ಕ್ರಿಕೆಟಿಗ ಯಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ ವರ್ಮಾ ಬಾಂದ್ರಾ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದಿದ್ದಾರೆ. 18 ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಹೊಂದಾಣಿಕೆಯ ಕೊರತೆಯಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ. ಜೀವನಾಂಶದ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ಧನಶ್ರೀ ಕುಟುಂಬ ನಿರಾಕರಿಸಿದೆ. 2020ರಲ್ಲಿ ವಿವಾಹವಾಗಿದ್ದ ಈ ಜೋಡಿ, ಒಂದು ವರ್ಷದಿಂದ ವೈಮನಸ್ಸಿನಿಂದ ಬಳಲುತ್ತಿತ್ತು. ಚಹಲ್ ಮುಂಬರುವ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಲಿದ್ದಾರೆ.

ಮುಂಬೈ: ಭಾರತದ ತಾರಾ ಕ್ರಿಕೆಟಿಗ ಯಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ ವರ್ಮಾ ನಡುವಿನ 4 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದ್ದು, ಬಾಂದ್ರಾ ಕೌಟುಂಬಿಕ ನ್ಯಾಯಾಲಯದಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಚಹಲ್ ಮತ್ತು ಧನಶ್ರೀ ಗುರುವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರಾಗಿ ವಿಚ್ಛೇದನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು ಎಂದು ವರದಿಯಾಗಿದೆ. 

ನ್ಯಾಯಾಧೀಶರು ಕೆಲ ಹೊತ್ತು ದಂಪತಿಗೆ ಕೌನ್ಸೆಲಿಂಗ್‌ ನಡೆಸಿದ್ದು, ಈ ವೇಳೆ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಕಳೆದ 18 ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಹೊಂದಾಣಿಕೆಯ ಸಮಸ್ಯೆಯಿಂದ ವಿಚ್ಛೇದನಕ್ಕೆ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಇನ್ನು ಕೆಲ ದಿನಗಳ ಹಿಂದಷ್ಟೇ ಯುಜುವೇಂದ್ರ ಚಹಲ್ ಅವರಿಂದ ಜೀವನಾಂಶ ರೂಪದಲ್ಲಿ ಧನಶ್ರೀ ವರ್ಮಾ 60 ಕೋಟಿ ರುಪಾಯಿ ಪಡೆದುಕೊಳ್ಳಲಿದ್ದಾರೆ ಎನ್ನುವ ಗಾಳಿ ಸುದ್ದಿ ಹರಿದಾಡಿತ್ತು. ಈ ಕುರಿತಂತೆ ಧನಶ್ರೀ ವರ್ಮಾ ಕುಟುಂಬದವರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.

ಇಂಡೋ-ಪಾಕ್ ಹೈವೋಲ್ಟೇಜ್ ಫೈಟ್; ದುಬೈನಲ್ಲಿ ಪಾಕ್‌ ಎದುರು ಟೀಂ ಇಂಡಿಯಾ ರೆಕಾರ್ಡ್ಸ್ ಹೇಗಿದೆ?

"ಜೀವನಾಂಶದ ಕುರಿತಂತೆ ಹರಿದಾಡುತ್ತಿರುವ ಅಂಕಿ-ಅಂಶಗಳು ನಿಜಕ್ಕೂ ಆಧಾರರಹಿತವಾದವು. ನಾವಿದನ್ನು ತೀವ್ರವಾಗಿ ಖಂಡಿಸುತ್ತೇವೆ. ನಾವು ಈ ಕುರಿತಂತೆ ನಿಮ್ಮೆಲ್ಲರಿಗೂ ಸ್ಪಷ್ಟನೆ ನೀಡಲು ಬಯಸುತ್ತೇವೆ. ನಾವು ಅಂತಹ ಮೊತ್ತವನ್ನು ಎಂದಿಗೂ ಕೇಳಿಲ್ಲ, ಬೇಡಿಕೆ ಇಟ್ಟಿಲ್ಲ ಹಾಗೂ ಬೇಡಿಕೆ ಇಡುವುದೂ ಇಲ್ಲ. ಈ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ" ಎಂದು ಧನಶ್ರೀ ವರ್ಮಾ ಕುಟುಂಬಸ್ಥರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ 2020ರ ಆಗಸ್ಟ್‌ನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದಾದ ಬಳಿಕ ಅದೇ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

ಕಳೆದೊಂದು ವರ್ಷದಿಂದ ಇಬ್ಬರ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎಂದು ಹೇಳಲಾಗುತ್ತಿತ್ತು. ಈ ನಡುವೆ ಕೆಲ ದಿನಗಳಿಂದ ಚಹಲ್‌ ಸಾಮಾಜಿಕ ತಾಣಗಳಲ್ಲಿ ನಿಗೂಢ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, ವಿಚ್ಛೇದನ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡುವಂತೆ ಮಾಡಿತ್ತು.

'ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಎದುರು ಪಾಕ್ ಗೆಲ್ಲಲಿ': ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಅಚ್ಚರಿ ಮಾತು!

ಪಂಜಾಬ್ ಪರ ಕಣಕ್ಕಿಳಿಯಲು ರೆಡಿಯಾದ ಚಹಲ್:

ಟೀಂ ಇಂಡಿಯಾ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್, ಕೌಟುಂಬಿಕ ಸಮಸ್ಯೆಯ ನಡುವೆಯೂ ಮಾರ್ಚ್‌ 22ರಿಂದ ಆರಂಭವಾಗಲಿರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಪ್ರತಿಭಾನ್ವಿತ ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರನ್ನು ಪಂಜಾಬ್ ಕಿಂಗ್ಸ್‌ ಫ್ರಾಂಚೈಸಿಯು ಬರೋಬ್ಬರಿ 18 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಈ ಮೂಲಕ ಐಪಿಎಲ್ ಹರಾಜಿನ ಇತಿಹಾಸದಲ್ಲೇ 18 ಕೋಟಿ ರುಪಾಯಿ ಪಡೆದ ಮೊದಲ ಸ್ಪಿನ್ನರ್ ಎನ್ನುವ ಹೆಗ್ಗಳಿಕೆಗೆ ಚಹಲ್ ಪಾತ್ರರಾಗಿದ್ದರು. ಇದೀಗ ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಪಂಜಾಬ್ ಕಿಂಗ್ಸ್‌ ತಂಡಕ್ಕೆ ಚಹಲ್ ಸೇರ್ಪಡೆ ಆನೆ ಬಲ ತಂದುಕೊಟ್ಟಿದೆ. ಇನ್ನು ಶ್ರೇಯಸ್ ಅಯ್ಯರ್ ಕೂಡಾ ಇದೇ ತಂಡದಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.