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ. ಇದು ಸಂಪೂರ್ಣ ಸರ್ಕರದ ಆಯೋಜನೆಯಾಗಿತ್ತು' ಎಂದು ಆರೋಪಿಸಿದರು.

ನ್ಯಾಯಾಧೀಶರ ಪ್ರಶ್ನೆಗಳು:

ನ್ಯಾಯಾಧೀಶರು, 'ನೀವು ಒಳಗಡೆ ಸಲೆಬ್ರೇಷನ್ ಮಾಡುತ್ತಿದ್ದಾಗ ಹೊರಗಡೆ ಜನರು ಸಾಯುತ್ತಿದ್ದಾರೆಂಬ ವಿಷಯ ಗೊತ್ತಿತ್ತಾ?' ಎಂದು ಗಂಭೀರವಾಗಿ ಪ್ರಶ್ನಿಸಿದರು. ಪಿಪಿಯು 'ವಿಧಾನಸೌಧದ ಕಾರ್ಯಕ್ರಮ ಮಾತ್ರ ಸರಕಾರದಿಂದ ಆಯೋಜನೆಗೊಂಡಿತ್ತು. ಆದರೆ, ಗ್ರೌಂಡ್ ಬಳಿ ಜನ ಸತ್ತಿದ್ದು, ಅದಕ್ಕೆ ಈವೆಂಟ್ ಆಯೋಜಕರು ಹೊಣೆ' ಎಂದು ಪ್ರತಿಪಾದಿಸಿದರು.

ನ್ಯಾಯಾಂಗ ಬಂಧನ: ಎಲ್ಲಾ ಸಾಕ್ಷ್ಯ ವಿಚಾರಣೆಗಳ ಬಳಿಕ, ನ್ಯಾಯಾಲಯ ಆರೋಪಿಗಳಿಗೆ ಜೂನ್ 19ರವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.